ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾನೂನು ಅನುಷ್ಠಾನಗೊಳಿಸುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹೊಸದುರ್ಗ ತಾಲ್ಲೂಕನ್ನು ತಂಬಾಕು ನಿಯಂತ್ರಣ ಕಾನೂನಿನ ಉನ್ನತ ಅನುಷ್ಠಾನ ತಾಲ್ಲೂಕು ಎಂದು ಘೋಷಿಸಲು ನಿರ್ಧರಿಸಲಾಗಿದ್ದು, ಈ ತಾಲ್ಲೂಕಿನಲ್ಲಿ ತಂಬಾಕು ನಿಯಂತ್ರಣ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳು, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಪ್ರದೇಶಗಳೆಂದು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮಗಳು, ಜನರಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಬೇಕಾಗಿರುವ ಕಾರ್ಯಕ್ರಮಗಳ ವಿವರ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಹಮ್ಮಿಕೊಳ್ಳಲಾಗುವ ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ವಿವರವುಳ್ಳ ಕ್ರಿಯಾ ಯೋಜನೆ ರೂಪಿಸಬೇಕು.
ಇದರ ಜೊತೆ, ಜೊತೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ತಂಬಾಕು ನಿಯಂತ್ರಣ ಕಾನೂನಿನ ಪರಿಣಾಮಕಾರಿ ಅನುಷ್ಠಾನ ದಿಸೆಯಲ್ಲಿ ಇರುವ ಕಾನೂನು ಚೌಕಟ್ಟಿನಡಿ ದಾಳಿ ಪ್ರಕರಣಗಳನ್ನು ಹೆಚ್ಚಿಸಿ, ಕಾನೂನು ಉಲ್ಲಂಘನೆಗೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರೇಣುಪ್ರಸಾದ್ ಅವರು ಮಾತನಾಡಿ, ತಂಬಾಕು ನಿಯಂತ್ರಣ ಕಾನೂನು ಉನ್ನತ ಅನುಷ್ಠಾನಕ್ಕಾಗಿ ಹೊಸದುರ್ಗ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಕಾನೂನು ಪರಿಣಾಮಕಾರಿಯಾಗಿಸಲು ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಅಲ್ಲದೆ ದಂಡವನ್ನೂ ವಿಧಿಸಲಾಗುತ್ತಿದೆ ಎಂದು ಹೇಳಿದರು
ಹೊಸದುರ್ಗ ತಾಲ್ಲೂಕು ಒಂದರಲ್ಲೇ, ಒಟ್ಟು 211 ಪ್ರಕರಣ ದಾಖಲಿಸಿ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧದಡಿ 112 ಪ್ರಕರಣ ದಾಖಲಿಸಿ 7820 ರೂ. ದಂಡ. 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಸಂಬಂಧಿಸಿದಂತೆ 96 ಪ್ರಕರಣ ದಾಖಲಿಸಿ 7000 ರೂ. ದಂಡ. ಶಿಕ್ಷಣ ಸಂಸ್ಥೆಗಳ 100 ಗಜದ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ಉಲ್ಲಂಘಿಸಿದ 03 ಪ್ರಕರಣ ದಾಖಲಿಸಿ 150 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು
ತಾಲ್ಲೂಕಿನಲ್ಲಿ ತಂಬಾಕು ಉತ್ಪನ್ನಗಳ 14 ಜಾಹೀರಾತು ಫಲಕಗಳನ್ನು ತೆರವುಗೊಳಿದ್ದು, ಜನ ಜಾಗೃತಿಗೆ ಸಂಬಂಧಿಸಿದ 88 ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ್ದು, 256 ಪ್ರಕರಣ ದಾಖಲಿಸಿ 18600 ರೂ. ದಂಡ ವಿಧಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಬಿ. ಮಹಂತೇಶ್, ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
