ಹಾವೇರಿ
ಹಸಿದವರಿಗೆ ಅನ್ನದಾನ, ರೋಗಿಗಳಿಗೆ ರಕ್ತದಾನ ಮಾಡುವುದು ಎಷ್ಟು ಶ್ರೇಷ್ಠವೋ ಅದೇ ರೀತಿ ಮತದಾನ ಮಾಡುವುದು ಶ್ರೇಷ್ಠ ಕೆಲಸವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷ ತುಂಬಿದ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಎಂದು ಕರೆ ನೀಡಿದರು.
ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಗುರುಭವನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಒಂದೊಂದು ಮತವು ಅತ್ಯಮೂಲ್ಯವಾದದ್ದು. ಒಂದು ಮತದಿಂದ ವಿಜೇತರಾಗಿದ್ದಾರೆ ಹಾಗೂ ಒಂದು ಮತದ ಅಂತರದಿಂದ ಪರಾಭವಗೊಂಡಿರುವ ಉದಾಹರಣೆಗಳಿವೆ. ಸಂವಿಧಾನದತ್ತವಾಗಿ ದೊರೆತಿರುವ ಮತದಾನದ ಹಕ್ಕನ್ನು ಅರಿತುಕೊಂಡು ಗುರುತರ ಜವಾಬ್ದಾರಿಯಿಂದ ಒಳ್ಳೆಯ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಗಿಡ ಇದ್ದಹಾಗೆ ಮತದಾರ ನೀರು ಇದ್ದಹಾಗೆ.
ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯಲು ಮತದಾರರು ಮತ ಎಂಬ ನೀರು ಹಾಕಬೇಕು. ಯುವ ಜನಾಂಗ ಮತದಾನದ ಪ್ರಕ್ರಿಯೆಲ್ಲಿ ಭಾಗವಹಿಸಬೇಕು ಹಾಗೂ ತಾವು ಗೆಲ್ಲಿಸುವ ಅಭ್ಯರ್ಥಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಾರೆ ಎಂಬ ಅರಿವಿರಲಿ. ನೀವು ಸಹ ನಾಳೆಯ ಒಳ್ಳೆಯ ನಾಯಕರಾಗಿ ಹೊರಮ್ಮಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಜಗದೀಶ ಅವರು ಮಾತನಾಡಿ, ಮತದಾನದಲ್ಲಿ ಎಲ್ಲರೂ ಭಾಗವಹಿಸುವ ಕುರಿತಂತೆ ಭಾರತ ಚುನಾವಣಾ ಆಯೋಗ ಮತದಾರರಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಷ್ಟ್ರದ ದಿಕ್ಕನ್ನು ಬದಲಿಸುವ ಶಕ್ತಿ ಮತದಾನಕ್ಕಿದೆ. ಕಾರಣ 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರು ಮಾತನಾಡಿ, ದೇಶದ 10.60 ಲಕ್ಷ ಮತದಾನ ಕೇಂದ್ರಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಯುವ ಜನಾಂಗಕ್ಕೆ ಪ್ರಜಾಪ್ರಭುತ್ವದ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾರತ ಪ್ರಪಂಚದಲ್ಲಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಎಲ್ಲರೂ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಬಹಳ ಅವಶ್ಯವಾಗಿದೆ. ಒಂದು ದಿನ ಊಟ ಹಾಗೂ ದೇವರ ಪೂಜೆ ಬಿಟ್ಟಿರಬಹುದು, ಆದರೆ ಮತ ಚಲಾಯಿಸುವುದುನ್ನು ಮಾತ್ರ ಬಿಡಬೇಡಿ ಎಂದು ಹೇಳಿದರು.ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.81 ರಷ್ಟು ಮತದಾನವಾಗಿದೆ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಮತದಾನವಾಗಬೇಕು. ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಜಿಲ್ಲೆಯಲ್ಲಿ 1470 ಮತಗಟ್ಟೆಗಳಿದ್ದು, 12.40 ಲಕ್ಷ ಮತದಾರರಿದ್ದಾರೆ. ಚುನಾವಣೆಯಲ್ಲಿ ಶತಾಯುಷಿಗಳು, ವಿಕಲಚೇನತರು ಮತದಾನ ಮಾಡುತ್ತಾರೆ. ಯುವ ಮತದಾರರು ಸುಶಿಕ್ಷಿತರು, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಜನತೆ ದೇಶದ ಬೆನ್ನೆಲುಬು 01-01-2019ಕ್ಕೆ 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಬೇಕು. ಚುನಾವಣೆಯನ್ನು ಸುಗಮ ಮತದಾನ ಧ್ಯೇಯದೊಂದಿಗೆ ಚುನಾವಣೆ ನಡೆಸಲಾಗುತ್ತದೆ.
ಎಲ್ಲರೂ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳೀದರು.ಪ್ರತಿಜ್ಞಾವಿಧಿ ಬೋಧನೆ: ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಾಯ್.ಎಲ್..ಲಾಡಖಾನ ಅವರು ಸಮಾರಂಭದಲ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರಾರದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆಯನ್ನು ಎತ್ತಿಹಿಡಿಯುತ್ತೇವೆ ಎಂದು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭಿತರಾಗಿ ಮತ್ತು ಧರ್ಮ, ಜಾತಿ, ಜನಾಂಗ, ಭಾಷೆ ಅಥವಾ ಯಾವುದೇ ಪ್ರೇರಣೆ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.
ನವ ಮತದಾರರಿಗೆ ಗುರುತಿನ ಚೀಟಿ ವಿತರಣೆ: 18 ವರ್ಷ ತುಂಬಿದ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಮತದಾರರಿಗೆ ಸಮಾರಂಭದಲ್ಲಿ ಭಾರತ ಚುನಾವಣಾ ಆಯೋಗದ ಮತದಾರರ ಗುರುತಿನ ಚೀಟಿಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಅಂಧ ವ್ಯಕ್ತಿಗಳಿಗೆ ಬ್ರೈನ್‍ಲಿಪಿಯುಳ್ಳ ಮತದಾರರ ಗುರುತಿನ ಚೀಟಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಹ ಮತದಾನ ಗುರುತಿನ ಚೀಟಿ ವಿತರಿಸಲಾಯಿತು.
ಬಹುಮಾನ: ಮತದಾರರ ಜಾಗೃತಿಗಾಗಿ ಹಮ್ಮಿಕೊಂಡ ಪ್ರಬಂಧ, ಚಿತ್ರಕಲೆ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಸಿ.ಪೀರಜಾದೆ, ಚುನಾವಣಾ ತಹಶೀಲ್ದಾರ ಡಾ.ಪ್ರಶಾಂತ ನಾಲವಾರ, ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ತಹಶೀಲ್ದಾರ ಶಿವಕುಮಾರ ಎಚ್.ಸಿ. ಇತರರು ಉಪಸ್ಥಿತರಿದ್ದರು.
ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ ವಂದಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.ಗಮನಸೆಳೆದ ಸೈಕಲ್ ಜಾಥಾ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಗುರುಭವನದವರೆಗೆ ಆಯೋಜಿಸಲಾದ ಸೈಕಲ್ ಜಾಥಾ ಎಲ್ಲರ ಗಮನಸೆಳೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ