ಇಂಜನಿಯರ್ ಕಿರಣ್ ಅಮಾನತ್ತಿಗೆ ಆಗ್ರಹ

ಚಿಕ್ಕನಾಯಕನಹಳ್ಳಿ

       ತಾಲ್ಲೂಕಿನ ಹಳ್ಳಿಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಪರಿಹರಿಸಬೇಕಾದ ಇಂಜನಿಯರ್ ಕಿರಣ್, ಗೋವಾ ರೆಸಾರ್ಟ್‍ನಲ್ಲಿ ಗುತ್ತಿಗೆದಾರರ ಜೊತೆ ಸೇರಿ ಲಂಚದ ಹಣದಲ್ಲಿ ಮೋಜುಮಸ್ತಿ ಮಾಡಿದ್ದಾರೆ, ಬರಗಾಲದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿ ಪಾರ್ಟಿ ಮಾಡುತ್ತಿರುವುದು ತಾಲ್ಲೂಕಿನ ಶೋಚನೀಯ ಸಂಗತಿಯಾಗಿದ್ದು ಈ ಅಧಿಕಾರಿಯನ್ನು ಸಿಇಓ ಅಮಾನತ್ತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

      ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ.ಸದಸ್ಯ ಮಹಲಿಂಗಯ್ಯ, ತಾಲ್ಲೂಕಿಗೆ ಎಸ್.ಟಿ.ಪಿ ಹಾಗೂ ಎನ್.ಆರ್.ಡಬ್ಲ್ಯೂ ಯೋಜನೆ ಅಡಿಯಲ್ಲಿ 4ಕೋಟಿ 65ಲಕ್ಷ ರೂ ಹಣ ಬಿಡುಗಡೆಯಾಗಿದ್ದರೂ ಅಧಿಕಾರಿಗಳು ಟೆಂಡರ್ ಕರೆಯದೆ ಗುತ್ತಿಗೆಯನ್ನು ತಮಗೆ ಬೇಕಾದವರಿಗೆ ನೀಡಿ ಕಮಿಷನ್ ಪಡೆದು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

       ಜಿ.ಪಂ.ಸದಸ್ಯ ರಾಮಚಂದ್ರಯ್ಯ ಮಾತನಾಡಿ, ಹಂದನಕೆರೆ ಹೋಬಳಿ ಚೌಳಕಟ್ಟೆಯಲ್ಲಿ ಕೊಳವೆ ಬಾವಿಗೆ ಮೋಟಾರ್ ಬಿಡದೆ ಕೇವಲ ಪೈಪ್‍ಲೈನ್ ಮಾಡಿದ್ದಾರೆ, ಬಂಗಾರಗೆರೆ ಪಾಳ್ಯದ ಕೊಳವೆಬಾವಿಗೆ ಮೋಟಾರ್ ಬಿಟ್ಟಿಲ್ಲ ಆದರೆ ಗುತ್ತಿಗೆದಾರರಿಗೆ ಪೂರ್ಣ ಹಣ ಸಂದಾಯ ಮಾಡಿದ್ದಾರೆ, ಇಲಾಖೆಯ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮೊಬೈಲ್‍ಗೆ ಕರೆ ಮಾಡಿದರೆ ಸ್ವೀಕರಿಸದೆ ಬೇಜವಬ್ದಾರಿತನ ತೋರಿಸುತ್ತಿದ್ದಾರೆ ಎಂದು ದೂರಿದರು.

     ಜಿ.ಪಂ.ಸದಸ್ಯ ಕಲ್ಲೇಶ್ ಮಾತನಾಡಿ, ಶೆಟ್ಟಿಕೆರೆ ಹೋಬಳಿಯಲ್ಲಿ 9ತಿಂಗಳಿನಿಂದ ಸರಿಯಾಗಿ ಕುಡಿಯುವ ನೀರಿಲ್ಲ ಜನರು ತೋಟಗಳಿಗೆ ಹೋಗಿ ನೀರು ತರಬೇಕಾಗಿದೆ, ಸೋಮನಹಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿ ಒಂದು ವಾರದಲ್ಲಿ ಕೆಟ್ಟು ಹೋಗಿದೆ, ರಿಪೇರಿಯೂ ಆಗಿಲ್ಲ ಆದರೂ ಗುತ್ತಿಗೆದಾರರಿಗೆ ಕಮಿಷನ್ ಪಡೆದು ಬಿಲ್ಲನ್ನು ನೀಡಿದ್ದಾರೆ ಇದರ ಬಗ್ಗೆ ಸಿ.ಎಸ್.ಹಾಗೂ ಜಿ.ಪಂ.ಅಧ್ಯಕ್ಷರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸಿ.ಎಸ್.ರವರಿಗೆ ದೂರು ನೀಡಿದರೆ ಎಇಇ ಯವರನ್ನೇ ತನಿಖೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ ಇದು ಕಳ್ಳರ ಕೈಗೆ ಬೀಗ ಕೊಟ್ಟಂತೆ ಆಗಿದೆ ಎಂದು ಆರೋಪಿಸಿದರು.

      ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಕೊರೆಯುವಾಗ ಅಧಿಕಾರಿಗಳು ಯಾವ ಜನಪ್ರತಿನಿಧಿಗಳ ಗಮನಕ್ಕೂ ತರುವುದಿಲ್ಲ, 500ರಿಂದ 600 ಅಡಿ ಕೊರೆಸುತ್ತಾರೆ ಆದರೆ ಲೆಕ್ಕದಲ್ಲಿ ಮಾತ್ರ 1000 ಅಡಿ ಕೊರೆದಿದ್ದೇವೆ ಎಂದು ತೋರಿಸುತ್ತಾರೆ ಎಂದು ಆರೋಪಿಸಿದ ಅವರು, ಇಂಜನಿಯರ್ ಸ್ಥಳ ಪರಿಶೀಲಿಸದೆ ಎಲ್ಲೋ ಕುಳಿತುಕೊಂಡು ಎಸ್ಟಿಮೇಟ್ ಮಾಡುತ್ತಾರೆ, ತಾ.ಎಇಇ ರುಕ್ಕಣ್ಣ ಹಾಗೂ ಜೂನಿಯರ್ ಇಂಜನಿಯರ್ ಕಛೇರಿ ಕಿರಣ್ ಕಛೇರಿಗೆ ಬರುವುದಿಲ್ಲ ವಿಚಾರಿಸಿದರೆ ಅಧಿಕಾರಿಗಳು ಫೀಲ್ಡ್‍ಗೆ ಹೋಗಿದ್ದಾರೆ ಎಂದು ಉತ್ತರ ನೀಡುತ್ತಾರೆ ಎಂದರು.

      ತಾಲ್ಲೂಕಿನಲ್ಲಿ ಭೀಕರ ಬರಗಾಲ ಸೃಷ್ಠಿಯಾಗುತ್ತಿದ್ದರೂ ಅಧಿಕಾರಿಗಳು ಸರಿಯಾಗಿ ಕರ್ತವ್ಯ ಮಾಡದೆ ನಿರ್ಲಕ್ಷಿಸಿದ್ದಾರೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲ ಎಂದ ಅವರು ಈಗಾಗಲೇ ಕುಡಿಯುವ ನೀರಾವರಿ ಇಲಾಖೆಯ ಅಧಿಕಾರಿಗಳ ಅವ್ಯವಹಾರದ ವಿರುದ್ದ ಎ.ಸಿ.ಬಿ ಹಾಗೂ ಲೋಕಾಯುಕ್ತರಿಗೆ ದೂರು ನೀಡಿ ಮುಖ್ಯಮಂತ್ರಿಗಳ ಬಳಿಗೆ ಎಲ್ಲಾ ಜಿ.ಪಂ.ಸದಸ್ಯರು ಹೋಗುವುದಾಗಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap