ಇಂಡಿಯಾ ಮರು ನಾಮಕರಣ : ಸಂಚಲನ ಸೃಷ್ಠಿಸಿದ ಪವರ್‌ ಸ್ಟಾರ್‌ ಹೇಳಿಕೆ

ತೆಲಂಗಾಣ:

      ಜಿ20 ಶೃಂಗಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕಚೇರಿಯಿಂದ ಬಂದಿರುವ ಗಣ್ಯರ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ.

    ಇದರ ಬೆನ್ನಲ್ಲೇ ದೇಶದ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಕಾಂಗ್ರೆಸ್ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೇಶದ ಹೆಸರನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿರುವ ವಿಚಾರ ಎಷ್ಟು ನಿಜ? ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ.

    ಆದರೆ ಬಿಜೆಪಿ ನಾಯಕರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಐಎನ್‌ಡಿಐಎ ಮೈತ್ರಿಕೂಟ ಇದನ್ನು ತೀವ್ರವಾಗಿ ಖಂಡಿಸಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು “ಭಾರತ್ ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ” ಎಂದಿದ್ದಾರೆ. 

    ಭಾರೀ ಚರ್ಚೆ ಹುಟ್ಟುಹಾಕಿರುವ ದೇಶದ ಹೆಸರನ್ನು ಮರುನಾಮಕರಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಸಿದ್ದು ಪ್ರತಿಕ್ರಿಯಿಸಿದ್ದಾರೆ. “ರಿಪಬ್ಲಿಕ್ ಆಫ್ ಇಂಡಿಯಾ ಎಂಬ ಪದ ಸಂವಿಧಾನದಲ್ಲಿ ಹೇಳಲಾಗಿದೆ. ಇಂಡಿಯಾ ಎಂಬ ಪದವನ್ನು ನಮ್ಮ ದೇಶವೇ ಒಪ್ಪಿಕೊಂಡಿದೆ. ಹೀಗಾಗಿ ‘ಭಾರತ್’ ಎಂಬ ಹೊಸ ಹೆಸರು ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

    ಇಷ್ಟೆಲ್ಲಾ ಚರ್ಚೆ ನಡುವೆ ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಹಳೇ ಹೇಳಿಕೆ ವೈರಲ್ ಆಗುತ್ತಿದೆ. ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ 4 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. 12 ನಿಮಿಷಗಳ ಕಾಲ ವೇದಿಕೆಯಲ್ಲಿ ಮಾತನಾಡಿದ ಪವರ್ ಸ್ಟಾರ್ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಸ್ವಾತಂತ್ರ್ಯ ಹೋರಾಟಗಾರನ ಕಥೆ ಇದು, ಸಿನಿಮಾ ಇದು. ಈ ಸಿನಿಮಾ ನೋಡಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ನೆನೆಯಬೇಕು ಎಂದಿದ್ದರು.

     ಭಾರತ ಅನ್ನೋದು ನಮ್ಮದು. ಇಂಡಿಯಾ ಎನ್ನುವುದು ಬ್ರಿಟೀಷರು ಇಟ್ಟ ಹೆಸರು. ಭಾರತ ನಮ್ಮದು” ಎಂದು ಪವನ್ ಕಲ್ಯಾಣ್ ಹೇಳಿದ್ದರು. ಸದ್ಯ ದೇಶದ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ ಎನ್ನುವ ಚರ್ಚೆ ಶುರುವಾಗುತ್ತಿದ್ದಂತೆ ಪವನ್ ಹೇಳಿಕೆ ಸದ್ದು ಮಾಡುತ್ತಿದೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸಂಘಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಲೆಕ್ಕಾಚಾರದಲ್ಲಿದ್ದಾರೆ.

    ಅದಕ್ಕಾಗಿ ಬಿಜೆಪಿ, ತೆಲುಗು ದೇಶಂ ಪಕ್ಷಗಳ ಜೊತೆ ಚುನಾವಣಾ ಪೂರ್ವ ಮೈತ್ರಿಗೂ ಸಿದ್ಧರಾಗಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗೆ ಪವರ್ ಸ್ಟಾರ್ ನಟನೆಯ ‘ಬ್ರೋ’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಅಷ್ಟಾಗಿ ಸಿನಿಮಾ ಸದ್ದು ಮಾಡಲಿಲ್ಲ. ಸದ್ಯ ‘ಹರಿಹರ ವೀರಮಲ್ಲು’, ‘ಓಜಿ’, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಚಿತ್ರೀಕರಣ ನಡೀತಿದೆ. ಮತ್ತೊಂದು ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಚುನಾವಣೆಗೂ ಕಾವು ಶುರುವಾಗುವ ಮುನ್ನ ಸಾಧ್ಯವಾದಷ್ಟು ಸಿನಿಮಾಗಳಲ್ಲಿ ನಟಿಸಲು ಪವನ್ ತೀರ್ಮಾನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ