ದಾವಣಗೆರೆ
ಜೆಜೆಎಂ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ ಕಳೆದ 16 ತಿಂಗಳುಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ಸರ್ಕಾರದ ಆದೇಶದಂತೆ ಕಾಲೇಜಿನ ಆಡಳಿತ ಮಂಡಳಿ ನೀಡದಿದ್ದರೆ, ಭಾರತೀಯ ವೈದ್ಯ ಪರಿಷತ್ತಿಗೆ (ಎಂಸಿಐ) ಪತ್ರ ಬರೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸೂಚನೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಜೊತೆಗೆ ಭಾನುವಾರ ಮಾತನಾಡಿದ ಸಿಎಂ ಯಡಿಯೂರಪ್ಪ, ಜೆಜೆಎಂ ಕಾಲೇಜು ಆಡಳಿತ ಮಂಡಳಿ ಜೊತೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸಿ, ಮನವೊಲಿಸಬೇಕು. ಅಕಸ್ಮಾತ್ ಒಪ್ಪದಿದ್ದರೆ, ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ನಮ್ಮ ಸರ್ಕಾರ ವಿದ್ಯಾರ್ಥಿಗಳ ಪರವಾಗಿ ಇದೆ. ಅವರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡು ಪ್ರತಿಭಟನೆ ಕೈಬಿಡುವಂತೆ ವೈದ್ಯಕೀಯ ವಿದ್ಯಾರ್ಥಿಗಳ ಮನವೊಲಿಸಬೇಕು ಎಂದು ಮುಖ್ಯಮಂತ್ರಿಗಳು ಸಚಿವರಿಗೆ ಸೂಚನೆ ನೀಡಿದ್ದಾರೆ.ಶಿಷ್ಯ ವೇತನವನ್ನು ನೀಡಲು ನಮ್ಮಿಂದ ಆಗುವುದಿಲ್ಲ. ಸರ್ಕಾರವೇ ಶಿಷ್ಯ ವೇತನ ನೀಡಬೇಕು ಎಂದು ಜೆಜೆಎಂ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಮುಷ್ಕರ ನಿರತ ವಿದ್ಯಾರ್ಥಿಗಳು ತಮ್ಮನ್ನು ಭೇಟಿ ಮಾಡಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಸರ್ಕಾರ ಆರಿಸಿರುವ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯ ವೇತನ ನೀಡಬೇಕು. ನಮ್ಮ ಕಾಲೇಜಿನ 80 ಜನ ವೈದ್ಯರು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಂಬಳವನ್ನು ನಾವೇ ನೀಡುತ್ತಿದ್ದೇವೆ. ವೈದ್ಯಕೀಯ ಸೌಲಭ್ಯಗಳಿಗಾಗಿ ಕ್ಲಿನಿಕ್ ವೆಚ್ಚವನ್ನಾಗಿ ಸರ್ಕಾರಕ್ಕೆ 2 ಕೋಟಿ ರೂ. ಭರಿಸಿದೆ. ಮೊದಲು ಸರ್ಕಾರವೇ ಶಿಷ್ಯವೇತನ ನೀಡುತ್ತಿತ್ತು. ಆದರೆ, ಒಂದು ವರ್ಷದಿಂದ ನೀಡುವುದಿಲ್ಲ ಎಂಬುದಾಗಿ ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದರು.
ಬಾಕಿ ಇರುವ ಶಿಷ್ಯ ವೇತನ ಬಿಡುಗಡೆಗೆ ಆಗ್ರಹಿಸಿ ಜೆಜೆಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಇಂದಿಗೆ 13 ದಿನ ಪೂರೈಸಿದ್ದು, ಭಾನುವಾರ ಲಾಕ್‍ಡೌನ್ ಇದ್ದ ಕಾರಣದಿಂದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಹೆಪ್ರಾನ್‍ಗಳನ್ನು ನೇತು(ವೈದ್ಯರು ಧರಿಸುವ ಬಿಳಿ ಕೋಟು0 ಹಾಕುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿರುವ ನಗರದ ಜಯದೇವ ವೃತ್ತದಲ್ಲಿ ಅಳವಡಿಸಿರುವ ಶಾಮಿಯಾನದ ಕೆಳಗೆ ಸಾಲಾಗಿ ವೈದ್ಯರು ಧರಿಸುವ ಹೆಪ್ರೋನ್‍ಗಳನ್ನು ತೂಗು ಹಾಕುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಕಳೆದ 16 ತಿಂಗಳುಗಳಿಂದ ಬಾರದಿರುವ ಶಿಷ್ಯ ವೇತನಕ್ಕೆಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ಕೋವಿಡ್ 19 ಸೇವೆ ಹೊರತು ಪಡಿಸಿ, ಎಲ್ಲಾ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
