ಬೆಂಗಳೂರು
ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಕ್ರಮಕ್ಕೆ ಅರ್ಹತೆ ಪಡೆದ ಮನೆಗಳು ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿದ್ದರೆ ಅಂತಹ ಮನೆಗಳಿಗೂ ನಿಯಮಾನುಸಾರ ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಸಂತ್ರಸ್ಥರು ಹಾಗೂ ಅಧಿಕಾರಿಗಳು ಈ ವಿಷಯವನ್ನು ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆಗ ಸಚಿವ ಆರ್. ವಿ. ದೇಶಪಾಂಡೆ ತಕ್ಷಣ ಸಕಾರಾತ್ಮಕವಾಗಿ ಈ ಸಮಸ್ಯೆಗೆ ಸ್ಪಂದಿಸಿದರು. ಇದರ ಪರಿಣಾಮ ಇದೀಗ ಸರ್ಕಾರಿ ಆದೇಶ ಹೊರ ಬಿದ್ದಿದೆ.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಹಲವು ಸಂತ್ರಸ್ಥರು ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮನೆ ಸಕ್ರಮಗೊಳಿಸಿಕೊಳ್ಳಲು ಅರ್ಹತೆ ಪಡೆದಿದ್ದವರ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋದರೆ ಸೂಕ್ತ ಪರಿಹಾರ ಪಡೆಯಲು ಇದೀಗ ಅವಕಾಶ ದೊರೆತಂತಾಗಿದೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಚಿವ ಆರ್ ವಿ ದೇಶಪಾಂಡೆ, ಹೊಸ ಸರ್ಕಾರಿ ಆದೇಶದಿಂದಾಗಿ ಇಂತಹ ಸಂತ್ರಸ್ಥರಿಗೆ ಅನುಕೂಲವಾಗಲಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1968ರ ಕಲಂ 94ಸಿ ಮತ್ತು 94ಸಿಸಿ ಅಡಿ ಅರ್ಹವಿದ್ದರೆ ಸಿ ಮತ್ತು ಡಿ ವರ್ಗೀಕೃತ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಮತ್ತು ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ’ಸಿ’ ಮತ್ತು ’ಡಿ’ ವರ್ಗೀಕೃತ ಜಮೀನುಗಳಲ್ಲಿ ಬಗರ್ ಹುಕುಂ ಅಡಿ ಸಕ್ರಮೀಕರಣ ಕೋರಿ ಬಾಕಿ ಇರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರವಾಹ ಸಂತ್ರಸ್ತ ಕೊಡಗು ಜಿಲ್ಲೆಯಲ್ಲಿನ ಭೂ ಪರಿವರ್ತನೆ ವಿಷಯ ಕುರಿತಂತೆ ಸಚಿವ ದೇಶಪಾಂಡೆ ಬೆಂಗಳೂರಿನಲ್ಲಿಂದು ಹಿರಿಯ ಅಧಿಕಾರಿಗಳು ಹಾಗೂ ಭೂ ಸರ್ವೇಕ್ಷಣಾ ಇಲಾಖೆಯ ಪ್ರಮುಖರು, ನುರಿತ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಸುಧೀರ್ಘವಾಗಿ ಚರ್ಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ