ಬಳ್ಳಾರಿ
ಮಕ್ಕಳ ಮರಣಕ್ಕೆ ಕಾರಣವಾಗುವ ದಡಾರ-ರುಬೆಲ್ಲಾ ಕಾಯಿಲೆಯನ್ನು ಹೊಡೆದೋಡಿಸಲು ಸಾರ್ವಜನಿಕರು ವೈದ್ಯಾಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಶಿವರಾಜ್ ಹೆಡೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ದಡಾರ-ರುಬೆಲ್ಲಾ ನಿವಾರಣೆ ಕುರಿತ ಪ್ರೇರಣಾ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸರ್ಕಾರದ ಆಶಯದಂತೆ 2023ಕ್ಕೆ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಮಾಡಲು ಪ್ರತಿಯೊಂದು ಜ್ವರದ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ದೇಶದ ಆಸ್ತಿಯಾದ ಮಕ್ಕಳ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ತಮ್ಮಲ್ಲೆರ ಮೇಲಿದೆ ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅನಿಲ್ ಕುಮಾರ್ ಜಿಲ್ಲೆಯಲ್ಲಿ 2016 ರಿಂದ ದಡರಾ ನಿರ್ಮೂಲನೆ ಹಾಗೂ ರುಬೆಲ್ಲಾ ನಿಯಂತ್ರಣದ ಅಡಿಯಲ್ಲಿ 15ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆಯ ಆಂದೋಲನದ ರೂಪದಲ್ಲಿ ಹಾಕಲಾಗಿದ್ದು. ಪ್ರಸ್ತುತ ನಿರಂತರ ನಿಗಾವಣೆಯ ಮೂಲಕ ರೋಗಗಳನ್ನು ನಿಯಂತ್ರಿಸಲಾಗುತ್ತಿದೆ. ಈ ದಿಶೆಯಲ್ಲಿ ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ಮಕ್ಕಳ ಆರೋಗ್ಯವನ್ನು ಕೂಲಂಕುಷವಾಗಿ ಪರೀಕ್ಷಿಸಲು ಎಲ್ಲಾರೂ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಗುರುನಾಥ್ ಬಿ ಚೌವ್ಹಾಣ್, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜಶೇಖರರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಡಾ. ಕಾಶಿಪ್ರಸಾದ್, ಡಾ. ಲಕ್ಷ್ಮೀಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲೆಯ ತಾಲ್ಲೂಕ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ವಿಮ್ಸ್ ವೈದ್ಯಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ