ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ : ಎಸ್ಪಿ ಕೆ.ವಿ.ಅಶೋಕ್ ಭರವಸೆ

ತುಮಕೂರು

   ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತಷ್ಟು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಭರವಸೆ ನೀಡಿದರು.

   ಪ್ರಜಾಪ್ರಗತಿ ದಿನಪತ್ರಿಕೆ -ಪ್ರಗತಿಟಿವಿ ವತಿಯಿಂದ ಹಮ್ಮಿಕೊಂಡಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ತಿಪಟೂರಿನ ತೇಜಸ್ ಎನ್ನುವವರ ದೂರಿಗೆ ಪ್ರತಿಕ್ರಿಯಿಸುತ್ತಾ, ಪೊಲೀಸರು ಜನಸ್ನೇಹಿಯಾಗಿ ವರ್ತಿಸಬೇಕೆನ್ನುವುದು ನಿಯಮ. ಅವಾಚ್ಯ ಶಬ್ದಗಳನ್ನು ಪ್ರಯೋಗಿಸುವಂತಿಲ್ಲ. ಕೆಲವೊಮ್ಮೆ ನಿರಂತರ ಕೆಲಸದ ಒತ್ತಡ, ವಾಗ್ವಾದಕ್ಕಿಳಿಯುವ ಜನರ ವರ್ತನೆ ಪೊಲೀಸರನ್ನು ಕೆರಳಿಸುತ್ತದೆ. ನ್ಯಾಯಾಲಯದ ತೀರ್ಮಾನದಂತೆ ಪೊಲೀಸರ ನಡೆಯಿರಬೇಕೆಂದು ಜನ ಬಯಸುತ್ತಾರೆ. ಆದರೆ ನ್ಯಾಯತೀರ್ಮಾನ ಮಾಡುವುದು ಪೊಲೀಸರ ಕೆಲಸವಲ್ಲ.

   ಸಾರ್ವಜನಿಕರ ದೂರುಗಳನ್ನು ದಾಖಲಿಸುವ ಸಂದರ್ಭದಲ್ಲಿ ಸಂಯಮದ ವರ್ತನೆಯನ್ನು ಪೊಲೀಸರು ಪ್ರದರ್ಶಿಸಬೇಕೆಂದು ಈಗಾಗಲೇ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಕಳೆದೊಂದು ವರ್ಷದಲ್ಲಿ ನಿರಂತರ ಶ್ರಮ ಹಾಕಲಾಗುತ್ತಿದೆಯೆಂದರು.
ತುಮಕೂರಿನ ಚಂದ್ರಶೇಖರ್ ಎಂಬುವರು ಕರೆ ಮಾಡಿ ಗಂಗಸಂದ್ರ ಭಾಗದಲ್ಲಿ ಶಾಲೆ, ಕಾಲೇಜು, ಸಾವಿರಾರು ವಸತಿಗಳಿದ್ದು ಪೊಲೀಸ್ ಠಾಣೆ ಅವಶ್ಯಕತೆಯ ಬಗ್ಗೆ ಈಗಾಗಲೇ ಕಲ್ಪತರು ಹಿತರಕ್ಷಣಾ ನಾಗರಿಕರ ವೇದಿಕೆಯಿಂದ ಗೃಹ ಸಚಿವರಿಗೆ, ಸಹಕಾರ ಸಚಿವರಿಗೆ ಮನವಿ ಮಾಡಿದ್ದು, ಇದುವರೆಗೆ ಯಾವುದೇ ಕ್ರಮವಾಗಿಲ್ಲವೆಂದರಲ್ಲದೆ ಶೇಷಾದ್ರಿಪುರಂ ಶಾಲೆ ರಸ್ತೆಯಲ್ಲಿ ಹಂಪ್ಸ್ ಹಾಕಿಸುವಂತೆ ಕೋರಿದರು.

   ಪ್ರತಿಕ್ರಿಯಿಸಿದ ಎಸ್ಪಿ ಅವರು ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತಷ್ಟು ಠಾಣೆಗಳ ಅವಶ್ಯಕತೆಯಿದೆ. ಆದರೆ ಠಾಣೆ ಸ್ಥಾಪನೆಗೆ ನಿರ್ಧಿಷ್ಟ ಮಾನದಂಡಗಳಿದ್ದು, ಅದರನ್ವಯವೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಹಂಪ್ಸ್ ಹಾಕಿಸಲು ಕ್ರಮವಹಿಸುವುದಾಗಿ ತಿಳಿಸಿದರು.

  ಮಧುಗಿರಿಯ ಕಿರಣ್ ಎಂಬುವರು ಕರೆ ಮಾಡಿ ಒಂದು ವರ್ಷದ ಹಿಂದೆ ಮಧುಗಿರಿಯಲ್ಲಿ ನ್ಯಾಯಾಧೀಶರೊಬ್ಬರ ವಾಹನ ಸೇರಿದಂತೆ ೧೨ ದ್ವಿಚಕ್ರ ವಾಹನಗಳ ಸರಣಿ ಕಳ್ಳತನವಾಗಿದ್ದು, ಎಫ್‌ಐಆರ್ ಹಾಕಿದ್ದು ಬಿಟ್ಟರೆ, ಯಾವುದೇ ಸ್ಥಳಮಹಜರಾಗಲೀ, ಆರೋಪಿಗಳ ಪತ್ತೆಯಾಗಲಿ ಮಾಡಿಲ್ಲವೆಂದು ದೂರಿದರು. ಉತ್ತರಿಸಿದ ಎಸ್ಪಿ ಅವರು ಅನಾವಶ್ಯಕ ವಿಳಂಬವಾಗಿದ್ದಲ್ಲಿ ಶಿಸ್ತುಕ್ರಮ ಜರುಗಿಸುವ ಜೊತೆಗೆ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗುವುದೆಂದರು.

   ತುಮಕೂರು ನಗರದ ಗಂಗೋತ್ರಿ ನಗರ ಮುಖ್ಯರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಮುಂದೆ ನಿಲ್ಲಿಸುವ ವಾಹನಗಳಿಂದಾಗಿ ಸ್ಥಳೀಯ ನಿವಾಸಿಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ಟ್ರಾಫಿಕ್ ಸಮಸ್ಯೆಗೆ ಪರಿಹಾರವಿಲ್ಲವೇ ಎಂದು ಅಮೃತ್ ಎಂಬುವರು ಕರೆ ಮಾಡಿ ಪ್ರಶ್ನಿಸಿದರು. ಉತ್ತರಿಸಿದ ಎಸ್ಪಿ ಅವರು ಈಬಗ್ಗೆ ಸರ್ವೆ ಮಾಡಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು. ನಿವೃತ್ತ ತಹಸೀಲ್ದಾರ್ ಪುಟ್ಟನರಸಯ್ಯ ಅವರು ಯಲ್ಲಾಪುರ ಮುಖ್ಯರಸ್ತೆಯಲ್ಲಿ ರಸ್ತೆ ದಾಟುವುದೇ ದುಸ್ತರವಾಗಿದ್ದು ಸಿಗ್ನಲ್ ಅಳವಡಿಸಬೇಕೆಂದು ಕೋರಿದರು.

   ಸಿಗ್ನಲ್ ಅಳವಡಿಸುವುದಾಗಿ ಎಸ್ಪಿ ತಿಳಿಸಿದರು. ಚಿಕ್ಕನಾಯಕನಹಳ್ಳಿ ದೊಡ್ಡೆಣ್ಣೆಗೆರೆ ಗ್ರಾಪಂ ಸದಸ್ಯ ಪ್ರಶಾಂತ್ ಅವರು ಕರೆ ಮಾಡಿ ಅಕ್ರಮ ಬಡ್ಡಿ ಮೀಟರ್ ದಂಧೆ ಕಡಿವಾಣ ಹಾಕುವಂತೆ ಕೋರಿದರಲ್ಲದೆ ನಾಪತ್ತೆ ದೂರು ನೀಡಿದರೂ ಹಂದನಕೆರೆ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದರು. ಅಂತೆಯೇ ಹೆದ್ದಾರಿಯಲ್ಲಿ ಹಂಪ್ಸ್ ಹಾಕುವಂತೆ ಹಿಂದೆಯೂ ಕೋರಿದ್ದರೂ ಯಾವುದೇ ಕ್ರಮವಾಗಿಲ್ಲವೆಂದು ಅವಲತ್ತುಕೊಂಡರು. ಅಪಘಾತ ತಡೆಗೆ ಹಂಪ್ಸ್ ಒಂದೇ ಪರಿಹಾರವಲ್ಲ. ರಂಬಲ್ ಸ್ಟ್ರಿಪ್ಸ್ ಬೋರ್ಡ್ಸ್, ರೇಡಿಯಂ ಸ್ಟಿಕ್ಕರ್‌ಗಳನ್ನು ಅಳವಡಿಸಿ ಅಪಘಾತ ನಿಯಂತ್ರಿಸಬೇಕಾಗುತ್ತದೆ.

    ಈ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ತಿಳಿಸಿ ಎಫ್‌ಐಆರ್ ದಾಖಲಿಸಲು ಸೂಚಿಸುವುದಾಗಿ ತಿಳಿಸಿದರು.ತಿಪಟೂರಿನ ಕಾಂತರಾಜ್ ಅವರು ಕರೆ ಮಾಡಿ, ಪ್ರಕರಣವೊಂದರಲ್ಲಿ ರಾಜಿಗೆ ಒಪ್ಪದಿದ್ದಕ್ಕೆ ನನ್ನ ಮೇಲೆ ತಿಪಟೂರು ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆಯೆಂದರು. ದೂರು ಬಂದಾಗ ಪ್ರಕರಣ ದಾಖಲಿಸುವುದು ಪೊಲೀಸರ ಕರ್ತವ್ಯ. ಕಾನೂನಾತ್ಮವಾಗಿ ಎದುರಿಸುವಂತೆ ಸಲಹೆ ನೀಡಿದರು.

   ಶಿರಾದ ರಂಗನಾಥ್ ಎಂಬುವರು ಕರೆ ಮಾಡಿ ನಗರದ ಸಿರಾ ನಗರದ ಪ್ರವಾಸಿ ಮಂದಿರದ ವೃತ್ತ ಸೇರಿದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಇದ್ದ ಟ್ರಾಫಿಕ್ ಸಿಗ್ನಲ್‌ಗಳನ್ನು ತೆಗೆದಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆಯಾಗುತ್ತಿದೆಯೆಂದರು. ಎಸ್ಪಿ ಅವರು ನಗರಸಭೆ ಅವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

   ತುಮಕೂರಿನ ಅನಿಲ್ ಹಾಗೂ ಕ್ಯಾತ್ಸಂದ್ರದ ಪ್ರದೀಪ್ ಎಂಬುವರು ಕರೆ ಮಾಡಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಕುವ ನೆಪದಲ್ಲಿ ಅವಿತುಕೊಂಡು ಹಾಗೂ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ನಿಂತುಕೊಂಡು ವಾಹನ ಸವಾರರು ಹೆದರಿ ಸಂಚರಿಸು ವಾತಾವರಣ ನಿರ್ಮಿಸುತ್ತಿದ್ದಾರೆ. ಇದರಿಂದ ಅಪಘಾತಗಳಾಗಿ ಕೈ ಕಾಲು ಮುರಿದುಕೊಳ್ಳುವಂತಾಗಿದೆ ಎಂದು ಹೇಳಿದರು. ಸರಿಯಾದ ದಾಖಲೆ ಇಟ್ಟುಕೊಂಡಿದ್ದಲ್ಲಿ ಯಾರು ಹೆದರಬೇಕಿಲ್ಲ. ಅವಿತುಕೊಂಡು ದಂಡದ ಚಲನ್ ಹಾಕುವ ಅವಶ್ಯಕತೆಯೂ ಪೊಲೀಸರಿಗಿಲ್ಲ. ನಿತ್ಯ ತ್ವರಿತ ಕ್ರಮವಾಗಬೇಕೆಂದು ಕೋರಿದರು.

   ಬನಶಂಕರಿಯ ನಾಗರಾಜ್ ಎಂಬುವರು ಕರೆಮಾಡಿ, ತುಮಕೂರಿನ ದೇವರಾಜ ಅರಸು ಹೊಸಬಸ್‌ನಿಲ್ದಾಣದ ಮುಂಭಾಗ ಆಟೊಗಳು ಎರಡು ಲೈನ್‌ನಲ್ಲಿ ನಿಲ್ಲುತ್ತಿರುವುದರಿಂದ ವಾಹನ, ಪ್ರಯಾಣಿಕರ ಸಂಚಾರಕ್ಕೆ ಅಡಚಣೆಯಾಗಿದೆ ಎಂದರು. ಬಸ್‌ನಿಲ್ದಾಣದ ಬಳಿ ಆಟೊ ಪಾರ್ಕಿಂಗ್ ಅತ್ಯಾವಶ್ಯಕ. ಬೇರೆಡೆ ಜಾಗಯಿಲ್ಲದ ಕಾರಣ ಎರಡು ಸಾಲಿನಲ್ಲಿ ನಿಲ್ಲಲು ಅವಕಾಶಕಲ್ಪಿಸಿದ್ದು, ಅಡ್ಡಾದಿಡ್ಡಿ ರಸ್ತೆಗಿಳಿದರೆ ದಂಡ ಹಾಕಲಾಗುತ್ತಿದೆ ಎಂದು ಸಮಾಜಾಯಿಷಿ ನೀಡಿದರು. ವಿನೋದ್ ಎಂಬುವರ ಕರೆ ಮಾಡಿ ತಮ್ಮ ಸಹೋದರ ರಾಜಕೀಯ ಪ್ರಭಾವ ಬೀರಿ ತಾಯಿಗೆ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆ.

   ಈ ಬಗ್ಗೆ ದೂರು ನೀಡಿದರೂ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಈ ಕುರಿತು ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.ರಾಧಾಕೃಷ್ಣ ಎಂಬುವರು ಕರೆ ಮಾಡಿ ಫೋಕ್ಸೊ ಪ್ರಕರಣದ ಬಗ್ಗೆ ಕ್ರಮವಾಗದಿರುವ ಬಗ್ಗೆ ಪ್ರಸ್ತಾಪಿಸಿದರು. ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ವಹಿಸಬೇಕು ಮನವಿಗಳು ಕೇಳಿಬಂದವು.
ಸಂಜೀವ್ ಹೆಸರಲ್ಲಿ ಸುಳ್ಳುಕರೆ: ತುಮಕೂರಿನ ವ್ಯಕ್ತಿಯೊಬ್ಬ ಕೊರಟಗೆರೆಯ ಸಂಜೀವ್ ಎಂದು ಸುಳ್ಳು ಹೆಸರು ಹೇಳಿಕೊಂಡು ಕರೆ ಮಾಡಿ ಎಸ್ಪಿ ಅವರಿಗೆ ವಂಚಿಸುವ ಯತ್ನ ಮಾಡಿದ್ದು ಫೋನ್ ಇನ್‌ನಲ್ಲಿ ಕಂಡುಬಂದಿತು. ಕರೆ ಮಾಡಿದ ಕೆಲವು ಜನರು ಇದೊಂದು ಉತ್ತಮ ಕಾರ್ಯಕ್ರಮ. ನೇರವಾಗಿ ದೂರುಹೇಳಿಕೊಳ್ಳಲು ಸೂಕ್ತ ವೇದಿಕೆ ಎಂದು ಪ್ರಜಾಪ್ರಗತಿ-ಪ್ರಗತಿ ಟಿವಿ ನೇರ ಫೋನ್‌ಗೆ ಪ್ರಶಂಸಿಸಿದರು. ಬಾಕ್ಸ್

ಮೀಟರ್ ಬಡ್ಡಿ ಮೂಲದಲ್ಲೆ ಬ್ರೇಕ್‌ಹಾಕಲು ಕ್ರಮ
    ಮೀಟರ್ ಬಡ್ಡಿ ಕಿರುಕುಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್ಪಿ ಕೆ.ವಿ.ಅಶೋಕ್ ಅವರು ಸ್ವಸಹಾಯ ಸಂಘಗಳವರು ಒಂದೇ ಒಕ್ಕೂಟದಡಿ ಸಾಲಪಡೆಯದೆ ಬೇರೆ ಬೇರೆ ಒಕ್ಕೂಟದಲ್ಲಿ ಸಾಲ ಪಡೆದು ತೀರಿಸಲಾಗದೆ ಬಡ್ಡಿಯ ಸುಳಿಯಲ್ಲಿ ಸಿಲುಕುತ್ತಿರುವುದು ಕಂಡುಬಂದಿದೆ. ಹಾಗಾಗಿ ಇದನ್ನು ಮೂಲದಲ್ಲೇ ನಿಯಂತ್ರಿಸಬೇಕೆಂದು ಒಂದು ಕಡೆ ಸಾಲ ಪಡೆದ ಗುಂಪುಗಳಿಗೆ ಬೇರೆಡೆ ಸಾಲ ಸಿಗದಂತೆ ಕ್ರಮ ವಹಿಸಬೇಕೆಂದು ಲೀಡ್ ಬ್ಯಾಂಕ್ ಮ್ಯಾನೇಜರ್, ಡಿಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು.

ಸೈಬರ್ ಕ್ರೈಂ ನಿಯಂತ್ರಣ ಎಚ್ಚರಿಕೆಯೇ ಪರಿಹಾರ

   ಹೆಚ್ಚುತ್ತಿರುವ ಸೈಬರ್ ಕ್ರೈಂಗಳ ನಿಯಂತ್ರಣಕ್ಕೆ ಆತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕ್ರಮ ವಹಿಸಿರುವ ರಾಜ್ಯ ಕರ್ನಾಟಕವಾಗಿದ್ದು, ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗುತ್ತಿದೆ. ತಮ್ಮ ಮೊಬೈಲ್ ವಾಟ್ಸ್ಯಾಪ್ , ಮಸೇಜ್‌ಗಳಿಗೆ ಬರುವ ಉಡುಗೊರೆ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಎಂದು ತಿಳಿದಿದ್ದರೂ ದೊಡ್ಡವರೇ ಆ ತಪ್ಪು ಮಾಡುತ್ತಿದ್ದಾರೆ. ಮೊಬೈಲ್‌ಗೆ ಬರುವ ಓಟಿಪಿ ಯಾರಿಗೂ ಬಹಿರಂಗಗೊಳಿಸಬಾರದು ಎಂಬ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬರು ಪಾಲಿಸಬೇಕು. ಯಾವುದು ಉಚಿತವಾಗಿ ಸಿಗುವುದಿಲ್ಲ. ಇದನ್ನು ಅರಿತರೆ ಟೆಕ್ನಿಕಲ್ ಫ್ರಾಡ್ ಗಳಿಂದ ಪಾರಾಗಬಹುದು ಎಂದು ಎಸ್ಪಿ ನುಡಿದರು.

     ಎಸ್ಪಿಯಾಗಿ ನಾನು ತುಮಕೂರು ಜಿಲ್ಲೆಗೆ ಪ್ರಥಮ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದು ಒಂದು ವರ್ಷ ಕಳಿದಿದೆ. ತುಮಕೂರಿನ ಜನತೆ ಶಾಂತಿಪ್ರಿಯರಾಗಿದ್ದು, ಸೌಹಾರ್ದದಿಂದ ಬಾಳ್ವೆ ನಡೆಸಲು ಇಚ್ಚೆಪಡುವವರು. ಪೊಲೀಸ್ ಇಲಾಖೆಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರ ಹೆಚ್ಚಿನದಾಗಿ ದೊರೆತಿದ್ದು,ಇತ್ತೀಚೆಗೆ ನಡೆದ ಈದ್ ಮೆರವಣಿಗೆ, ಗಣೇಶೋತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದ ತುಮಕೂರು ಜನತೆಗೆ ಅಭಿನಂದಿಸುವೆ.

Recent Articles

spot_img

Related Stories

Share via
Copy link
Powered by Social Snap