ನಕಲಿ ಪತ್ರಕರ್ತರಿಂದ ಕರ್ತವ್ಯಕ್ಕೆ ಅಡ್ಡಿ : ಆರೋಪ

ಮಧುಗಿರಿ

   ನಕಲಿ ಪತ್ರಕರ್ತರ ಹಾವಳಿ ಇತ್ತೀಚೆಗೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದ್ದು, ಪ್ರಾಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಸಂಜೀವಮೂರ್ತಿ ಆರೋಪಿಸಿದ್ದಾರೆ.

   ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ನಕಲಿ ಪತ್ರಕರ್ತರು ಹಾಗೂ ಯೂಟ್ಯೂಬ್ ಚಾನಲ್ ನವರು ತಾಲ್ಲೂಕಿನ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಬೆದರಿಸಿ ಹಣ ವಸೂಲಾತಿ ದಂಧೆಗೆ ಇಳಿದಿದ್ದಾರೆ. ಹಣ ನೀಡಲಿಲ್ಲವೆಂದರೆ ಜಿಲ್ಲಾ ಮಟ್ಟದಲ್ಲಿರುವ ನಮ್ಮ ದೃಶ್ಯ ಮಾಧ್ಯಮದ ತಂಡದವರನ್ನು ಕರೆಸಿ ಸುಖಾಸುಮ್ಮನೆ ಸುದ್ದಿ ಮಾಡಲಾಗುವುದು ಎಂದು ಬೆದರಿಕೆಯೊಡ್ಡುತ್ತಿರುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಅಂತಹ ನಕಲಿ ಪತ್ರಕರ್ತರ ಮುಖಕ್ಕೆ ಸಾರ್ವಜನಿಕವಾಗಿ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

   ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿ ಮಾತನಾಡಿ, ನಕಲಿ ಪತ್ರಕರ್ತರು ಅಧಿಕಾರಿಗಳಿಗೆ ತೊಂದರೆ ನೀಡುವುದು ಕಂಡು ಬಂದರೆ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರ ಗಮನಕ್ಕೆ ತಂದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಹಿಂದೆ ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಅವರು ತಾಲ್ಲೂಕಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಆದರೆ ಹಾಲಿ ಶಾಸಕರು ಅಧಿಕಾರಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

   ಆದಿಜಾಂಬವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಮಹಾರಾಜು ಮಾತನಾಡಿ, ಸದಾಶಿವ ಆಯೋಗ ವರದಿ ಜಾರಿಗಾಗಿ ಇಷ್ಟು ವರ್ಷಗಳಿಂದ ನಡೆಸುತ್ತಿರುವ ಹೋರಾಟ, ಪ್ರತಿಭಟನೆಗಳ ಸುದ್ದಿಗಳನ್ನು ಮಾಡುವ ಮೂಲಕ ಕಾರ್ಯನಿರತ ಪತ್ರಕರ್ತರು ಸಹ ನಮ್ಮ ಸಮುದಾಯಗಳಿಗೆ ಒಂದು ಶಕ್ತಿಯೇ ಆಗಿದ್ದಾರೆ. ಇದರ ಜೊತೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಮೊದಲಿನಿಂದಲೂ ಒಳ ಮೀಸಲಾತಿ ಹೋರಾಟದ ಪರವಾಗಿ ನಿಂತವರು ಎಂದರು.

   ಮುಕ್ತ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಎಂ.ಎಲ್.ರಾಜಣ್ಣ, ವಕೀಲ ಜಗದೀಶ್, ಉಪನ್ಯಾಸಕ ಶಿವಕುಮಾರ್, ಮಾದಿಗ ದಂಡೋರ ಹೋಬಳಿ ಅಧ್ಯಕ್ಷ ಮಹಾಲಿಂಗಪ್ಪ, ದಲಿತ ಮುಖಂಡ ಗಂಗಾಧರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link