ಚಳ್ಳಕೆರೆ
ನಗರದ ಬೆಂಗಳೂರು ರಸ್ತೆಯಲ್ಲಿರುವ ಕಳೆದ ಕೆಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಇಲ್ಲಿನ ಐಡಿಬಿಐ ಬ್ಯಾಂಕ್ ಎಟಿಎಂ ಕೌಂಟರ್ಗೆ ನುಗ್ಗಿದ ಕಳ್ಳರು ಬ್ಯಾಂಕ್ನ ಎಟಿಎಂ ಮಿಷನನ್ನು ಯಾವುದೋ ಆಯುಧದಿಂದ ಮಿಷನಿನ ಎಲ್ಲಾ ಭಾಗಗಳನ್ನು ತೆರೆದು ಹಣಕ್ಕಾಗಿ ಪ್ರಯತ್ನಿಸಿದ್ದಾರೆ. ಆದರೆ, ಬ್ಯಾಂಕ್ನ ಎಟಿಎಂ ಯಂತ್ರದ ಮೇಲ್ಭಾಗದಲ್ಲಿ ಮಾತ್ರ ತೆರೆದುಕೊಂಡಿದ್ದರೂ ಹಣ ಬಾಕ್ಸನ್ನು ಮಾತ್ರ ಕಳ್ಳರಿಗೆ ತೆರೆಯಲು ಸಾಧ್ಯವಾಗಿಲ್ಲ.
ವಿಶೇಷವೆಂದರೆ ಕಳ್ಳರು ತಮ್ಮ ಕೈಚೆಳಕವನ್ನು ಪ್ರಾರಂಭಿಸಿದಾಗ ಬ್ಯಾಂಕ್ನಲ್ಲಿ ಸಿಸಿ ಕ್ಯಾಮರ ಇರುವ ಬಗ್ಗೆ ಮನದಟ್ಟು ಮಾಡಿಕೊಂಡು ಎಟಿಎಂ ಕೌಂಟರ್ ಒಳಗೆ ಪ್ರವೇಶಿಸಿದ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ಧಾರೆ. ಇದರಿಂದ ಕಳ್ಳರ ಮುಖಭಾವ ಗೊತ್ತಾಗದೇ ಇರುವಂತೆ ಎಚ್ಚರಿಕೆ ವಹಿಸಿದ್ಧಾರೆ. ಎಟಿಎಂ ಯಂತ್ರವನ್ನು ಕತ್ತರಿಸಲು ಹೊಸ ಕಟರ್ರೊಂದನ್ನು ತಂದಿದ್ದು, ಗೊತ್ತಾಗಿದೆ. ಕಟರ್ ವಾಪಾಸ್ ತೆಗೆದುಕೊಂಡು ಹೋಗಿರುವ ಕಳ್ಳರು ಕಟರ್ ನೂತನ ಬಾಕ್ಸ್ ಮಾತ್ರ ಅಲ್ಲೇ ಬಿಟ್ಟಿದ್ದಾರೆ.
ಐಡಿಬಿಐ ಬ್ಯಾಂಕ್ನ ಎಟಿಎಂ ಕೌಂಟರ್ ಬಳಿ ರಾತ್ರಿ ವೇಳೆಯಲ್ಲಿ ಭದ್ರತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಬ್ಯಾಂಕ್ನ ಅಕ್ಕಪಕ್ಕದಲ್ಲೇ ಚಿಂದನೂರು, ವಾಸವಿ, ಅನಂತ ಮತ್ತು ಬಿಒಐ ಬ್ಯಾಂಕ್ ಶಾಖೆ ಇರುತ್ತವೆ. ಇತ್ತೀಚಿಗಷ್ಟೇ ಭದ್ರತಾ ಸಿಬ್ಬಂದಿಯನ್ನು ನೇಮಿಸದೇ ಇರುವುದು ಕಂಡು ಬಂದಿದೆ. ಭದ್ರತಾ ಸಿಬ್ಬಂದಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಕಳ್ಳರು ಸುಲಭವಾಗಿ ಎಟಿಎಂ ಕೌಂಟರ್ ಪ್ರವೇಶಿಸಿದ್ಧಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಬ್ಯಾಂಕ್ ಪ್ರಾರಂಭವಾದಾಗ ಬ್ಯಾಂಕ್ನ ಸ್ವಚ್ಚ ಸಿಬ್ಬಂದಿ ಎಟಿಎಂ ಕೌಂಟರ್ ಬಳಿ ಬಂದಾಗ ಎಟಿಎಂ ಮಿಷನ್ ತೆರೆದಿರುವುದು ಕಂಡು ಕೂಡಲೇ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ಧಾರೆ. ಬ್ಯಾಂಕ್ನ ವ್ಯವಸ್ಥಾಪಕರು ಎಟಿಎಂ ಕೌಂಟರ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಇಲ್ಲಿನ ಪಿಎಸ್ಐ ಎನ್.ಗುಡ್ಡಪ್ಪ, ಪ್ರೊಬೇಷನರಿ ಪಿಎಸ್ಐ ದೇವರಾಜು ಮತ್ತು ಸಿಬ್ಬಂದಿ ವರ್ಗ ಬ್ಯಾಂಕ್ನ ಸಿಸಿ ಟಿವಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಳ್ಳರು ಒಳ ಪ್ರವೇಶಿಸಿದ ಬಗ್ಗೆ ಅಸ್ವಷ್ಟ ಚಿತ್ರಗಳು ಗೋಚರಿಸಿವೆ. ಮತ್ತಷ್ಟು ಕಳ್ಳರ ವಿವರ ಪಡೆಯಲು ಪಕ್ಕದಲ್ಲಿರುವ ಚಿಂದನೂರು ಬ್ಯಾಂಕ್ನ ಸಿಸಿ ಕ್ಯಾಮರದ ಮಾಹಿತಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ಧಾರೆ.
ಇತ್ತೀಚಿನ ದಿನಗಳಲ್ಲಿ ಕಳ್ಳರಿಗೆ ಚಳ್ಳಕೆರೆ ನಗರದಲ್ಲಿ ಕಳ್ಳತನ ವೆಸಗುವುದು ಅತಿ ಸುಲಭದ ಕೆಲಸವಾಗಿ ಪರಿಣಮಿಸಿದೆ. ಪೊಲೀಸ್ ಇಲಾಖೆ ಹಲವಾರು ಇತರೆ ಕಾರ್ಯಗಳಲ್ಲಿ ನಿರತವಾಗಿರುವ ಸಂದರ್ಭವನ್ನು ಉಪಯೋಗಿಸಿಕೊಳ್ಳುತ್ತಿರುವ ಕಳ್ಳರು ಎಟಿಎಂ ಕೌಂಟರನ್ನು ಒಡೆಯುವ ದುಸಾಹಸಕ್ಕೆ ಕೈಹಾಕಿದ್ದಾರೆ. ಚಳ್ಳಕೆರೆ ಪೊಲೀಸರು ಎಟಿಎಂ ಕಳ್ಳತನ ಯತ್ನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಭಾಗದ ವೃತ್ತಿ ನಿರತ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.