ಹಾವೇರಿ
ದೇಶಕ್ಕಾಗಿ ಮಡಿದ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರಂತಹ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು.
ಹಾವೇರಿಯ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ ಅವರುಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ 1-4-1943 ರಂದು ಜೀವ ಬಲಿದಾನ ಮಾಡಿದ ಸ್ಮರಣೆಯ ಅಂಗವಾಗಿ ಸೋಮವಾರ ಹುತಾತ್ಮರ ವೀರಸೌಧ ಆವರಣದಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾದ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪೀತ ಮಹಾತ್ಮಗಾಂಧೀಜಿವರ ಅನುಯಾಯಿಗಳಾದ ಮೈಲಾರ ಮಹದೇವಪ್ಪ ಅವರು ಅಪಾರ ದೇಶಪ್ರೇಮ ಹೊಂದಿದ್ದರು. ಮಹದೇವಪ್ಪನವರು ಪರಕೀಯರ ದುರಾಡಳಿತ ವಿರುದ್ಧ ಹೋರಾಡಲು ತಮ್ಮದೇ ತಂತ್ರಗಾರಿಕೆ ರೂಪಿಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಹೋರಾಟಗಾರರ ಕೊಡುಗೆ ಅಪಾರವಾಗಿದೆ. ಅವರ ಜೀವನ ಕುರಿತು ಇಂದಿನ ಯುವ ಸಮೂಹಕ್ಕೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸದಾನಂದಗೌಡ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೆ ಹಾಗೂ ಯುವ ಶಕ್ತಿಗೆ ಕುಟುಂಬ ಸೇವೆಗಿಂತ ರಾಷ್ಟ್ರ ಸೇವೆ ಮುಖ್ಯವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಮತದಾರರಿಗೆ ಪ್ರತಿಜ್ಞಾವಿಧಿ:
ಇದೇ 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರೂ ತಪ್ಪದೇ ಮತ ಚಲಾಯಿಸಿ ಸುಭದ್ರ ಪ್ರಜಾಪ್ರಭುತ್ವ ಕಟ್ಟುವಲ್ಲಿ ಯಶಸ್ವಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಕರೆ ನೀಡಿದರು.
ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಸಾಹಿತಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿದ ಅವರು ಪ್ರಜಾಪ್ರಭುತ್ವದ ಯಶಸ್ವಿಗೆ ನೈತಿಕ ಮತದಾನ ಅಗತ್ಯವಾಗಿದೆ. ತಾವೆಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ವಿ.ಎನ್.ತಿಪ್ಪನಗೌಡ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಬಸವ ಜ್ಯೋತಿ, ಮಂಜುಳಾ ಅಕ್ಕಿ, ಮಂಜುಳಾ ಪೂಜಾರ, ಮಹಾದೇವಪ್ಪ, ಡಾ.ನರೇಂದ್ರ, ವೀರಣ್ಣ, ಚನ್ನವ್ವ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
