ಚಿತ್ರದುರ್ಗ:
ಆರೋಗ್ಯ ಸೇವೆ ಸಮಾಜದ ಕಟ್ಟ ಕಡೆಯ ಬಡವನಿಗೂ ಸುಲಭವಾಗಿ ಸಿಕ್ಕಾಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರಂಗನಾಥ್ ಹೇಳಿದರು.
ಪಾಕ್ಷಿಕಾಪ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿಂಗ್‍ಪುರ್ ಇವರಿಂದ ವಿಶ್ವದಲ್ಲಿಯೇ ಮೊದಲನೇ ಬಾರಿಗೆ ಬ್ಲಾಕ್ ಚೈನ್ ಟೆಕ್ನಾಲಜಿಯೊಂದಿಗೆ ಪರಿಚಯಿಸುತ್ತಿರುವ ಲೈಫ್ ಆನ್ ಹೆಲ್ತ್ ಕಾರ್ಡ್ ಆರೋಗ್ಯ ಹೊಂಗಿರಣ ಪಾಕ್ಷಿಕ ಹೆಲ್ತ್ ಕಾರ್ಡ್ ಕಚೇರಿಯನ್ನು ನಗರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಅದೇ ರೀತಿ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಮುಕ್ತರನ್ನಾಗಿ ಮಾಡಬೇಕಾಗಿದೆ. ಸಕ್ಕರೆ ಕಾಯಿಲೆ, ಹೃದಯಾಘಾತ, ಪಾಶ್ರ್ವವಾಯು, ಮಾನಸಿಕ ರೋಗವನ್ನು ಸುಧಾರಣೆ ಮಾಡುವುದು ಎಲ್ಲರ ಜವಾಬ್ದಾರಿ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ 1685 ಚಿಕಿತ್ಸಾ ವಿಧಾನಗಳಿವೆ. ಎಲ್ಲವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಎಲ್ಲಿ ಆರೋಗ್ಯ ಸೇವೆ ಸಿಗುವುದಿಲ್ಲವೋ ಅಂತಹ ಕಡೆ ಪಾಕ್ಷಿಕಾಪ್ ಹೆಲ್ತ್ ಕಾರ್ಡ್ ಪ್ರಯೋಜನಕಾರಿಯಾಗಬೇಕಾದರೆ ಬಡವರಿಗೆ ಕಡಿಮೆ ದರದಲ್ಲಿ ಸೌಲಭ್ಯ ಸಿಗಬೇಕು ಎಂದು ತಿಳಿಸಿದರು.
ಪಾಕ್ಷಿಕಾಪ್ ಟೆಕ್ನಾಲಜಿಯ ಸಿ.ಇ.ಓ. ರಜನಿಕಾಂತ್ ಮಾತನಾಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರಿಗೆ ಸುಲಭವಾಗಿ ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯಗಳು ಸಿಗಲಿ ಎನ್ನುವ ಉದ್ದೇಶವಿಟ್ಟುಕೊಂಡು ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಪಾಕ್ಷಿಕಾಪ್ ಹೆಲ್ತ್ ಕಾರ್ಡ್ ಪರಿಚಯಿಸಲಾಗುತ್ತಿದೆ. ಕೇವಲ ಆರುನೂರು ರೂ.ಗಳಲ್ಲಿ ಹದಿನಾಲ್ಕು ಬಗೆಯ ಆರೋಗ್ಯ ತಪಾಸಣೆ ನಡೆಸಿ ದೇಹದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪತ್ತೆ ಹಚ್ಚಲಾಗುವುದು ಎಂದು ಮಾಹಿತಿ ನೀಡಿದರು.
ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದೆಯೋ ಇಲ್ಲವೋ, ರಕ್ತ ಸಂಚಲನವನ್ನು ಪಾಕ್ಷಿಕಾಪ್ ಹೆಲ್ತ್ ಕಾರ್ಡ್‍ನಿಂದ ಕಂಡುಹಿಡಿಯಲಾಗುವುದು. ಇದೊಂದು ಅತ್ಯುತ್ತಮ ವಿಧಾನವಾಗಿರುವುದರಿಂದ ಜನಸಾಮಾನ್ಯರು ಇದರ ಸೇವೆಯನ್ನು ಪಡೆದುಕೊಳ್ಳಿ ಎಂದು ವಿನಂತಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾಮಲ್ಲಿಕಾರ್ಜುನ್, ಪಾಕ್ಷಿಕಾಪ್ ಪ್ರಾಂಚೈಸಿಗಳಾದ ಬೆಂಗಳೂರಿನ ತಿಪ್ಪೇಸ್ವಾಮಿ, ಮಣಿಕುಂದ್ರನ್, ಚಿತ್ರದುರ್ಗದ ಡಿಜಿಟಲ್ ವಲ್ರ್ಡ್‍ನ ದಾದಾಪೀರ್ ವೇದಿಕೆಯಲ್ಲಿದ್ದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಚಂದ್ರಪ್ಪ ಕಾಲ್ಕೆರೆ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ