ಸಿಎಂ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಮಾಡಿದ ಬಿ ಎಸ್ ವೈ

ಬೆಂಗಳೂರು

       ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವರಿಗೆ ಮಂಡ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

       ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೂಪೇನ ಅಗ್ರಹಾರ ರೌಂಡ್ ಟೇಬಲ್ ಸ್ಕೂಲ್ ಪಕ್ಕದ ಗ್ರೌಂಡ್‍ನಲ್ಲಿ ಮಹಿಳಾ ಕಾರ್ಯಕರ್ತರ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

        ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಸಿಎಂ ಕುಮಾರಸ್ವಾಮಿ ಕುತಂತ್ರದಿಂದ ಸುಮಲತಾ ಎನ್ನುವ ಹೆಸರಿನ ಮೂರ್ನಾಲ್ಕು ಮಹಿಳೆಯರಿಂದ ನಾಮಪತ್ರ ಹಾಕಿಸಿ ಮಂಡ್ಯದ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಮಂಡ್ಯದ ಜನರು ದಡ್ಡರಲ್ಲ. ಕುಮಾರಸ್ವಾಮಿಯವರಿಗೆ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

        ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಒಬ್ಬ ಯುವಕನಾಗಿದ್ದು, ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಇದೀಗ ಅವರು ದಿವಂಗತ ಅನಂತಕುಮಾರ್ ಅವರ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಅನಂತಕುಮಾರ್ ಅವರಿಗಿಂತ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಕಮಲದ ಗುರುತಿಗೆ ಮತ ಚಲಾಯಿಸಿ ತೇಜಸ್ವಿ ಸೂರ್ಯ ಗೆಲುವಿಗೆ ಕಾರಣರಾಗಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

         ನೀವು ಮೋದಿಯವರಿಗೆ ಮತ ಹಾಕಿದರೆ ಯಡಿಯೂರಪ್ಪಗೆ ಮತ ಹಾಕಿದಂತೆ, ಯಡಿಯೂರಪ್ಪಗೆ ಮತ ಚಲಾಯಿಸಿದರೆ ತೇಜಸ್ವಿ ಸೂರ್ಯಗೆ ಮತ ಹಾಕಿದಂತೆ ಎಂದು ಹೇಳಿದ ಯಡಿಯೂರಪ್ಪ, ನಮಗೆ ಮೋದಿ ಅವರೇ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಎಲ್ಲರೂ ಮೋದಿ ಪರವಾಗಿ ಮತ ಯಾಚನೆ ಮಾಡಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

         ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, “ನಮಗೆ ಅನಂತಕುಮಾರ್ ಅವರ ಅಗಲಿಕೆ ನೋವನ್ನು ಸಹಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ. ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಎಂದು ತಿಳಿದುಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ. ಮೋದಿ ಮತ್ತು ಯಡಿಯೂರಪ್ಪ ಅವರು ನಮ್ಮ ಪಕ್ಷದ ಜೋಡೆತ್ತುಗಳಿದ್ದಂತೆ. ಕಳೆದ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅನಂತಕುಮಾರ್ ಅವರಿಗೆ 60 ಸಾವಿರ ಮತಗಳ ಲೀಡ್ ಕೊಟ್ಟಿದ್ದೆವು. ಈಗ ನಮ್ಮ ಪಕ್ಷದ ಅಭ್ಯರ್ಥಿಗೆ ಅದಕ್ಕಿಂತ ಹೆಚ್ಚು ಲೀಡ್ ಕೊಡುತ್ತೇವೆ” ಎಂದು ಹೇಳಿದರು.

        ಇಲ್ಲಿ ನರೇಂದ್ರ ಮೋದಿಯವರೇ ಅಭ್ಯರ್ಥಿ. ಮತ್ತೊಮ್ಮೆ ಜನರು ಮೋದಿಗಾಗಿ ಮತ ಹಾಕುತ್ತಿದ್ದಾರೆ. ಪಕ್ಷದ ಸೂಚನೆಯಂತೆ ನಾವು ನಮ್ಮ ಅಭ್ಯರ್ಥಿ ಗೆಲುವಿಗೆ ಹಗಲೂ ರಾತ್ರಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ ಸತೀಶ್ ರೆಡ್ಡಿ ಅವರು, ಏಪ್ರಿಲ್ 2 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬನಶಂಕರಿಯಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

      ಇಲ್ಲಿ ಅಭ್ಯರ್ಥಿ ನಗಣ್ಯ. ಏನೇ ಇದ್ದರೂ ಮೋದಿ ಮತ್ತು ಯಡಿಯೂರಪ್ಪ ಅವರೇ ನಮ್ಮ ಅಭ್ಯರ್ಥಿ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಸ್ಥಾನ ಸಿಗಬೇಕೆಂದು ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

        ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್ ಮಾತನಾಡಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಹಳಷ್ಟು ಬಹುಮತವನ್ನು ನೀಡುತ್ತಾ ಬಂದಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡಾ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರವನ್ನು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ನೀಡಲಿದ್ದೇವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap