ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

ದಾವಣಗೆರೆ:

    ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತಕ್ಷಣವೇ ಮಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ ನಾಡ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಮಲೇಬೆನ್ನೂರಿನ ನಾಡ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪ ತಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

      ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಬಲ್ಲೂರು ರವಿಕುಮಾರ್, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯ ಅಭಾವಕ್ಕೆ ಒಳಗಾಗಿ ರೈತರು ಬರಗಾಲಕ್ಕೆ ತುತ್ತಾಗಿದ್ದಾರೆ. ಈ ಬಾರಿಯೂ ಮಳೆ ಉತ್ತಮವಾಗಿ ಆಗದ ಕಾರಣಕ್ಕೆ ಇಳುವರಿ ಕುಂಠಿತಗೊಂಡಿದೆ. ಹೀಗಾಗಿ ರೈತರು ತೀವ್ರ ಸಂಕಷ್ಠವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

     ರೈತರು ಮೊದ, ಮೊದಲು ಹದ ಮಳೆ ಬಂದಿದ್ದ ಕಾರಣಕ್ಕೆ ಉತ್ತಮ ಇಳುವರಿ ಬರಬಹುದೆಂಬ ಕಾರಣಕ್ಕೆ ಸಾಲಸೋಲ ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ, ನಂತರದಲ್ಲಿ ಮತ್ತೆ ಮಳೆ ಕೈಕೊಟ್ಟಿದ್ದರಿಂದ ಹಾಕಿದ ಬಂಡವಾಳವೂ ಕೈ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಅಷ್ಟಿಷ್ಟು ಬೆಳೆ ಕೈಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಕೇವಲ 1100 ರೂ.ಗೆ ಮೆಕ್ಕೆಜೋಳ ಬಿಕರಿಯಾಗುತ್ತಿದೆ. ಆದ್ದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಭತ್ತ ಬೆಳೆಗಾರರ ಪರಿಸ್ಥಿತಿಯೂ ಮೆಕ್ಕೆಜೋಳ ಬೆಳೆಗಾರರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಕೋಗಳಿ ಮಂಜುನಾಥ್, ಕೆ.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link