ಹಾವೇರಿ
ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಶಿಫಾರಸ್ಸಿನಂತೆ ನಿಯೋಜಿಸಬೇಕು. ಸದಸ್ಯರಿಗೆ ಬೇಡವಾದ ಅಧಿಕಾರಿಗಳನ್ನು ಬದಲಾಯಿಸಿ ಕಾರ್ಯದರ್ಶಿಗಳಿಗೆ ಗ್ರಾಮ ಪಂಚಾಯತಿಗಳ ಪ್ರಭಾರ ನೀಡಬೇಕು ಎಂದು ಹಲವು ಜಿ.ಪಂ. ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ ಪರಿಣಾಮ ತೀವ್ರ ಚರ್ಚೆಗೆ ಗ್ರಾಸವದಗಿಸಿ ಶಾಸಕ ನೆಹರು ಓಲೇಕಾರ ಸೇರಿದಂತೆ ಹಲವು ಸದಸ್ಯರು ಸಭೆಯಿಂದ ಹೊರನಡೆದು ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾದ ಘಟನೆ ಇಂದಿಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಉದ್ಯೋಗ ಖಾತ್ರಿ ಇಂಜನೀಯರ್‍ಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಕೆಲ ಪಿ.ಡಿ.ಓ.ಗಳು ಕಚೇರಿಗೆ ಬರುವುದಿಲ್ಲ, ಉದ್ಯೋಗ ಖಾತ್ರಿ ಇಂಜನೀಯರ್‍ಗಳು ಗುತ್ತಿಗೆದಾರರಂತೆ ವರ್ತಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ಲಿಗೆ ರುಜುಮಾಡಲು ಕಾಮಗಾರಿ ಕೆಲಸದಲ್ಲಿ ತಮ್ಮನ್ನು ಅನಧಿಕೃತವಾಗಿ ಪಾಲುದಾರ ಗುತ್ತಿಗೆದಾರರನ್ನಾಗಿ ಮಾಡಿಕೊಳ್ಳಲು ಷರತ್ತು ಹಾಕುತ್ತಿದ್ದಾರೆ, ಇದು ನಿಯಮಬಾಹೀರವಾಗಿದೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಂಡು ಕಡಿವಾಣಹಾಕಬೇಕು ಎಂದು ಸದಸ್ಯರು ಗಂಭೀರವಾದ ಆರೋಪವನ್ನು ಸಭೆಯಲ್ಲಿ ಮಾಡಿದರು.
ಕೆಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಇಂತಹ ಅಧಿಕಾರಿಗಳು ನಮ್ಮ ಕ್ಷೇತ್ರಕ್ಕೆ ಬೇಡ. ಇವರನ್ನು ವರ್ಗಾಯಿಸಿ ನಿಯೋಜನೆ ಮೇರೆಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಿ ಎಂದು ಕೆಲವು ಸದಸ್ಯರು ಆಗ್ರಹಿಸಿದರು.
ನಮ್ಮ ಕ್ಷೇತ್ರಕ್ಕೆ ಹಾಲಿ ಇರುವ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಬದಲಾಯಿಸಿ ಎಂದು ಶಾಸಕರ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಶಿಫಾರಸ್ಸು ಪತ್ರಗಳನ್ನು ನೀಡಿದರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮಾನ್ಯತೆ ನೀಡುತ್ತಿಲ್ಲ, ನಿಯಮಾವಳಿಯನ್ನು ಹೇಳುತ್ತಾ ಕೂರುತ್ತಾರೆ. ಶಿಫಾರಸ್ಸಿನಂತೆ ವರ್ಗಾವಣೆ ಮಾಡದಿದ್ದರೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕೆಲ ಸದಸ್ಯರು ಸಭೆಯಿಂದ ಹೊರನಡೆಯಲು ಮುಂದಾದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರದ ನೆಹರು ಓಲೇಕಾರ ಅವರು ಮಾತನಾಡಿ, ಆರಂಭದಲ್ಲೇ ನಾನು ನಿಮಗೆ ಸೂಚನೆ ನೀಡಿದ್ದೇನೆ. ಬಹಳಷ್ಟು ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕೆಲಸಮಾಡುವುದಿಲ್ಲ. ಪ್ರವಾಸಕೈಗೊಂಡು ಖುದ್ದಾಗಿ ಪರಿಶೀಲನೆ ನಡೆಸಿ, ಇಂತಹ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸಿ ಶಿಸ್ತು ಕ್ರಮಕೈಗೊಳ್ಳಿ ಎಂದು ಹೇಳಿದ್ದೇನೆ ಆದರೂ ಕ್ರಮವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಶಾಸಕರು ಮತ್ತು ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ ಅವರು ಮಾತನಾಡಿ, ಹಲವು ಪಂಚಾಯತಿಗಳಿಗೆ ಭೇಟಿ ನೀಡಿದ್ದೇನೆ. ಸದಸ್ಯರು ನಿರ್ಧಿಷ್ಟವಾಗಿ ದೂರು ನೀಡಿದರೆ ತನಿಖೆ ನಡೆಸಿ ತಪ್ಪು ಕಂಡುಬಂದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು. ಆದರೆ ನಿರ್ಧಿಷ್ಟವಾದ ಯಾವುದೇ ದೂರುಗಳು ಇಲ್ಲದಿದ್ದರೆ ವರ್ಗಾವಣೆಯಾಗಲಿ, ನಿಯೋಜನೆಯಾಗಲು ಅಥವಾ ಶಿಸ್ತು ಕ್ರಮವಾಗಲಿ ತಗೆದುಕೊಳ್ಳಲು ಬರುವುದಿಲ್ಲ ಎಂದು ಉತ್ತರಿಸಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಉತ್ತರದಿಂದ ಸಿಡಿಮಿಡಿಗೊಂಡ ಶಾಸಕರಾದಿಯಾಗಿ ಕೆಲಸ ಸದಸ್ಯರು ಸಭೆಯಿಂದ ಹೊರನಡೆದರು. ಈ ಸಂದರ್ಭದಲ್ಲಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಮಾತನಾಡಿ, ಶಾಸನ ಸಭೆಯಲ್ಲಿ ರೂಪಿತವಾದ ಕಾನೂನು ಮತ್ತು ನಿಯಮಾವಳಿಯನ್ನು ಬದಲಾಯಿಸಲು ಬರುವುದಿಲ್ಲ. ಶಾಸಕಾಂಗ ಸಭೆಯಲ್ಲೇ ನಿಯಮಾವಳಿಯನ್ನು ಶಾಸಕರು ಬದಲಾಯಿಸಬೇಕಾಗುತ್ತದೆ. ಅಲ್ಲಿಯವರೆಗೂ ನಿಯಮಾವಳಿಯಂತೆ ಕೆಲಸಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಗೊಂದಲ ಸಿಡಿಮಿಡಿಗಳ ಮಧ್ಯ ಹೊರನಡೆದ ಶಾಸಕರು ಹಾಗೂ ಸದಸ್ಯರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸರ್ಕಾರದ ನಿಯಮಾವಳಿಯನ್ನು ವಿವರಿಸಿ ತಪ್ಪಿತಸ್ಥರವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮರಳು ತನಿಖೆ: ಹಿರೇಕೆರೂರ ತಾಲೂಕು ಬೈರನಪಾದ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತಂತೆ ಈವರೆಗೆ ಯಾವುದೇ ಕ್ರಮವಾಗಿಲ್ಲ. ಬಡವರಿಗೆ ಶೌಚಾಲಯ ಹಾಗೂ ಆಶ್ರಯ ಮನೆ ನಿರ್ಮಾಣಕ್ಕೆ ಮರಳು ಸಿಗದೇ ತೀವ್ರ ತೊಂದರೆಯಾಗಿದೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಕಳೆದ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಮರಳು ಅಕ್ರಮ ಸಾಗಾಣಿಕೆ ಕುರಿತು ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ, ವರದಿ ಬಂದನಂತರ ಯಾರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಕಠಿಣ ಕ್ರಮಕೈಗೊಳ್ಳೋಣ. ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇಂದಿನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸೋಣ ಎಂದು ಚರ್ಚೆಗೆ ತೆರೆ ಎಳೆದರು.
ಬೆಳೆವಿಮೆ: ಬೆಳೆವಿಮೆ ಸಮೀಕ್ಷೆ ಸಂದರ್ಭದಲ್ಲಿ ಅಧಿಕಾರಿಗಳ ತಪ್ಪಿನಿಂದಾಗಿ ಬಂಕಾಪೂರ ಗ್ರಾಮದಲ್ಲಿ ರೈತರಿಗೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಸದಸ್ಯ ದೇಸಾಯಿ ಅವರು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳೆವಿಮೆ ಪರಿಹಾರ ಕುರಿತಂತೆ ಸಮಸ್ಯೆ ಬಗೆಹರಿದಿದೆ. ರಾಜ್ಯ ಸರ್ಕಾರವೇ ರೈತರಿಗೆ ಬೆಳೆ ವಿಮೆ ಹಣ ನೀಡಲು ನಿರ್ಧರಿಸಿದೆ. ಹಣಬಿಡುಗಡೆಗೆ ಹಣಕಾಸು ಇಲಾಖೆಗೆ ಕಡತಹೋಗಿದೆ. ತಿಂಗಳ ಒಳಗಾಗಿ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಸಭೆಗೆ ತಿಳಿಸಿದರು.
ಕಪ್ಪುಪಟ್ಟಿ: ಜಾನ್‍ಂಡೀರ್ ಕಂಪನಿ ರೈತರಿಗೆ ವಿತರಿಸಿರುವ ಕೃಷಿ ಉಪಕರಣಗಳು ಕಳಪೆಯಾಗಿದ್ದು ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬೇರೆ ಏಜೆನ್ಸಿಯನ್ನು ಜಿಲ್ಲೆಗೆ ನೇಮಕಮಾಡಿ ಕೃಷಿ ಉಪಕರಣಗಳನ್ನು ವಿತರಿಸಲು ಕ್ರಮವಹಿಸುವಂತೆ ಕಳೆದ ಒಂದು ವರ್ಷದಿಂದ ಒತ್ತಾಯಿಸುತ್ತಿದ್ದು, ಕ್ರಮವಾಗಿಲ್ಲ. ಹಾಗೆಯೇ ಧರ್ಮಸ್ಥಳ ಸಂಸ್ಥೆಯವರು ನಡೆಸುತ್ತಿರುವ ಕೃಷಿ ಸೇವಾ ಕೇಂದ್ರದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ರೈತರಿಗೆ ಸೇವೆ ನೀಡುತ್ತಿಲ್ಲ. ಈ ಕುರಿತಂತೆ ಗಮನಹರಿಸಿ ಎಂದು ಸದಸ್ಯ ಈಟೇರ ಅವರು ಸಭೆಯಲ್ಲಿ ಒತ್ತಾಯಿಸಿದರು.
ಸದಸ್ಯರ ಆರೋಪಕ್ಕೆ ಸ್ಪಷ್ಟನೆ ನೀಡಿದ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಜಾನ್‍ಂಡೀರ್ ಕಂಪನಿ ಬಗ್ಗೆ ವರ್ಷದ ಹಿಂದೆಯೇ ದೂರು ಸಲ್ಲಿಸಲಾಗಿದೆ. ಈ ವರ್ಷದ ಯೋಜನೆಯ ಅನುಷ್ಠಾನದಲ್ಲಿ ಹೊಸ ಏಜೆನಸ್ಸಿಯನ್ನು ಪರಿಗಣಿಸಲಾಗುತ್ತದೆ. ಹಾಗೆ ಧರ್ಮಸ್ಥಳ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ಸೇವಾ ಲೋಪ ಕುರಿತಂತೆ ಗಮನಸೆಳೆದು ಸರಿಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ 10,799 ತಾಡಪತ್ರೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 10595 ಹೆಕ್ಟೇರ್ ಪ್ರದೇಶಕ್ಕೆ ತುಂತುರು ನೀರಾವರಿ ಘಟಕಗಳನ್ನು ವಿತರಿಸಿದರುವ ಗುರಿ ಹೊಂದಲಾಗಿದೆ. ಈಗಾಗಲೇ ವಿತರಣೆ ಕಾರ್ಯಕೈಗೊಳ್ಳಲಾಗಿದೆ. ಹೊಸದಾಗಿ ಐದು ಸಾವಿರ ತಾಡಪಲ್‍ಗಳು ಜಿಲ್ಲೆಗೆ ಮಂಜೂರಾಗಿರುವುದಾಗಿ ತಿಳಿಸಿದರು.
ಹಿರೇಕೆರೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳಲಾದ ಉದ್ಯೋಗ ಖಾತ್ರಿ ಯೋಜನೆ ದೇವಿವನ ಹಾಗೂ ಟೀ ಪಾರ್ಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಜಿ.ಪಂ.ಅಧಿಕಾರಿಗಳಿಂದ ಮರು ತನಿಖೆಗೆ ಒಳಪಡಿಸಲು ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸೂಚನೆ ನೀಡಿದರು.
ತನಿಖೆ: ಜಿಲ್ಲಾ ಪಂಚಾಯತಿ ನಿಧಿ ಒಂದರಲ್ಲಿ 1858.78 ಲಕ್ಷ ರೂ. ಉಳಿಕೆಯಾಗಿದ್ದು ಈ ಅನುದಾನವನ್ನು ಬಿಡುಗಡೆಗೆ ಮನವಿಮಾಡಿಕೊಳ್ಳಲಾಗಿತ್ತು. ಈ ಪೈಕಿ 1133.56 ಲಕ್ಷ ರೂ. ಬಿಡುಗಡೆಯಾಗಿದೆ. ಕಳೆದ ಮಾರ್ಚ್ 31ರೊಳಗೆ ವಿನಿಯೋಗಿಸದೇ ಖಾಲಿ ಹುದ್ದೆಗಳ ವೇತನ ಬಾಬ್ತು 5.71 ಲಕ್ಷ ರೂ.ಮಾತ್ರ ಹಿಂದಿರುಗಿದೆ ಎಂದು ಜಿಲ್ಲಾ ಪಂಚಾಯತಿಯ ಲೆಕ್ಕಾಧಿಕಾರಿ ಜಾಫರ್ ಅವರು ಸದಸ್ಯ ಈಟೇರ ಅವರ ಪ್ರಶ್ನೆಗೆ ಉತ್ತರಿಸಿದರು. ಆದರೆ ಈ ಪ್ರಶ್ನೆಗೆ ಸಮಾಧಾನವಾಗದ ಸದಸ್ಯರು ಇಲಾಖಾವಾರು ತನಿಖೆ ನಡೆಸಿ ಕಳೆದ ಸಾಲಿನಲ್ಲಿ ಯಾವ ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ಉಳಿದಿದೆ ಎಂಬ ಮಾಹಿತಿ ಸಂಗ್ರಹಿಸಲು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ಉಪಾಧ್ಯಕ್ಷರಾದ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ, ಜಿ.ಪಂ.ಲೆಕ್ಕಾಧಿಕಾರಿ ಜಾಫರ ಸುತಾರ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ