ಹುಳಿಯಾರು
ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವ ಮೂಲಕ ಶೋಷಿತ ಸಮುದಾಯಗಳ ಸಮಾನತೆಗಾಗಿ ಸಾಕಷ್ಟು ಅವಕಾಶವನ್ನು ಒದಗಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದು ಅವರ ಆದರ್ಶಗಳ ಅನುಪಾಲನೆಯೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಘವೇಂದ್ರ ತಿಳಿಸಿದರು.
ಹುಳಿಯಾರಿನ ಕಾಲನಿ ರಸ್ತೆಯಲ್ಲಿರುವ ಅಂಬೇಡ್ಕರ್ ಸರ್ಕಲ್‍ನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಿಧನರಾಗಿ ಇಂದಿಗೆ 63 ವರ್ಷಗಳಾಗಿದ್ದು ಈ ದಿನವನ್ನು ದೇಶಾದ್ಯಂತ ಮಹಾ ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ದಲಿತರ ಹಿಂದುಳಿದವರ ಶೋಷಿತರ ಸಂಕಷ್ಟಗಳಿಗೆ ವಿಮೋಚನೆ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕರು ಎಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ. ಅಂಬೇಡ್ಕರ್ ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಮಾಡುವುದನ್ನು ಹೋಗಲಾಡಿಸಿದಲ್ಲಿ ಅದೇ ನಾವು ಅವರಿಗೆ ಕೊಡುವ ಗೌರವವಾಗಿದೆ ಎಂದರು. ಇಡೀ ದೇಶಕ್ಕೆ ಸಮಾನತೆಯ ಮಂತ್ರ ಬೋಧಿಸಿದ ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ನಾಗಪ್ರಸಾದ್, ನರಸಿಂಹಮೂರ್ತಿ, ಲೋಕೇಶ್, ಗೋವಿಂದರಾಜು, ಗುರುಪ್ರಸಾದ್, ದುರ್ಗರಾಜು, ತಿಮ್ಮಣ್ಣ, ಬಾಲರಾಜ್ ಶ್ರೀಧರ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ