ದಾವಣಗೆರೆ:
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಲ್ಲಿ ನಾನೇ ಮುನ್ನಡೆ ಸಾಧಿಸುವುದಾಗಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.ಹರಪನಹಳ್ಳಿ ತಾಲೂಕಿನ ತೆಲಿಗಿ ಮತಗಟ್ಟೆಗೆ ಭೇಟಿ ನೀಡಿದ್ದ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬುದಾಗಿ ಈಗಲೇ ಹೇಳುವುದಿಲ್ಲ. ಆದರೆ, ನಾಳೆ ಬೆಳಿಗ್ಗೆ ಎಷ್ಟು ಲೀಡ್ನಿಂದ ಗೆಲ್ಲುತ್ತೇನೆ ಎಂದು ಘೋಷಿಸುತ್ತೇನೆ ಎಂದರು.
ಕ್ಷೇತ್ರದಾದ್ಯಂತ ಉತ್ತಮ ವಾತಾವರಣವಿದ್ದು, ಎಂಟು ಕ್ಷೇತ್ರಗಳಲ್ಲಿ ನಾನೇ ಮುನ್ನಡೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪುನರ್ ಉಚ್ಚರಿಸಿದರು.ಇದಕ್ಕೂ ಮುನ್ನ ದಾವಣಗೆರೆಯ ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 236ರಲ್ಲಿ ಪತ್ನಿ ಗಾಯತ್ರಿ ಸಿದ್ದೇಶ್ ಅವರೊಂದಿಗೆ ಮತಚಲಾಯಿಸಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಚೌಕೀದಾರರಾಗಿರುವಂತೆ ದಾವಣಗೆರೆ ಜಿಲ್ಲೆಯಲ್ಲಿ ನಾನು ಚೌಕೀದಾರ. ನನ್ನ ಅಭಿವೃದ್ಧಿ ಕಾರ್ಯಗಳು ಕೈಹಿಡಿಯಲಿದ್ದು, ಜನರ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳಿದರು.
ಕ್ಷೇತ್ರದ ಜನರು ಅತೀಹೆಚ್ಚು ಮತಗಳಿಂದ ಮತ್ತೊಮ್ಮೆ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಜನರ ವಿಶ್ವಾಸ ನನ್ನ ಮೇಲಿದೆ. ಈ ಬಾರಿಯೂ ನನಗೆ ಗೆಲುವು ಸಿಗಲಿದೆ. ಜನರ ಆರ್ಶೀವಾದ ನನ್ನಮೇಲಿದೆ ಎಂದರು.