ಪ್ರತಿ ವ್ಯಕ್ತಿ ತಾನೆ ಭಾರತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ

ಹಾವೇರಿ :

     ಪ್ರತಿ ವ್ಯಕ್ತಿಯು ತಾನೊಬ್ಬ ಭಾರತ ಎಂದು ಅರಿತು ಮುನ್ನಡೆಯುವದಿಲ್ಲವೋ ಅಲ್ಲಿಯವರೆಗೂ ಭಾರತ ಪ್ರಗತಿಹೊಂದುವುದಕ್ಕೆ ಸಾಧ್ಯವಿಲ್ಲ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

     ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಧರ್ಮೋತ್ತೇಜಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂರನೇ ದಿನ ಗುರುವಾರ ಸಂಜೆ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

     ಪ್ರಸಕ್ತ ಭಾರತೀಯ ಪ್ರಜೆಗಳಲ್ಲಿ ಇಂದಿಗೂ ತಾನೊಬ್ಬ ಭಾರತ ಎಂಬ ಭಾವನೆ ಬಂದಿಲ್ಲ. ಬಹುತೇಕರು ತಮಗಾಗಿ ದುಡಿಯುತ್ತಿದ್ದೆವೆ ಎನ್ನುವುದು ಇದೆ. ವಿಶ್ವದ ಕೆಲ ಸಣ್ಣ ಸಣ್ಣ ರಾಷ್ಟ್ರಗಳಲ್ಲಿ ಪ್ರಜೆಗಳು ತಾನೊಬ್ಬ ರಾಷ್ಟ್ರ ಎಂದು ತಿಳಿದಿರುವುದರಿಂದ ಆ ದೇಶಗಳು ಇಂದು ಬಹಳ ಪ್ರಗತಿಯನ್ನು ಹೊಂದಿವೆ ಎಂದರು.

     ಮಠಗಳು ಜನರಲ್ಲಿ ಧಾರ್ಮಿಕ ಮತ್ತು ಬೌದ್ಧಿಕವಾದ ಜ್ಞಾನವನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಅಂದಾಗ ಮಾತ್ರ ಭಾರತದ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು

       ಯೋಧರಿಗೊಂದು ನಮನ ಸಲ್ಲಿಸುವ ಮಾತುಗಳನ್ನಾಡಿದ ಶಶಿಧರ ಹೊಸಳ್ಳಿ, ಪಾಕ್ ಭಾರತದ ವಿರುದ್ಧ ಅನೇಕ ಬಾರಿ ಯುದ್ಧವನ್ನು ಮಾಡಿದರು ಗೆದ್ದಿಲ್ಲ. ಹೀಗಾಗಿ ಪಾಕ್ ತನ್ನ ನರಿ ಬುದ್ಧಿಯನ್ನು ಬಿಡದೇ ವಾಮ ಮಾರ್ಗವನ್ನು ಅನುಸರಿಸಿ ಭಯೋತ್ಪಾದಕರನ್ನು ಭಾರತದೊಳಕ್ಕೆ ಕಳಿಸಿ ಪರೋಕ್ಷ ಯುದ್ಧವನ್ನು ಮಾಡುತ್ತಿದೆ. ಆದರೆ ಭಾರತ ಪ್ರಸಕ್ತ ರಾಜ ತಾಂತ್ರಿಕವಾಗಿ ಗೆಲುವುದನ್ನು ಸಾಧಿಸುವ ಮೂಲಕ ಪಾಕ್‍ನ್ನು ಒಂಟಿಯಾಗಿ ಮಾಡುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.

        ಭಾರತದ ವಿರುದ್ಧ ಕಳೆದ ಹಲವು ದಶಕಗಳಿಂದಲೂ ಪಾಕಿಸ್ಥಾನ ಮಾಡುತ್ತಿರುವ ನೀಚ ಕೃತ್ಯಗಳ ಕುರಿತು ಎಳೆ ಎಳೆಯಾಗಿ ವಿವರಿಸಿದರು. ಇಂದು ಭಾರತ ಏನಾದರೂ ನೆಮ್ಮದಿಯಿಂದ ಇದೆ ಎಂದಾದರೆ ಅದು ಭಾರತೀಯ ಯೋಧರ ತ್ಯಾಗ ಮತ್ತು ಬಲಿದಾನದಿಂದ ಎಂದು ಹೇಳಿದರು.

        ಶಾಸಕ ನೆಹರು ಓಲೇಕಾರ ಮಾತನಾಡಿ, ಭಾರತೀಯ ಯೋಧರ ಬಲಿದಾನಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ನಮ್ಮ ಯೋಧರಿಗೆ ಆತ್ಮ ಸ್ಥೈರ್ಯ ಮತ್ತು ಅವರ ಬೆಂಬಲಕ್ಕೆ ನಾಡೆಲ್ಲ ನಿಲ್ಲುವುದು ಬಹಳ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ನಮ್ಮೊಂದಿಗೆ ಇಂದಿನ ಯುವ ಜನಾಂಗ ಮತ್ತು ಮಕ್ಕಳನ್ನು ಕರೆತರುವ ಕೆಲಸವನ್ನು ಮಾಡಬೇಕು. ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವದಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

         ಸಮ್ಮುಖವಹಿಸಿದ್ದ ಅಭಿನವರುದ್ರಚನ್ನಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ಹರಸೂರು ಬಣ್ಣದಮಠದಲ್ಲಿ ಆಯೋಜಿಸುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಹಾಗೂ ಅಷ್ಟೇ ಪ್ರಮಾಣದಲ್ಲಿ ಪ್ರೋತ್ಸಾಹವನ್ನು ನೀಡುತ್ತಿರುವುದು ಸಂತೋಷದಾಯಕ. ಎಲ್ಲ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ ಎಲ್ಲರೂ ಅಭಿನಂದನೆಗಳು ಎಂದು ತಿಳಿಸಿದರು.

         ಜಿಲ್ಲೆಯ ಚಿಲ್ಲೂರ ಬಡ್ನಿಯ ಹನುಮಂತಪ್ಪ ಲಮಾಣಿ ಕೆಲ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಜನತೆಯನ್ನು ರಂಜಿಸಿದರು. ವೇದಿಕೆಯಲ್ಲಿ ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ, ಮಾದಿಹಳ್ಳಿಯ ಚನ್ನಮಲ್ಲಿಕಾರ್ಜುನ ಸ್ವಾಮಿಜಿ, ಅಕ್ಕಿಆಲೂರಿನ ಕಬ್ಬಿಣಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಬಿಳಗಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ, ಜಾತ್ರಾ ಮಹೋತ್ಸವದ ಅಧ್ಯಕ್ಷ ಜಗದೀಶ ಕನವಳ್ಳಿ, ಉಪಾಧ್ಯಕ್ಷ ಶಿವಯೋಗಿ ಹುಲಿಕಂತಿಮಠ ಸೇರಿದಂತೆ ಅನೇಕರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತರನ್ನು ಹಾಗೂ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link