ಚಿತ್ರದುರ್ಗ;
ತುರವನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು
ತಮ್ಮ ಬೆಂಬಲಿಗರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆಗೂಡಿ ಧರಣಿ ನಡೆಸಿದ ಶಾಸಕರು, ರಾಜ್ಯ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನನ್ನ ಕ್ಷೇತ್ರದ ಕಾಲೇಜನ್ನು ಯಾವುದೇ ಕಾರಣವಿಲ್ಲದೆ ಏಕಾ ಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿದೆ. ಇದು ಅಕ್ಷಮ್ಯ ಅಪರಾಧವೆಂದು ಸರ್ಕಾರದ ವಿರುದ್ದ ಗುಡುಗಿದರು
ಶಾಸಕರು ಧರಣಿ ನಡೆಸುವುದಕ್ಕೂ ಮುನ್ನವೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ಒನಕೆ ಓಬವ್ವ ವೃತ್ತದಲ್ಲಿ ಸುತ್ತುವರಿದಿದ್ದ ಪೊಲೀಸರು ಕೊರೋನಾ ವೈರಸ್ ಇರುವುದರಿಂದ ಶಾಸಕರು ಮತ್ತವರ ಬೆಂಬಲಿಗರನ್ನು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೋಗಲು ಅವಕಾಶ ನೀಡದ ಕಾರಣ ಹಿಂದಕ್ಕೆ ಬಂದ ಶಾಸಕರು ಶಿಲ್ಪಭವನದ ಪಕ್ಕದ ರಸ್ತೆಯಲ್ಲಿಯೇ ಧರಣಿ ಕುಳಿತು ರಾಜ್ಯ ಬಿಜೆಪಿ.ಸರ್ಕಾರದ ಕ್ರಮವನ್ನು ವಿರೋಧಿಸಿದರು.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತುರುವನೂರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದ್ದನ್ನು ಈಗಿನ ಬಿಜೆಪಿ.ಸರ್ಕಾರ ದುರುದ್ದೇಶದಿಂದ ನಿಪ್ಪಾಣಿಗೆ ಸ್ಥಳಾಂತರಿಸಿದೆ. ಇದರಿಂದ ತುರುವನೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪದವಿ ಶಿಕ್ಷಣ ಪಡೆಯಬೇಕಾದರೆ ಚಿತ್ರದುರ್ಗ ಇಲ್ಲವೇ ಚಳ್ಳಕೆರೆಗೆ ದಿನನಿತ್ಯವೂ ಪ್ರಯಾಣಿಸಬೇಕಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ಅಂತಿಮವಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದೇನೆ ಎಂದು ಹೇಳಿದರು
ನಿಪ್ಪಾಣಿಗೆ ವರ್ಗಾಯಿಸಿರುವುದನ್ನು ರದ್ದುಪಡಿಸಿ ತುರುವನೂರಿನಲ್ಲಿಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಅಧಿಕಾರ ಕಳೆದುಕೊಂಡರು ಪರವಾಗಿಲ್ಲ. ಸರ್ಕಾರ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದರೂ ಚಿಂತೆಯಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ರಾಜ್ಯ ಬಿಜೆಪಿ.ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿವಿಧ ಸಂಘಟನೆಗಳ ಬೆಂಬಲ:
ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ವರ್ಗಾಯಿಸಿರುವ ಬಿಜೆಪಿ.ದುರುದ್ದೇಶವನ್ನು ವಿರೋಧಿಸಿ ಚಳ್ಳಕೆರೆ ಶಾಸಕರು ನಡೆಸುತ್ತಿರುವ ಧರಣಿಗೆ ವಿವಿಧ ಸಂಘಟನೆಗಳವರು ಬೆಂಬಲಿಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್, ರೈತ ಮುಖಂಡರುಗಳಾದ ಕೆ.ಪಿ.ಭೂತಯ್ಯ, ಟಿ.ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿ.ಪಂ.ಸದಸ್ಯ ಪ್ರಕಾಶ್‍ಮೂರ್ತಿ, ಮಾಜಿ ಸದಸ್ಯರುಗಳಾದ ಬಾಬುರೆಡ್ಡಿ, ರವಿಕುಮಾರ್, ಕೆಪಿಸಿಸಿ ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಎಂ.ಅಜ್ಜಪ್ಪ, ಸಂಪತ್‍ಕುಮಾರ್, ಮುಖಂಡರಾದ ಕೆ.ಕೃಷ್ಣಪ್ಪ ( ಬಂಗಾರದ ಅಂಗಡಿ), ಮುದಸಿರ್‍ನವಾಜ್, ವಸೀಂ, ಚಿದಾನಂದಮೂರ್ತಿ, ಎನ್.ಎಸ್.ಯು.ಐ.ಜಿಲ್ಲಾಧ್ಯಕ್ಷ ಮಧುಸೂದನ್ ಯಾದವ್ ಸೇರಿದಂತೆ ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಕೆ.ಪಿ.ಸಿ.ಸಿ.ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಜಕ್ಕಪ್ಪನವರು ಧರಣಿಗೆ ಆಗಮಿಸಿ ಶಾಸಕ ಟಿ.ರಘುಮೂರ್ತಿಗೆ ಬೆಂಬಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








