ಬಳ್ಳಾರಿ
ಈಗಾಗಲೇ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪ್ರಿಂಟಿಂಗ್‍ಪ್ರೆಸ್‍ದಾರರು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಕರಪತ್ರಗಳನ್ನು ಮುದ್ರಿಸಿಕೊಡುತ್ತಿದ್ದು, ಅದಕ್ಕೆ ಸಂಬಂಧಿಸಿದ ಅಫಿಡವಿಟ್ ಸಮರ್ಪಕವಾಗಿ ತಲುಪಿಸಬೇಕು. ಅಫಿಡವಿಟ್ ಸಲ್ಲಿಸದ ಪ್ರಿಂಟಿಂಗ್ ಪ್ರೆಸ್‍ಗಳಿಗೆ ಬೀಗ ಹಾಕಿ ವಶಕ್ಕೆ ಪಡೆದುಕೊಳ್ಳಲಾಗುವುದು ಮತ್ತು ನೀತಿ ಸಂಹಿತೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ವ್ಯವಸ್ಥಾಪಕರು ಮತ್ತು ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಪತ್ರಗಳು, ಭಿತ್ತಿಪತ್ರಗಳನ್ನು ಮುದ್ರಿಸಿದ ಸಂದರ್ಭದಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಫಿಡವಿಟ್‍ನ್ನು ಅಭ್ಯರ್ಥಿಗಳಿಂದ ಹಾಗೂ ಅವರ ಎರಡು ಸಾಕ್ಷಿಗಳೊಂದಿಗೆ ಭರ್ತಿ ಮಾಡಿಕೊಳ್ಳಬೇಕು. ತಾವು ಕೂಡ ಒಂದು ನಿಗದಿಪಡಿಸಿದ ಅರ್ಜಿ ಭರ್ತಿ ಮಾಡಬೇಕು. ಅವೆರಡು ಅರ್ಜಿಗಳು ಮತ್ತು ಮುದ್ರಿಸಿದ ಕರಪತ್ರಗಳ ಬಿಲ್‍ನೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಅವರಣದೊಳಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬೇಕು. ಒಂದು ವೇಳೆ 48ಗಂಟೆಯೊಳಗೆ ಸಲ್ಲಿಸದೆ ಕರಪತ್ರಗಳು ಮುದ್ರಿಸಿ ವಿತರಿಸಿದ್ದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘಿಸುವ ಕೆಲಸ ಮಾಡದಂತೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಅವರು, ಉಲ್ಲಂಘಿಸಿದ್ರೆ ಪ್ರಿಂಟಿಂಗ್ ಪ್ರೆಸ್ ವಶಪಡಿಸಿಕೊಳ್ಳುವುದರ ಜತೆಗೆ ಪ್ರಜಾಪ್ರತಿನಿಧ್ಯ ಕಾಯ್ದೆ 1951ರ 127ಎ 4ರ ಅನ್ವಯ ಪ್ರಕರಣ 6 ತಿಂಗಳ ಕಾರಾಗೃಹ ವಾಸ ಮತ್ತು 2 ಸಾವಿರ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದಾಗಿನಿಂದ ಇದುವರೆಗೆ ಮುದ್ರಿಸಿದ ಕರಪತ್ರಗಳ ವಿವರವನ್ನು ಸೂಕ್ತ ಅಫಿಡವಿಟ್‍ನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.
70ಲಕ್ಷ ರೂ.ಗಳಿಂತ ಹೆಚ್ಚು ಹಣ ಅಭ್ಯರ್ಥಿಗಳು ಖರ್ಚು ಮಾಡಿದರೇ ಅನರ್ಹರಾಗುತ್ತಾರೆ ಎಂದು ಹೇಳಿದ ಅವರು ತಾವು ಮುದ್ರಿಸಿದ ನಂತರ ಅದರ ವಿವರಗಳನ್ನು ಅಫಿಡವಿಟ್‍ನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಖುದ್ದಾಗಿ ಬಂದು ಸಲ್ಲಿಸಿ ಅಥವಾ ರಿಜಿಸ್ಟರ್ ಪೋಸ್ಟ್ ಆದರೂ ಮಾಡಿ ಎಂದರು.
ಗೈರುಹಾಜರಾದವರಿಗೆ ನೋಟಿಸ್: ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಲೋಕಸಭಾ ಚುನಾವಣಾ ಹಿನ್ನೆಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಅಂತ ಸಹಾಯಕ ಚುನಾವಣಾಧಿಕಾರಿಗಳ ಮೂಲಕ ಮಾಹಿತಿ ನೀಡಿದಾಗಿಯೂ ಸಭೆಗೆ ಗೈರುಹಾಜರಾದವರ ವಿವರ ನೀಡಿ ಮತ್ತು ಅವರಿಗೆ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ನೋಟಿಸ್‍ಗೆ ಸೂಕ್ತ ಕಾರಣ ನೀಡದಿರುವುದು ಕಂಡುಬಂದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಕೇಸ್ ದಾಖಲಿಸಲಾಗುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಕೋಶದ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಅವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಿಂಟಿಂಗ್ ಪ್ರೆಸ್‍ಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ವೆಚ್ಚ ಕೋಶದ ನೋಡಲ್ ಅಧಿಕಾರಿಗಳಾದ ಡಾ.ಸುನೀತಾ ಸಿದ್ರಾಮ್ ಮತ್ತು ಚನ್ನಪ್ಪ, ಎಂಸಿಎಂಸಿ ಸಮಿತಿ ಸದಸ್ಯ ಕಾಳಪ್ಪ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಮೇಘಾ, ಸುನೀತಾ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗೂ ವ್ಯವಸ್ಥಾಪಕರು ಇದ್ದರು.