ಎನ್ ಡಿ ಆರ್ ಎಫ್ ನಿಯಮದ ಪ್ರಕಾರವೇ ಪರಿಹಾರ ಬಿಡುಗಡೆ ಮಾಡಲಾಗಿದೆ : ಕಟೀಲ್

ಬೆಂಗಳೂರು

    ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ಖಜಾನೆಯನ್ನು ಸಂಪೂರ್ಣವಾಗಿ ಲೂಟಿ ಮಾಡಲಾಗಿತ್ತೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ್ದರ ಪರಿಣಾಮ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ವಿಳಂಬವಾಯಿತು. ಈಗ ಮುಖ್ಯಮಂತ್ರಿ ಬಿ.ಎಸ್.ವೈ ಲೂಟಿಯಾಗಿರುವ ಖಜಾನೆಯನ್ನು ಭರ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪರಿಹಾರ ಕಾರ್ಯಗಳು ಸುಸೂತ್ರವಾಗಿ ನಡೆಯಲಿವೆ ಎಂದರು.

    ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾರ ಸರ್ಕಾರದ ಅವಧಿಯಲ್ಲಿ ರಾಜ್ಯದ ಖಜಾನೆ ಲೂಟಿಯಾಗಿತ್ತು ಎಂಬುದನ್ನು ಬಹಿರಂಗಪಡಿಸದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಲೂಟಿಯಾಗಿರುವುದು ಜಗಜ್ಜಾಹೀರವಾಗಿದೆ. ಯಾವ ಯಾವ ಮುಖ್ಯಮಂತ್ರಿಗಳು ಏನೇನು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇದನ್ನು ನನ್ನ ಬಾಯಿಂದ ಕೇಳಬೇಡಿ ಎಂದು ಮನವಿ ಮಾಡಿದರು.

    ಈಗ ಮುಖ್ಯಮಂತ್ರಿ ಅವರು ತೆರಿಗೆ ಸಂಗ್ರಹಕ್ಕೆ ಒತ್ತು ಕೊಟ್ಟು ಸಂಪನ್ಮೂಲಗಳ ಕ್ರೂಢೀಕರಣ ಮಾಡುತ್ತಿದ್ದಾರೆ. ಲೂಟಿಯಾಗಿದ್ದ ಖಜಾನೆ ಈಗ ಭರ್ತಿಯಾಗಿದೆ. ಪರಿಣಾಮ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಬಿ.ವೈ.ವಿಜಯೇಂದ್ರ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗುವುದು ವಿಳಂಬವಾಗಿಲ್ಲ. ಯಾವುದೇ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದರೆ ರೀತಿನೀತಿಗಳು, ನಿಯಮಗಳು, ಕಾನೂನುಗಳು ಇರುತ್ತವೆ. ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರವೇ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದೆ.

     ಕೇಂದ್ರ ಇದೆಲ್ಲವನ್ನು ಪಾಲಿಸಿದ್ದರಿಂದ ತುಸು ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಪ್ರವಾಹ ಉಂಟಾದ ತಕ್ಷಣವೇ ಕೇಂದ್ರದಿಂದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡದ ಜೊತೆಗೆ ಹೆಲಿಕಾಪ್ಟರ್‍ಗಳನ್ನು ಕಳುಹಿಸಿಕೊಡಲಾಗಿತ್ತು. ಕಾಲ ಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸ್ಥಿತಿಗತಿ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಸೇರಿದಂತೆ ಪ್ರತಿಯೊಬ್ಬರು ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಒದಗಿಸಿದ್ದರು. ಎಲ್ಲಿಯೂ ಕೂಡ ರಾಜ್ಯದಿಂದ ನೆರೆ ಪರಿಹಾರದ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗಿಲ್ಲ ಎಂದರು.

    ಒಂದು ವೇಳೆ ಹಣಕಾಸಿನ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಮೂರು ಸಾವಿರ ಕೋಟಿ ಬಿಡುಗಡೆ ಮಾಡಲು ಸಾಧ್ಯವಿರುತ್ತಿತ್ತೇ ಎಂದು ಕಟೀಲು ಪ್ರಶ್ನಿಸಿದರು. ನೆರೆಯಲ್ಲಿ ಶಾಸಕರು ಮತ್ತು ಸಂಸದರು ಆಸ್ತಿಪಾಸ್ತಿ ಕಳೆದುಕೊಂಡಿದ್ದರೆ ಪರಿಹಾರವನ್ನು ಬಿಟ್ಟುಕೊಡಿ ಎಂದು ಸೂಚಿಸಲು ಸಾಧ್ಯವಿಲ್ಲ. ಅವರು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ. ಇದು ಅವರವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

    ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ಮನೆ ಕಳೆದುಕೊಂಡವರಿಗೆ 5 ಲಕ್ಷ, ದುರಸ್ತಿಗೆ ಒಂದು ಲಕ್ಷ, ಬಾಡಿಗೆ ಮನೆಗೆ 10 ಸಾವಿರ ಹಣ ನೀಡಿದೆ. ಪರಿಹಾರದ ಹಣ ಮಧ್ಯವರ್ತಿಗಳಿಗೆ ಇಲ್ಲವೇ ಭ್ರಷ್ಟಾಚಾರವನ್ನು ತಡೆಗಟ್ಟಲು ಮೊಟ್ಟ ಮೊದಲ ಬಾರಿಗೆ ಆರ್‍ಟಿಜಿಎಸ್ ಮೂಲಕ ಫಲಾನುಭವಿಗಳ ಖಾತೆಗೆ ಹಾಕಿದ್ದೇವೆ. ಹಿಂದಿನ ಸರ್ಕಾರಗಳು ಇದನ್ನು ಏಕೆ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

    ಕೇಂದ್ರ ಸರ್ಕಾರದ ಪರಿಹಾರ ಹಣ ಬಿಡುಗಡೆಯಾಗಲು ವಿಳಂಬವಾದರೂ ರಾಜ್ಯ ಸರ್ಕಾರ 3 ಸಾವಿರ ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು. ಬೆಳಗಾವಿ, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಹಾವೇರಿ, ಗದಗ, ಮಡಿಕೇರಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ.

    ಪ್ರತಿಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಸಣ್ಣ ಕೆಲಸ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಜಮೀನು ಕಳೆದುಕೊಂಡವರಿಗೆ ಭೂಮಿ ನೀಡುವ ತೀರ್ಮಾನ ಮಾಡಿದೆ. ರೈತನೊಬ್ಬ ಹತ್ತು ಎಕರೆ ಜಮೀನು ಕಳೆದುಕೊಂಡಿದ್ದರೆ ಅಷ್ಟೂ ಪ್ರಮಾಣದ ಜಮೀನನ್ನು ಸರ್ಕಾರದ ವತಿಯಿಂದಲೇ ನೀಡುತ್ತೇವೆ. ಈಗಾಗಲೇ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಜಮೀನು ಗುರುತಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇದಕ್ಕಿಂತ ಬೇರೆ ಇನ್ನೇನು ಮಾಡಬಹುದಿತ್ತು ಎಂದು ಪ್ರಶ್ನೆ ಮಾಡಿದರು.

     ರಾಜ್ಯದಲ್ಲಿ ಮೂರು ಹಂತದಲ್ಲಿ ನೆರೆ ಉಂಟಾಯಿತು. ಅಧಿಕಾರಿಗಳು ಪ್ರಾಥಮಿಕ ವರದಿಯನ್ನು ಕಳುಹಿಸಿದ ತಕ್ಷಣವೇ ಅದು ಅಂತಿಮವಾಗುವುದಿಲ್ಲ. 13 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿತ್ತು.ಕೇಂದ್ರದಿಂದ 12 ರಾಜ್ಯಗಳಿಗೆ ಅಧ್ಯಯನ ತಂಡ ಆಗಮಿಸಿ ವರದಿ ನೀಡಿದೆ. ನಂತರವೇ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದರು.

      ರಾಜ್ಯದಲ್ಲಿ ಪ್ರವಾಹ ಉಂಟಾದ ತಕ್ಷಣವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಪುಟದ ಸಚಿವರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಸೇರಿದಂತೆ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಷಾ, ಹಣಕಾಸು ಸಚಿವರಾದ ನಿರ್ಮಲ ಸೀತರಾಮನ್ ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

     ಸಾಮಾಜಿಕ ಜಾಲತಾಣಗಳಲ್ಲಿ ಪರಿಹಾರ ವಿಳಂಬವಾಗಿರುವುದಕ್ಕೆ ವಿಪರೀತ ಚರ್ಚೆಯಾಗಿದೆ. ಹಾಗಾಗಿ ಶಾಸಕರು ಮತ್ತು ಸಂಸದರು ಆಕ್ರೋಶವಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದರು. ಪಕ್ಷದಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಸ್ಪಷ್ಟನೆ ಕೇಳಿ ಪಕ್ಷದ ಶಿಸ್ತು ಮತ್ತು ನಿಯಮದಡಿ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಅದಾಗದಿದ್ದರೆ ಕೆಲವೊಮ್ಮೆ ವಿವರಣೆ ಕೇಳಬೇಕಾಗುತ್ತದೆ. ಹಾಗಾಗಿ ಶಾಸಕ ಯತ್ನಾಳ್‍ಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

     ನಾನು ಅಧ್ಯಕ್ಷನಾದ ಮೇಲೆ ಎಲ್ಲ ಜಿಲ್ಲೆಗಳಿಗೂ ಭೇಟಿ ಕೊಟ್ಟಿದ್ದೇನೆ. ಪಕ್ಷದ ಸದಸ್ಯತ್ವ ಅಭಿಯಾನವು ಯಶಸ್ವಿಯಾಗಿ ನಡೆದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಪಾದಯಾತ್ರೆ ನಡೆಸುತ್ತಿದ್ದೇವೆ. ಪಕ್ಷದ ಸಂಘಟನೆ ಸಮರ್ಪಕವಾಗಿ ನಡೆಯುತ್ತದೆ ಎಂದು ನಳೀನ್ ಹೇಳಿದರು. ಶಾಸಕ ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ