ಚಿತ್ರದುರ್ಗ :
ಮಹಾತ್ಮ ಗಾಂಧೀಜಿಯವರ ತತ್ವ ಸಿದ್ದಾಂತಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ನಗರದ ತ.ರಾ.ಸು ರಂಗಮಂದಿರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಗಾಂಧೀಜಿ ಜಯಂತಿ, ಸರ್ವಧರ್ಮ ಪ್ರಾರ್ಥನೆ, ಉಪನ್ಯಾಸ ಹಾಗೂ ಗಾಂಧಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಂತಹ ನಾಯಕರು ಅನುಸರಿಸಿದ ಮಾರ್ಗಗಳನ್ನು ಇಂದಿನ ಯುವ ಪೀಳಿಗೆಯು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಮ್ಮದಿಯಿಂದ ಬಾಳುವಂತೆ ಮಾಡಿದ ಮಹಾನ್ ನಾಯಕ ಗಾಂಧೀಜಿ ಎಂದರು
ಅಹಿಂಸೆಯನ್ನು ದೇಶಾದ್ಯಂತ ಮೊದಲು ಪ್ರತಿಪಾದನೆ ಮಾಡಿದವರು ಗಾಂಧೀಜಿ. ಅವರು ತೋರಿದ ಮಾರ್ಗದಲ್ಲಿ ನಡೆದರೆ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬಹುದು. ಗಾಂಧೀಜಿ ಜಯಂತಿ ಆಚರಣೆ ಹಿನ್ನಲೆ ಹಾಗೂ ಗಾಂಧೀಜಿಯವರ ಬದುಕಿನ ಬಗೆಗಿನ ಚಿತ್ರಣ ಇಂದಿನ ಯುವ ಪೀಳಿಗೆಗೆ ಸಮರ್ಪಕ ಅರಿವಿಲ್ಲ ಎಂದರು
ಪರಿಸರ ಮಾಲಿನ್ಯ, ನಿರುದ್ಯೋಗ ಸಮಸ್ಯೆಯಂತಹ ಪ್ರಮುಖ ಸಮಸ್ಯೆಗಳಿಗೆ ಗಾಂಧೀಜಿಯವರ ತತ್ವ ಸಿದ್ಧಾಂತಗಳಲ್ಲಿಯೇ ಪರಿಹಾರವಿದೆ. ವಿದೇಶಿ ವಸ್ತುಗಳನ್ನು ತ್ಯಜಿಸುವುದು, ಗುಡಿ ಕೈಗಾರಿಕೆಗಳ ಉತ್ತೇಜನದಿಂದ ಪರಿಸರದ ರಕ್ಷಣೆ ಹಾಗೂ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಿದಾನಂದ ವಿಶೇಷ ಉಪನ್ಯಾಸ ನೀಡಿ, ಗಾಂಧೀಜಿಯವರ ಪರಿಕಲ್ಪನೆಯಂತೆ ಇಂದಿನ ಹಿಂದೂಸ್ಥಾನ್ ಇಲ್ಲ. ಗಾಂಧೀಜಿಯವರು ಭಾರತಕ್ಕೆ ರಾಜಕೀಯ ಪಕ್ಷಗಳು ಬೇಡವೆ ಬೇಡ ಎಂದಿದ್ದರು. ಹಳ್ಳಿಗಳು ಸ್ವಾಲಂಬನೆಯಾಗಬೇಕು, ಸಮುದಾಯ ಆಧಾರಿತ ನಾಯಕತ್ವ ಗ್ರಾಮಗಳಲ್ಲಿ ಇರಬೇಕು ಎಂದು ಪ್ರತಿಪಾದಿಸಿದ್ದರು. ಪ್ರತಿಯೊಬ್ಬರೂ ಇಂದ್ರಿಯ ನಿಗ್ರಹ ಮಾಡಿದ್ದೆ ಆದರೆ ಉತ್ತಮ ವ್ಯಕ್ತಿ ಹಾಗೂ ಉತ್ತಮ ಸಮಾಜವನ್ನು ಕಟ್ಟಬಹುದು ಎಂಬುದು ಗಾಂಧೀಜಿಯವರ ಕನಸಾಗಿತ್ತು ಎಂದು ಹೇಳಿದರು.
ದುಂಡು ಮೇಜಿನ ಪರಿಷತ್‍ನಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿಯಾದಾಗ ಅಲ್ಲಿ ಭಾರತ ಇಬ್ಭಾಗವಾಗುವ ಪ್ರಶ್ನೆ ಹುಟ್ಟಿ ದ್ವಿ ಮತ ಚಲಾವಣೆ ನಡೆಯಿತು. ಗಾಂಧೀಜಿಯವರು ಸ್ವಾವಲಂಬನೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಗಾಂಧೀಜಿಯವರ ಚಿಂತನೆಗೆ ಇಂದು ನಾವೆಲ್ಲಾ ಬೆಲೆ ಕೊಡಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಗಾಂಧೀ ಜಯಂತಿ ಒಂದು ರಾಷ್ಟ್ರೀಯ ಹಬ್ಬವಾಗಿದೆ. ದೇಶದಲ್ಲಿ ಮೇಲು-ಕೀಳು ಎಂಬ ಭಾವನೆಯಿಂದ ದೇಶ ಇಬ್ಭಾಗವಾಗುವುದನ್ನು ಗಾಂಧೀಜಿ ತಡೆದರು. ಗಾಂಧೀಜಿಯವರ ಅಹಿಂಸಾ ತತ್ವ, ಸತ್ಯ ನುಡಿ, ಅವರ ಬದ್ದತೆ ಬಗ್ಗೆ ಇತಿಹಾಸವನ್ನು ಓದಿ ಅನುಭವಿಸಬೇಕು. ಆಗ ಮಾತ್ರ ಗಾಂಧೀಜಿಯವರ ವ್ಯಕ್ತಿತ್ವ ಅರಿವಾಗುತ್ತದೆ. ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೆ ಮಡಿ ಸೇರಿದಂತೆ ಹಲವಾರು ಚಳುವಳಿಗಳನ್ನು ಮಾಡಿ ಬ್ರಿಟಿಷರು ಭಾರತ ಬಿಟ್ಟು ತೊಲಗುವಂತೆ ಮಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಯಾವುದೇ ಸೌಲಭ್ಯವಿಲ್ಲದಿದ್ದರೂ, ಕಷ್ಟ ಪಟ್ಟು ಓದಿ ದೇಶದ ಉತ್ತಮ ಪ್ರಧಾನಿ ಎನಿಸಿಕೊಂಡರು. ಇಬ್ಬರು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಮಾತನಾಡಿ, ಗಾಂಧೀಜಿಯವರು ಭಾರತದಲ್ಲಿ ಜನ್ಮತಾಳಿದ್ದು ನಮಗೆಲ್ಲಾ ಹೆಮ್ಮೆಯ ವಿಷಯ, ಸ್ವಚ್ಚತೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವಲ್ಲಿ ಅವರ ಪಾತ್ರ ಬಹು ಮುಖ್ಯವಾಗಿದೆ. ಗಾಂಧೀಜಿಯವರ ಜೀವನವೇ ಒಂದು ಪಾಠ. ಅವರಲ್ಲಿರುವ ಒಂದಾದರೂ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ತಹಶೀಲ್ದಾರ್ ವೆಂಕಟೇಶ್, ನಗರಾಭಿವೃದ್ಧಿ ಕೋಶದ ಅಧಿಕಾರಿ ರಾಜಶೇಖರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು. ವಾರ್ತಾಧಿಕಾರಿ ಬಿ. ಧನಂಜಯ ಸ್ವಾಗತಿಸಿದರು. ಗಣೇಶ್ ನಿರೂಪಿಸಿದರು, ತುಕಾರಾಮ್ ರಾವ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ