ಶಿರಾ ಉಪ ಚುನಾವಣಾ ಸಮರದತ್ತ ಎಲ್ಲರ ಚಿತ್ತ

ಶಿರಾ

    ಪ್ರತಿ ವರುಷವೂ ಬರಕ್ಕೆ ತುತ್ತಾಗುತ್ತಾ ತಾಲ್ಲೂಕಿನ ಇಡೀ ರೈತ ಸಮುದಾಯವನ್ನು ಬಡತನದ ದವಡೆಗೆ ನೂಕುತ್ತಿರುವ ಮಳೆರಾಯ ಈ ವರ್ಷ ಮುಂಗಾರು ಆರಂಭಗೊಂಡಾಗಿನಿಂದ ಹದವರಿತು ಭೂಮಿಯನ್ನು ತಣಿಸಿದನು. ಆದರೆ ಕೆರೆ-ಕಟ್ಟೆ ತುಂಬುವಂತಹ ಮಳೆ ಕೊನೆಗೂ ತಾಲ್ಲೂಕಿನಾದ್ಯಂತ ಬಾರಲೇ ಇಲ್ಲ.

     ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳು ಹನಿ ನೀರಿಲ್ಲದೆ ಬಣಗುಡುತ್ತಿವೆ. ಕೇವಲ 10 ದಿನಗಳು ಮಾತ್ರ ಕಳ್ಳಂಬೆಳ್ಳ ಕೆರೆಗೆ ಹರಿದ ಹೇಮಾವತಿ ನೀರು ಇನ್ನೂ ಕೂಡ ಶಿರಾ ದೊಡ್ಡ ಕೆರೆಯನ್ನು ತಲುಪಿಯೇ ಇಲ್ಲ. ಇಡೀ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಿಗಡಾಯಿಸಿದ್ದು, ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಸರಿಯಾಗಿ ಪಡೆಯಲಾಗದೆ ಜನ ಹೈರಾಣಾಗಿ ಹೋಗಿದ್ದಾರೆ.

     ಇಂತಹ ಸಂದಿಗ್ದತೆಯ ಸಮಯದಲ್ಲಿಯೇ ಅನಾರೋಗ್ಯದಿಂದ ಆಸ್ಪತ್ರೆಯನ್ನು ಸೇರಿ ಗುಣಮುಖರಾಗದೆ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ್ ಅವರು ಮೃತಪಟ್ಟಿದ್ದು, ಅವರ ಸಾವಿನಿಂದ ಜೆಡಿಎಸ್ ಪಕ್ಷ ಆನೆ ಬಲವನ್ನು ಕಳೆದುಕೊಂಡಂತಾಗಿದೆ. ಶಾಸಕರ ಸಾವಿನ ಬೆನ್ನ ಹಿಂದೆಯೆ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆಯೂ ಕೂಡ ಅನಿವಾರ್ಯವಾಗಿದೆ.

    ಇಡೀ ಜಿಲ್ಲೆಯ ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯ್ತಿಗಳ ಸದಸ್ಯತ್ವಕ್ಕೆ ನಡೆದ ಎಲ್ಲಾ ಚುನಾವಣೆಗಳು ಪೂರ್ಣ ಗೊಂಡಿದ್ದರೂ, ಶಿರಾ ನಗರಸಭೆಗೆ ಮಾತ್ರ ಈವರೆಗೂ ಚುನಾವಣೆ ನಡೆದೆ ಇಲ್ಲ. ಇನ್ನೇನು ಗ್ರಾಮ ಪಂಚಾಯ್ತಿಗಳ ಚುನಾವಣೆಗಳೂ ಸಮೀಪಿಸುತ್ತಿರುವ ಬೆನ್ನ ಹಿಂದೆಯೆ, ಕ್ಷೇತ್ರದ ವಿಧಾನಸಭೆಗೆ ಉಪ ಚುನಾವಣೆಯೂ ನಡೆಯಬೇಕಿದೆ. ಇಡೀ ಕ್ಷೇತ್ರದ ರಾಜಕೀಯ ದುರೀಣರು ಇದೀಗ ಪುರುಸೊತ್ತಿಲ್ಲದೆ ಚುನಾವಣೆಗಳನ್ನು ಎದುರಿಸಲೇಬೇಕಿದೆ.

    ಒಂದಾದ ನಂತರ ಒಂದರಂತೆ ಚುನಾವಣೆಗಳು ಸರದಿಯೋಪಾದಿಯಲ್ಲಿ ಬರಲಿದ್ದು, ಮತದಾನ ಮಾಡುವ ಮತದಾರ ಕೂಡ ತನ್ನ ಜನ ಪ್ರತಿನಿಧಿಗಳ ಆಯ್ಕೆಗಾಗಿ ತಲೆ ಕೆಡಿಸಿಕೊಳ್ಳುವ ಸನ್ನಿವೇಶವೂ ಸೃಷ್ಟಿಯಾಗಿದೆ. ಕೋವಿಡ್ ಸಂಕಷ್ಟ ದೂರವಾದೊಡನೆ ಚುನಾವಣೆಗಳ ಮೇಲೆ ಚುನಾವಣೆಗಳು ಆಗಮಿಸಿ ಇಡೀ ಶಿರಾ ಕ್ಷೇತ್ರವೇ ರಣ ರಂಗವಾಗಲಿದೆ.

    ಈ ಎಲ್ಲಾ ಚುನಾವಣೆಗಳಿಗಿಂತಲೂ ಬಹು ಗಮನ ಸೆಳೆಯುವ ಚುನಾವಣೆಯೆ ಅಸೆಂಬ್ಲಿಯ ಉಪ ಚುನಾವಣೆಯಾಗಿದೆ. ಶಾಸಕ ಸತ್ಯನಾರಾಯಣ್ ನಿಧನ ಹೊಂದಿದ ಕೆಲ ತಾಸುಗಳ ನಂತರವೆ ಯಾವುದೇ ಎಗ್ಗೂ ಸಿಗ್ಗೂ ಇಲ್ಲದೆ ವಿವಿಧ ಪಕ್ಷಗಳ ರಾಜಕೀಯ ದುರೀಣರು ಮುಂಬರುವ ಉಪ ಚುನಾವಣೆಯ ಲೆಕ್ಕಾಚಾರಗಳಿಗೆ ಜೋತು ಬಿದ್ದೆ ಬಿಟ್ಟಿದ್ದಾರೆ.

     ಉಪ ಚುನಾವಣೆಗೆ ಶಾಸಕರ ಸಾವಿನ ಹಿಂದೆಯೇ ರಾಜಕೀಯದ ಹಾವುಗಳು ಬುಸುಗುಡಲಾರಂಭಿಸಿದ್ದು, ನಿಜಕ್ಕೂ ಸಾವಿನ ಮನೆಯಲ್ಲಿ ಗಳ ಹಿರಿಯುವಂತಹ ಕೆಲಸ ಶಾಸಕರು ಮೃತರಾಗಿ ಅವರ ಅಂತ್ಯ ಸಂಸ್ಕಾರ ಅಂತ್ಯಗೊಳ್ಳುವ ಮುನ್ನವೇ ನಡೆದಿದ್ದು ವಿಪರ್ಯಾಸವೇ ಸರಿ.
ಶಾಸಕರು ನಿಧನ ಹೊಂದಿದ್ದಾರೆಂಬ ನಿಖರ ಮಾಹಿತಿ ಲಭ್ಯವಾದ ಕೂಡಲೇ ಕ್ಷೇತ್ರದ ರಾಜಕಾರಣದ ಮೂಸೆಯಲ್ಲಿ ಸಂಚಲನವೇ ಮೂಡಿದ್ದು, ನಿಜಕ್ಕೂ ಪ್ರಜ್ಞಾವಂತರು ಸಂಕಟಪಡುವಂತಾಯಿತು. ಸತ್ಯಣ್ಣನ ನಂತರದ ಕ್ಷೇತ್ರದ ರಾಜಕೀಯ ದುರೀಣರ ಸೋಲು-ಗೆಲುವಿನ ಲೆಕ್ಕಾಚಾರಗಳು ಜನರ ನಾಲಿಗೆಯಲ್ಲಿ ದಿನ ದಿನಕ್ಕೂ ನಲಿದಾಡಲಾರಂಭಿಸಿದವು.

    ಶಿರಾ ತಾಲ್ಲೂಕಿನ ಸಣ್ಣ-ಪುಟ್ಟ ಅಂಗಡಿಗಳು, ತಂಗುದಾಣಗಳು, ರಾಜಕೀಯ ದುರೀಣರ ಕಚೆÉೀರಿಗಳ ಆವರಣಗಳು ಆಯಾ ಪಕ್ಷದ ಬೆಂಬಲಿಗರ ಗುಂಪು ಗೂಡುವಿಕೆಯನ್ನು ಮೈ ತಳೆದುಕೊಂಡು ಕೆಲ ರಾಜಕಾರಣಿಗಳಂತೂ ಮುಂದಿನ ಚುನಾವಣೆಯ ಬಿಸಿ ಗಾಳಿಗೆ ಮೈವೊಡ್ಡಿ ಚಳಿ ಬಿಡಿಸಿಕೊಳ್ಳುವ ದೃಶ್ಯ್ಯವಂತೂ ಇದೀಗ ಸಾಮಾನ್ಯವಾಗಿಬಿಟ್ಟಿದೆ.

    ಸತ್ಯಣ್ಣ ಹೋದರು ನಿಜ..ಹಾಗಾದರೆ ಮುಂದಿನ ಶಾಸಕರು ಯಾರಾಗಬಹುದೆಂಬ ಗಣಿತದ ಲೆಕ್ಕಾಚಾರಗಳಂತೂ ಶಾಸಕರು ನಿಧನರಾದ ದಿನದಿಂದ ಇಲ್ಲಿಯವರೆಗೂ ನಡೆಯುತ್ತಲೇ ಇವೆ. ಜೆಡಿಎಸ್ ಪಕ್ಷದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿಕೊಂಡು, ಕಾರ್ಯಕರ್ತರನ್ನು ಒಂದೇ ತೆಕ್ಕೆಯಲ್ಲಿ ತಂದುಕೊಂಡು, ಆಡಳಿತಾರೂಢ ಸರ್ಕಾರದ ಆಸೆ ಅಮಿಷಕ್ಕೂ ಬಲಿಯಾಗದೆ, ಪಕ್ಷದ ಸಿದ್ದಾಂತಗಳನ್ನು ಜೋಳಿಗೆಯಲ್ಲಿಟ್ಟುಕೊಂಡು ತಿರುಗಾಡಿದ ಸತ್ಯಣ್ಣನ ನಿಧನದ ನಂತರ ಆ ಪಕ್ಷದಲ್ಲೀಗ ನೀರಸ ಮೌನವಂತೂ ಆವರಿಸಿದೆ.

    ಶಾಸಕರ ನಿಧನದ ನಂತರ ಮುಂದಿನ 6 ತಿಂಗಳ ಅವಧಿಯೊಳಗೆ ಉಪ ಚುನಾವಣೆಯಂತೂ ನಡೆಯಲೇಬೇಕು. ಇದು ನಿಯಮವೂ ಕೂಡ. ಕಳೆದ ಚುನಾವಣೆಯಲ್ಲಿ ಪರಾಜಯಗೊಂಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಆ ಪಕ್ಷದಿಂದ ಅಭ್ಯರ್ಥಿಯಾಗುವುದು ಖಚಿತ ಎಂಬ ಮಾತನ್ನು ಮುಂದಿಟ್ಟುಕೊಂಡ ರಾಜಕೀಯ ಲೆಕ್ಕಾಚಾರಸ್ಥರು ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿ ಯಾರಾಗಬಹುದೆಂಬ ಅಂದಾಜಿನ ಪರಾಮರ್ಶೆ ನಡೆಸುತ್ತಿರುವುದು ಸಹಜವಾಗಿದೆ.

    ಶಾಸಕರ ಸಾವು ನಿಜಕ್ಕೂ ಅನೇಕ ರಾಜಕೀಯ ಮುಖಂಡರಿಗೆ ಪಕ್ಷಾತೀತವಾಗಿಯೂ ನೋವು ತಂದಿರುವುದು ಹಗಲಿನಷ್ಟೇ ಸತ್ಯವಾದರೂ, ಸತ್ಯಣ್ಣನ ಸಾವಿನ ಹಿಂದೆ ಉಪ ಚುನಾವಣೆ ನಡೆಸುವುದು ಕೂಡ ಅಷ್ಟೇ ಅನಿವಾರ್ಯವಾಗಿದೆ. ಈಗ ನಡೆಯುವ ಉಪ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

    ಶಿರಾ ಕ್ಷೇತ್ರದ ರಾಜಕೀಯ ವಲಯದ ಬಗ್ಗೆ ಹಾಗೂ ಮುಂದಿನ ಉಪ ಚುನಾವಣೆಯ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ದೃಶ್ಯ ಮಾಧ್ಯಮಗಳು ಹಾಗೂ ಸಮೂಹ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಬ್ರೇಕಿಂಗ್ ನ್ಯೂಸ್‍ಗಳಂತೂ ಶಿರಾ ಕ್ಷೇತ್ರದ ಮತದಾರನ ತಲೆಯನ್ನು ಕೆಡಿಸಿಬಿಟ್ಟಿವೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಬಹುತೇಕ ಮಂದಿ ಉಪ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದಲಾದರೂ ಸರಿ ಟಿಕೆಟ್ ಪಡೆಯಲು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇನ್ನೂ ಎರಡು ವರ್ಷಕ್ಕೂ ಹೆಚ್ಚಿನ ಅವಧಿ ಬಾಕಿ ಇರುವ ಈ ಕ್ಷೇತ್ರ ಚುನಾವಣೆಗೂ ಮುನ್ನವೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link