ತುಮಕೂರು
ತುಮಕೂರು ನಗರದಲ್ಲಿರುವ ಖಾಲಿ ನಿವೇಶನಗಳು ಸ್ವಚ್ಛವಾಗಿಲ್ಲದಿದ್ದರೆ, ಅವುಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ತುಮಕೂರು ಮಹಾನಗರ ಪಾಲಿಕೆಯು ತೀರ್ಮಾನ ಕೈಗೊಂಡಿದೆ.
ಜನವರಿ ತಿಂಗಳಿನಲ್ಲಿ ನಡೆದಿರುವ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಇಂತಹುದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮಿತಿಯ ಆಗಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನಗರಾದ್ಯಂತ ಖಾಲಿ ನಿವೇಶನಗಳು ಅನೈರ್ಮಲ್ಯದಿಂದ ಕೂಡಿರುವ ಬಗ್ಗೆ ಸಭೆಯಲ್ಲಿ ಸಮಿತಿ ಸದಸ್ಯರುಗಳು ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಇಂತಹ ನಿವೇಶನಗಳನ್ನು ಗುರುತಿಸಿ, ಸ್ವಚ್ಚಗೊಳಿಸಿ ಮಾಲೀಕರ ಮೊಬೈಲ್ ಸಂಖ್ಯೆಯನ್ನು ಹಾಕುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು ನಿವೇಶನದಾರರು ಇದನ್ನು ನಿರ್ಲಕ್ಷಿಸಿದರೆ, ಅಂತಹ ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ, ಆ ನಿವೇಶನದಲ್ಲಿ ಮಹಾನಗರ ಪಾಲಿಕೆಯ ಸ್ವತ್ತೆಂಬ ನಾಮಫಲಕ ಹಾಕಿಸಲು ನಿರ್ಣಯಿಸಲಾಯಿತು. ನಿವೇಶನ ಸ್ವಚ್ಚತೆಗೆ ಆದ ವೆಚ್ಚವನ್ನು ಸದರಿ ಮಾಲೀಕರಿಂದ ಸಂಗ್ರಹಿಸಲು ಸಹ ತೀರ್ಮಾನಿಸಲಾಯಿತು.
ಇದೇ ರೀತಿ ನಗರದಲ್ಲಿರುವ ಎಲ್ಲ ಉದ್ಯಾನವನಗಳನ್ನು ಸಹ ಗುರುತಿಸಿ ಅದರ ಅಳತೆ ಮತ್ತು ವಿಸ್ತೀರ್ಣದ ಬಗ್ಗೆ ಚಕ್ಕುಬಂದಿ ಸಹಿತ ನಾಮಫಲಕ ಹಾಕಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಜೊತೆಯಲ್ಲಿ ಕೆಲವೊಂದು ಉದ್ಯಾನವನಗಳಲ್ಲಿ ಟಾಟ್ ಲಾಟ್ ಎಂಬ ಸ್ಥಳವನ್ನು ಬಿಡಲಾಗಿದ್ದು, ಅದನ್ನು ಸಹ ಗುರುತಿಸಿ ನಾಮಫಲಕ ಹಾಕಿಸಲು ನಿರ್ಧರಿಸಲಾಯಿತು. ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ದೊರಕಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ