ತುಮಕೂರು
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಇನ್ನೆರಡು ದಿನಗಳಲ್ಲಿ ಅತಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ರೈತರಿಗೆ ಈ ಪ್ರಯೋಜನ ಪಡೆಯುವಂತೆ ಪ್ರೇರೇಪಿಸಬೇಕೆಂದು ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಬೆಳೆ ವಿಮಾ ಘಟಕಗಳಲ್ಲಿ ಶೇ.75ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಆಗದಿದ್ದಲ್ಲಿ ಬೆಳೆ ವಿಮಾ ಮೊತ್ತದ ಶೇ. 25ರಷ್ಟು ಪರಿಹಾರ ನೀಡಲು ಅವಕಾಶವಿರುತ್ತದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಾದ ಕಾರಣ ಮುಂಗಾರು ಬೆಳೆಗಳ ಬಿತ್ತನೆ ಕುಂಠಿತವಾಗಿರುತ್ತದೆ. ವಿಮಾ ಯೋಜನೆಯಡಿ ನೋಂದಾಯಿಸಲು ಜುಲೈ 31 ಕಡೆಯ ದಿನಾಂಕವಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕ್‍ಗಳಲ್ಲಿ ವಿಮಾ ಕಂತು ಪಾವತಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ತಿಳಿಸಿದರು.
ಈ ಯೋಜನೆ ಕುರಿತು ಕಳೆದ ವರ್ಷ ರೈತರಿಗೆ ಸರಿಯಾದ ಮಾಹಿತಿ ಸಿಕ್ಕಿರುವುದಿಲ್ಲ. ಆದರೆ ಈ ಬಾರಿ ಆಟೋಗಳಲ್ಲಿ ಪ್ರಚಾರ ಮಾಡುವ ಮೂಲಕ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. 2017-18ನೇ ಸಾಲಿನಲ್ಲಿ 82291 ರೈತರು ನೋಂದಾಯಿಸಿಕೊಂಡಿದ್ದರು. 2018-19ರಲ್ಲಿ 60516 ರೈತರು ಮಾತ್ರ ನೋಂದಾಯಿಸಿದ್ದು, ಈ ಬಾರಿ ಈವರೆಗೆ 48442 ರೈತರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಜುಲೈ 31ರವರೆಗೆ ಅವಕಾಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಹೆಚ್ಚಿನ ಪ್ರಚಾರ ನೀಡಬೇಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಯೋಜನೆಯ ಸದುಪಯೋಗ ಪಡೆಯಲು ಬಂದಾಗ ಯಾವುದೇ ಸಬೂಬು ಹೇಳದೆ ಅವರನ್ನು ಈ ಯೋಜನೆಯಡಿ ನೋಂದಾಯಿಸಬೇಕು ಎಂದು ತಿಳಿಸಿದರು. ಈ ಯೋಜನೆ ಕುರಿತು ಯಾವುದೇ ಮಾಹಿತಿ ಬೇಕಾದಲ್ಲಿ ರೈತರು ನೇರವಾಗಿ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಲೀಡ್‍ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್, ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.