ಹಾವೇರಿ
ಕ್ರಿಟಿಕಲ್ ಮತಗಟ್ಟೆಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ವಹಿಸಬೇಕು. ವಿದ್ಯುನ್ಮಾನ ಮತಯಂತ್ರಗಳ ಸುರಕ್ಷತೆ ಹಾಗೂ ಸಾಗಾಣಿಕೆಯಲ್ಲಿ ಗರಿಷ್ಠ ಎಚ್ಚರ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಡಾ. ಡಾ.ಅಖ್ತರ್ ರಿಯಾಜ್ ಅವರು ಸಲಹೆ ನೀಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಿದ್ಧತೆಗಳ ಕುರಿತಂತೆ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವರವಾಗಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮತದಾರರ ನೋಂದಣಿ, ಮತದಾನ ಜಾಗೃತಿ ಕಾರ್ಯಕ್ರಮಗಳು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳ ತಾಂತ್ರಿಕ ಪರಿಶೀಲನೆ, ಮತಗಟ್ಟೆಗಳ ವಿವರ, ಕ್ರಿಟಿಕಲ್ ಮತಗಟ್ಟೆಗಳಲ್ಲಿ ಕೈಗೊಂಡಿರುವ ಸಿದ್ಧತೆಗಳು, ವಿಶೇಷ ಚೇತನರ ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳ ಕುರಿತಂತೆ ಪರಿಶೀಲನೆ, ಮಾದರಿ ನೀತಿ ಸಂಹಿತೆ, ಚೆಕ್‍ಪೋಸ್ಟ್ ಹಾಗೂ ವಿಡಿಯೋ ವಿವಿಂಗ್ ಟೀಮ್, ಫ್ಲೈಯಿಂಗ್ ಸ್ಕ್ವಾಡ್‍ಗಳ ಕಾರ್ಯನಿರ್ವಹಣೆ, ಮತಗಟ್ಟೆಗಳ ಅಧಿಕಾರಿಗಳ ತರಬೇತಿ, ಮತದಾನ ಕೇಂದ್ರಕ್ಕೆ ವಾಹನಗಳ ಸಿದ್ಧತೆ, ಸುರಕ್ಷತಾ ಕ್ರಮ, ನೈತಿಕ ಹಾಗೂ ಸುಗಮ ಹಾಗೂ ಪಾರದರ್ಶಕ ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಕುರಿಂತೆ ವಿವರವಾಗಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಕೃಷ್ಣ ಬಾಜಪೇಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ವಿವರ ಸೇರಿದಂತೆ ಮತದಾನ ಸಿದ್ಧತೆಗೆ ಹಾಗೂ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಕ್ರಿಟಿಕಲ್ ಮತಗಟ್ಟೆ ಸೇರಿದಂತೆ ಶಾಂತಿಯುತ ಚುನಾವಣೆಗೆ ಕೈಗೊಂಡಿರುವ ಪೊಲೀಸ್ ರಕ್ಷಣಾ ವ್ಯವಸ್ಥೆ ಕುರಿತಂತೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಂ.ಸಿಸಿ ನೋಡಲ್ ಅಧಿಕಾರಿ ವಾಸಣ್ಣ, ಉಪವಿಭಾಗಾಧಿಕಾರಿಗಳಾದ ಹರ್ಷಲ್ ನಾರಾಯಣ, ತಿಪ್ಪೇಸ್ವಾಮಿ ಎನ್. ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ವಿನೋದ ಹೆಗ್ಗಳಗಿ, ಸಿದ್ಧರಾಜು, ಬಿ.ಮಂಜುನಾಥ್, ಅಬಿದ್ ಗಡಿಯಾಳ ಹಾಗೂ ವಿವಿಧ ನೋಡಲ್ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.