ದಾವಣಗೆರೆ:
ಪ್ರತಿ ಜಿಲ್ಲೆಗಳಲ್ಲೂ ಪ್ರತ್ಯೇಕ ಪುರುಷರ ಮತ್ತು ಮಹಿಳೆಯರ ಕ್ರೀಡಾ ನಿಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಮಾಜಿ ಶಾಸಕ ಕೆ.ಮಲ್ಲಪ್ಪ ಒತ್ತಾಯಿಸಿದ್ದಾರೆ.
ನಗರದ ಆಂಜನೇಯ ಬಡಾವಣೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಎಜಿಬಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ದಾವಣಗೆರೆ ವಿವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಮತ್ತು ಜುಡೋ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಪ್ರತಿ ಜಿಲ್ಲೆಗಳಲ್ಲೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಕ್ರೀಡಾ ನಿಲಯ ನಿರ್ಮಾಣ ಮಾಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.
ದೇಶೀಯ ಕ್ರೀಡೆಯಾಗಿರುವ ಕುಸ್ತಿ ಪ್ರಾಚೀನ ಕಲೆಯಾಗಿದ್ದು, ಕ್ರೀಡಾಪಟುಗಳಿಗೆ ಒಳ್ಳೆಯ ನಡತೆ ಹಾಗೂ ಶಿಸ್ತು ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಓದು ಮತ್ತು ಕ್ರೀಡೆ ಎರಡಕ್ಕೂ ಸಮಾನ ಆದ್ಯತೆ ನೀಡುವ ಮೂಲಕ ಸಾಧನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಹೀಗಾಗಿ, ಕ್ರೀಡಾಪಟುಗಳು ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಅಲ್ಲದೆ, ತೀರ್ಪುಗಾರರು ಪಕ್ಷಪಾತ, ಬೇಧ-ಭಾವ ಮಾಡದೇ, ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ತೀರ್ಪು ನೀಡಬೇಕೆಂದು ಕಿವಿಮಾತು ಹೇಳಿದರು.
ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕ್ರೀಡಾಪಟುಗಳಿಗೆ ಸರ್ಕಾರದಿಂದ ಉದ್ಯೋಗ ಕೊಡಿಸುವ ಕೆಲಸವಾಗಬೇಕೆಂದು ಆಗ್ರಹಿಸಿದರು. ಕುಸ್ತಿ ಕ್ರೀಡೆಯಲ್ಲಿ ಇತ್ತೀಚಿಗೆ ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಇವರ ಸಾಧನೆಗೆ ತರಬೇತುದಾರರ ಪರಿಶ್ರಮವೂ ಕಾರಣವಾಗಿದೆ. ಆದ್ದರಿಂದ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ಪ್ರೋತಸಾಹಿಸುವ ಕೆಲಸ ಆಗಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕು. ಉದ್ದಿಮೆದಾರರು ಹಾಗೂ ಕಂಪನಿಗಳು ಕ್ರೀಡಾಪಟುಗಳನ್ನು ದತ್ತು ಪಡೆದು, ಉದ್ಯೋಗ ನೀಡಿ ಕ್ರೀಡಾಪಟುಗಳನ್ನು ಪೋಷಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಎಸ್ ಕೆ ಪಿ ವಿದ್ಯಾಪೀಠದ ಪ್ರಭಾರ ಅಧ್ಯಕ್ಷ ಕೆ.ಜಿ.ಸತ್ಯನಾರಾಯಣ ಶೆಟ್ಟಿ, ಅನಂತರಾಮ್ ಶೆಟ್ಟಿ ಕೆ.ಎನ್, ಆರ್.ಎಲ್.ಪ್ರಭಾಕರ್, ದಾನಪ್ಪ, ಮಂಜಪ್ಪ, ವಿನೋದ್, ಅಂಜನ್, ಗೋವಿಂದರಾಜ್ ಶೆಟ್ಟಿ, ಶಿವಾನಂದ, ಎಸ್.ಎಂ.ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ