ಬಳ್ಳಾರಿ
ಬರುವ ಮುಂದಿನ ಒಂದು ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿಯೊಬ್ಬ ಮೇಲ್ವಿಚಾರಕರು ಭೇಟಿ ನೀಡಬೇಕು. ಮಗುವಿನ ತೂಕ ಮತ್ತು ಅಪೌಷ್ಠಿಕತೆಯಿಂದ ನರಳುತ್ತಿರುವ ಹಾಗೂ ಆರೋಗ್ಯಯುತ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆಗಳು ಹಾಗೂ ಸಲಹೆಗಳ ಸಮೇತ ಅಂಗನವಾಡಿವಾರು ಮಾಹಿತಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿಯೊಂದು ಮಗುವಿಗೂ ಆರೋಗ್ಯ ತಪಾಸಣೆಯನ್ನು ಗ್ರೇಡ್‍ವೈಸ್ ಮಾಡಬೇಕು ಮತ್ತು ಮಕ್ಕಳಿಗೆ ಏನಾದರೂ ಸಮಸ್ಯೆ ಇದೆಯೇ? ಮತ್ತು ಬೇರೆ ಯಾವುದಾದರೂ ಕಾಯಿಲೆ ಇದೆಯಾ ಎಂಬುದನ್ನು ಪರಿಶೀಲಿಸಬೇಕು.
ಎರಡ್ಮೂರು ಅಂಗನವಾಡಿ ಸೇರಿಸಿಕೊಂಡು ಹೆಲ್ತ್ ಕ್ಯಾಂಪ್ ಮಾಡಿಸಬೇಕು. ಪ್ರತಿ ಮಗುವಿಗೂ ಆರೋಗ್ಯ ತಪಾಸಣೆ ಮಾಡಿ ಅದರ ವಿವರ ಒಳಗೊಂಡ ಕಾರ್ಡ್ ನಿರ್ವಹಿಸಬೇಕು. ಇದರಿಂದ ಆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಹಿನ್ನೆಲೆ ತಿಳಿದು ಕ್ರಮವಹಿಸಲು ಅನುಕೂಲವಾಗುತ್ತದೆ ಎಂದರು.
ಸಿಡಿಪಿಒಗಳು ತಮ್ಮ ವ್ಯಾಪ್ತಿಯ ಮೇಲ್ವಿಚಾರಕರು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲು ಮತ್ತು ಡಿಎಚ್‍ಒ ಅವರು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಭೆ ಕರೆದು ಅವರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.
ಅಂಗನವಾಡಿವಾರು ಸಮಗ್ರ ಮಾಹಿತಿಯನ್ನು ಒದಗಿಸುವಂತೆ ತಿಳಿಸಿದ ಡಿಸಿ ನಕುಲ್ ಅವರು ನಾನು ಮತ್ತು ಜಿಪಂ ಸಿಇಒ ಅವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಮೇಲ್ವಿಚಾರಕರು ಪರಿಶೀಲಿಸಿರಬೇಕು ಮತ್ತು ಅವರ ಸಹಿ ಹಾಜರಾತಿಯಲ್ಲಿರಬೇಕು; ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.
ಈ ವರ್ಷ 30 ಹೊಸ ಅಂಗನವಾಡಿ ಕೇಂದ್ರಗಳು:
ಜಿಲ್ಲೆಯಲ್ಲಿ ಈ ವರ್ಷ 30 ಹೊಸ ಅಂಗನವಾಡಿ ಕೇಂದ್ರಗಳು ಆರಂಭಿಸುವುದಕ್ಕೆ ಸರಕಾರದಿಂದ ಮಂಜೂರಾತಿ ದೊರಕಿದ್ದು, ಅವುಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಅವರು ಹೇಳಿದರು.
ಜಿಲ್ಲೆಯಲ್ಲಿ 2784 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 561 ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿವೆ. 241 ಕಟ್ಟಗಳು ನಿರ್ಮಾಣ ಹಂತದಲ್ಲಿರುವುದನ್ನು ಸಿಡಿಪಿಒ ಉಷಾ ಅವರಿಂದ ತಿಳಿದುಕೊಂಡ ಡಿಸಿ ನಕುಲ್ ಅವರು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಬೇಕಿದ್ದರೇ ಮುತುವರ್ಜಿ ವಹಿಸಬೇಕು.
ಸೈಟ್ ಸಮಸ್ಯೆ ಇದ್ದರೇ ಜಿಪಂ ಸಿಇಒ ಅವರನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಿ ಎಂದರು. ಕಟ್ಟಡ ಮತ್ತು ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಂಗನವಾಡಿವಾರು ಒಂದು ಫಾರ್ಮೆಟ್ ರೂಪದಲ್ಲಿ ನೀಡಿ ಎಂದು ಹೇಳಿದ ಅವರು ಐಸಿಡಿಎಸ್‍ಗೆ ಸಂಬಂಧಿಸಿದಂತೆ ಮುಂದಿನ ತಿಂಗಳು ಒಂದು ಸಭೆ ನಡೆಸಲಾಗುವುದು. ಅವಾಗ ಸಂಪೂರ್ಣ ಮಾಹಿತಿ ನೀಡಿ; ಅರೇಬರೇ ಮಾಹಿತಿ ನೀಡುವುದರ ಸರಿಯಾದ ಮಾಹಿತಿ ನೀಡಿದರೇ ನಮಗೂ ಸಮಸ್ಯೆ ಅರಿವಾಗಿ ಕ್ರಮವಹಿಸಲು ಅನಕೂಲವಾಗುತ್ತದೆ ಎಂದರು.
4426 ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ: ಜಿಲ್ಲೆಯಲ್ಲಿ 10708 ಮಾಜಿ ದೇವದಾಸಿಯರಿದ್ದು, ಅದರಲ್ಲಿ 8618 ಜನರು 1500 ರೂ.ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. 556 ಜನರಿಗೆ ಸ್ವಯಂ ಉದ್ಯೋಗ ನಡೆಸಲು ಸಾಲ ನೀಡಲಾಗಿದೆ. ಅವರು ಹೈನುಗಾರಿಕೆ, ಕಿರಾಣಿ ಅಂಗಡಿ, ತರಕಾರಿ ಮಾರಾಟ ಸೇರಿದಂತೆ ಇನ್ನೀತರ ಸ್ವಯಂ ಉದ್ಯೋಗ ನಡೆಸುವುದರ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ ಎಂದು ದೇವದಾಸಿ ಪುನರ್ವಸತಿ ಕೇಂದ್ರದ ಅಧಿಕಾರಿ ಸಭೆಗೆ ತಿಳಿಸಿದರು.
ಈ ವರ್ಷ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ. 169 ಗುರಿ ನಿಗದಿಯಾಗಿದೆ ಎಂದು ವಿವರಿಸಿದ್ದಕ್ಕೆ ಅರ್ಜಿಗಳು ಬಂದ ನಂತರ ಶೀಘ್ರ ತೆಗೆದುಕೊಂಡು ಬನ್ನಿ ಹಂಚಿಕೆ ಮಾಡೋಣ ಎಂದು ಡಿಸಿ ನಕುಲ್ ಹೇಳಿದರು.ಮಹಿಳಾ ಅಭಿವೃದ್ಧಿ ನಿಗಮದಿಂದ ಚೇತನ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳಿವೆ ಎಂದು ಅಧಿಕಾರಿ ವಿವರಿಸಿದ್ದಕ್ಕೆ ಪರಿಣಾಮಕಾರಿಯಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರಿಗೆ ಮಾರ್ಕೆಟ್ ವ್ಯವಸ್ಥೆ ಕಲ್ಪಿಸಿಕೊಡುವುದರ ಮೂಲಕ ಬದುಕು ಕಂಡುಕೊಳ್ಳುವುದಕ್ಕೆ ಸಹಕರಿಸುವ ಕೆಲಸ ಮಾಡುವುದಕ್ಕೆ ಕ್ರಮವಹಿಸಿ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಊಟ ಮತ್ತು ತಿಂಡಿಯ ಮೆನು ಇದನ್ನೇ ಮುಂದುವರಿಸಿಕೊಂಡು ಹೋಗಬೇಕೇ ಅಥವಾ ಬದಲಾಯಿಸಬೇಕೇ ಎಂಬುದಕ್ಕೆ ಸಂಬಂಧಿಸಿದಂತೆ ಪೋಷಕರ ಸಭೆ ನಡೆಸಿ ನಂತರ ಜಿಪಂ ಸಿಇಒ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಈಶ್ವರ್, ಡಿಎಚ್‍ಒ ಶಿವರಾಜ ಹೆಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸಮಾಜಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಪ್ರತಿನಿಧಿಗಳು ಹಾಗೂ ವಿವಿಧ ತಾಲೂಕುಗಳ ಸಿಡಿಪಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.