ಸ್ಪರ್ದಾ ಜಗತ್ತಿನಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ

ಚಿತ್ರದುರ್ಗ:

     ಇಂಗ್ಲಿಷ್ ಭಾಷೆಯೆಂದರೆ ಕಬ್ಬಿಣದ ಕಡಲೆಯಲ್ಲ. ಯಾವುದೇ ಭಾಷೆಯನ್ನಾಗಲಿ ದಿನನಿತ್ಯದ ಜೀವನದಲ್ಲಿ ಬಳಸುತ್ತಿದ್ದರೆ ಸುಲಭವಾಗಿ ಕಲಿಯಬಹುದು. ಇಂಗ್ಲಿಷ್ ಕಲಿಯದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಚಿತ್ರದುರ್ಗ ವತಿಯಿಂದ ಕಲಾ ಕಾಲೇಜು ಆವರಣದಲ್ಲಿ ಬುಧವಾರ ನಡೆದ2018-19 ನೇ ಸಾಲಿನ ಕ್ರೀಡಾ, ಸಾಂಸ್ಕತಿಕ, ಎನ್.ಸಿ.ಸಿ., ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‍ಕ್ರಾಸ್ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಪ್ರತಿಭೋತ್ಸವ ಸಮಾರಂಭದಲ್ಲಿ ಕಲಾಸಿರಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

       ಆಟ್ರ್ಸ್ ಓದುವವರು ಬಡವರು, ಹಿಂದುಳಿದವರು, ದಡ್ಡರು. ವಿಜ್ಞಾನ ಓದುವವರು ಬುದ್ದಿವಂತರು ಎನ್ನುವ ತಪ್ಪು ಕಲ್ಪನೆ ಯಾರಲ್ಲಿಯೂ ಇರಬಾರದು. ಮನೆ ಪಾಠಕ್ಕೆ ಹೋಗದೆ ಶಾಲಾ-ಕಾಲೇಜುಗಳಲ್ಲಿಯೇ ಪಾಠ ಕೇಳಿ ಸ್ವಂತ ಪ್ರತಿಭೆ ಮೇಲೆ ಅತ್ಯುನ್ನತ ಶ್ರೇಣಿಯಲ್ಲಿ ಯಾರು ತೇರ್ಗಡೆಯಾಗುತ್ತಾರೋ ಅವರೇ ನಿಜವಾದ ಬುದ್ದಿವಂತರು. ಕೇವಲ ಅಂಕಗಳಿಸುವುದಷ್ಟೆ ಮಾನದಂಡವಲ್ಲ. 

     ಪದವಿಯ ಜೊತೆ ಸಮಾಜಮುಖಿಯಾಗಿ ಕೆಲಸ ಮಾಡಿ ನೀವು ಓದಿದ ಶಾಲಾ-ಕಾಲೇಜುಗಳಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಲಾ, ವಿಜ್ಞಾನ ಎನ್ನುವ ತಾರತಮ್ಯ ಸರಿಯಲ್ಲ. ನನ್ನದು ಎನ್ನುವ ಮನೋಭಾವ ಯಾರಲ್ಲಿ ಇರುತ್ತದೆಯೋ ಅವರು ನಿಜವಾಗಿಯೂ ಖುಷಿಯಿಂದ ಇರುತ್ತಾರೆ. ಕಲಾ ವಿಭಾಗದ ವಿದ್ಯಾರ್ಥಿಗಳೇ ನಿಜವಾಗಿಯೂ ಎಲ್ಲಾ ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ.

       ಯಾವ ವಿಷಯವನ್ನಾದರೂ ಮಾತನಾಡುವ ಶಕ್ತಿಯಿರುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆಟ್ರ್ಸ್ ವಿದ್ಯಾರ್ಥಿಗಳಿಗೆ ಒಳ್ಳೆಯ ವೇದಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಜಿನಿಯರ್, ಡಾಕ್ಟರ್‍ಗಳು ಐ.ಎ.ಎಸ್., ಐ.ಪಿ.ಎಸ್.ಅಧಿಕಾರಿಗಳಾಗುತ್ತಿದ್ದಾರೆ. ಯಾವ ಭಾಷೆಯನ್ನಾದರೂ ಸಂಕೋಚವಿಲ್ಲದೆ ಬಳಸಬೇಕು. ನನಗೆ ಬರುವುದಿಲ್ಲ. ಮತ್ತೊಬ್ಬರ ಎದುರು ನಗೆಪಾಟಿಲಿಗೆ ಈಡಾಗಬೇಕಾಗುತ್ತದೆಂದು ಸುಮ್ಮನಿದ್ದರೆ ಯಾವ ಭಾಷೆಯನ್ನು ಕಲಿಯಲು ಆಗುವುದಿಲ್ಲ. ಸರಿಯೋ ತಪ್ಪೋ ಮೊದಲು ಮಾತನಾಡಲು ಆರಂಭಿಸಿ ಆಗ ತನ್ನಷ್ಟಕ್ಕೆ ತಾನೆ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಕಲಿಯಬಹುದು ಎಂದರು.

        ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗುವುದು ಸುಲಭವಲ್ಲ. ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರಬೇಕು. ಜೊತೆಗೆ ಇಂಗ್ಲಿಷ್ ಬೇಕೆ ಬೇಕು. ಯಾವುದು ಸುಲಭ, ಯಾವುದರ ಬಗ್ಗೆ ಪ್ರಬುದ್ದತೆಯಿದೆ. ಎಲ್ಲಿ ಕಷ್ಟವಾಗುತ್ತಿದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಯಾರಿ ನಡೆಸಿದಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಎರಡು ಮೂರು ಬಾರಿ ತೇರ್ಗಡೆಯಾಗದಿದ್ದರೆ ಬೇಸರ ಪಟ್ಟುಕೊಂಡು ಕೈಬಿಡಬಾರದು. ಪ್ರಯತ್ನ ಮಾಡಿದರೆ ಒಂದಲ್ಲ ಒಂದು ಸಲ ಸಫಲರಾಗಬಹುದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

        ಎಲ್ಲಾ ರಂಗದಲ್ಲಿಯೂ ನೋಡಿ ನಗುವವರೆ ಜಾಸ್ತಿಯಿದ್ದಾರೆ. ಪ್ರೋತ್ಸಾಹಿಸುವವರು ತುಂಬಾ ಕಮ್ಮಿ. ಯಾವುದೇ ಒಂದು ಭಾಷೆಗೆ ಅದರದೆ ಆದ ನಿಯಮ ಕಟ್ಟುಪಾಡು ಇದೆ. ಕರಗತಮಾಡಿಕೊಂಡಾಗ ಸ್ಪರ್ಧಾತ್ಮಕ ಪರೀಕ್ಷೆ ಸುಲಭವೆನಿಸುತ್ತದೆ. ಪದವಿಯ ಅಂಕದ ಮೇಲೆ ನಿಮ್ಮ ಜೀವನ ನಿಂತಿದೆ. ಪದವಿ ಜೊತೆ ಸಾಮಾನ್ಯ ಜ್ಞಾನವೂ ಅತ್ಯವಶ್ಯಕವಾಗಿರಬೇಕು. ಚೆನ್ನಾಗಿ ಓದಿ ಕೆಲಸ ತೆಗೆದುಕೊಂಡರೆ ಜೀವನಕ್ಕೆ ಭದ್ರತೆ ಸಿಗುತ್ತದೆ.

        ಸಾಕಷ್ಟು ಶ್ರಮಪಟ್ಟು ವಿಷಯದ ಬಗ್ಗೆ ಪ್ರಭುತ್ವ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಿ. ಸ್ಕೌಟ್ಸ್ ಅಂಡ್ ಗೈಡ್ಸ್, ಎನ್.ಸಿ.ಸಿ., ಎನ್.ಎಸ್.ಎಸ್.ನಲ್ಲಿ ತೊಡಗಿಕೊಳ್ಳಿ ಸದ್ಯದಲ್ಲಿಯೇ ಹಸಿರೀಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಸಕಾಲಕ್ಕೆ ಮಳೆ-ಬೆಳೆಯಿಲ್ಲದೆ ವಾತಾವರಣದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ದೊಡ್ಡ ಮರವಾಗುವತನಕ ಪೋಷಿಸಬೇಕು. ಸುತ್ತಮುತ್ತ ಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ನೈರ್ಮಲ್ಯ ಕಾಪಾಡುವುದರಿಂದ ರೋಗರುಜಿನಗಳಿಂದ ದೂರವಿರಬಹುದು ಎಂದು ಹೇಳಿದರು.

         ಮೊದಲು ನಿಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ಓದಿನ ಕಡೆ ಹೆಚ್ಚು ಗಮನ ಕೊಡಿ ಜೊತೆಗೆ ನಾಯಕತ್ವ ಗುಣಬೆಳೆಸಿಕೊಂಡು ವ್ಯಕ್ತಿತ್ವ ನಿರ್ಮಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಸತ್ಯಭಾಮ ಯಾವುದೇ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮತದಾನದ ಮಹತ್ವ ತಿಳಿಸಿದರು.

         ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಪಿ.ಕಣ್ಣನ್ ಮಾತನಾಡಿ ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಸಮಾಜದಲ್ಲಿ ಇನ್ನು ಸುಧಾರಣೆಯಾಗಿಲ್ಲ. ಜಾತಿ ಪದ್ದತಿ, ಶೋಷಣೆ, ಮೇಲು-ಕೀಳು ಎನ್ನುವ ತಾರತಮ್ಯ ಜೀವಂತವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಏನು ಎನ್ನುವುದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

       1947 ರಲ್ಲಿ ದೇಶಕ್ಕೆ ಸ್ವಾತಂತ್ರ ಬಂದಾಗ ಇಪ್ಪತ್ತು ವಿಶ್ವವಿದ್ಯಾನಿಲಯಗಳಿತ್ತು. 496 ಮಹಾವಿದ್ಯಾಲಯವಿತ್ತು. ಈಗ ಭಾರತದಲ್ಲಿ 760 ವಿಶ್ವವಿದ್ಯಾನಿಲಯಗಳಿವೆ. 39258 ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಸಾಧೆನೆ ಮಾಡಿದ್ದೇವೆ ಎಂದುಕೊಂಡರೆ ಅದು ತಪ್ಪು. ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಏಕೆ ಶಾಲೆ-ಕಾಲೇಜುಗಳಿಗೆ ಬರುತ್ತಿದ್ದೇವೆ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳುವಂತ ಪರಿಸ್ಥಿತಿಯಲ್ಲಿದ್ದೇವೆ. ಶಿಕ್ಷಣದ ಜೊತೆ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು ಎಂದು ತಿಳಿಸಿದರು.ಸಾಂಸ್ಕತಿಕ ಸಮಿತಿ ಸಂಚಾಲಕ ಡಾ.ಹೆಚ್.ಗುಡ್ಡದೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

        ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ಎಲ್.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ.ಸಂಚಾಲಕ ಪ್ರೊ.ಜೆ.ಡಿ.ಸುರೇಶ್, ಪ್ರೊ.ಮಂಜುಳ, ಪ್ರೊ.ನಾಗರಾಜಪ್ಪ ವೇದಿಕೆಯಲ್ಲಿದ್ದರು. ಶಿವಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಭ್ರಮರಾಂಭ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap