ತುರುವೇಕೆರೆ
ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟ ರೈತರಿಗೆ ಕಳೆದ ಒಂದೆರಡು ತಿಂಗಳಿಂದ ಇದುವರೆಗೂ ಹಣ ಕೈಗೆ ಬಾರದೆ ರೈತರು ಪರಿತಪಿಸುವಂತಾಗಿದೆ.
ಕಳೆದ ಫೆಬ್ರುವರಿಯಲ್ಲಿ ಪಟ್ಟಣದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಪ್ರೋತ್ಸಾಹ ಧನ ಸೇರಿ ಪ್ರತಿ ಕ್ವಿಂಟಾಲ್‍ಗೆ 2895 ರೂ. ಸಿಗುವುದೆಂಬ ಆಸೆಯಿಂದ ರೈತರು ಖರೀದಿ ಕೇಂದ್ರಕ್ಕೆ ರಾಗಿಯನ್ನು ಬಿಟ್ಟಿದ್ದರು. ಫೆಬ್ರುವರಿ 13 ರಿಂದ ಮಾರ್ಚ್ 31 ರ ತನಕ ಖರೀದಿ ಕೇಂದ್ರ ರಾಗಿ ಖರೀದಿ ಮಾಡಿದೆ. ಇದುವರೆವಿಗೂ ಒಟ್ಟು 1244 ರೈತರಿಂದ 28,910 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ .
ಮಾರ್ಚ್ 13 ರ ತನಕ ರಾಗಿ ಬಿಟ್ಟಿರುವ ರೈತರ ಖಾತೆಗೆ ಮಾತ್ರ ನೇರವಾಗಿ ಹಣ ಸಂದಾಯ ಮಾಡಲಾಗಿದೆ. ರಾಗಿ ಖರೀದಿ ಮಾಡಿದ ಹತ್ತು ದಿನಗಳೊಳಗೆ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟು ತಿಂಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲದಿರುವುದು ಖಂಡನೀಯ ಎಂದು ತಾಲ್ಲೂಕು ರೈತ ಸಂಘದ ಮುಖಂಡ ತಾಳಕೆರೆ ನಾಗೇಂದ್ರ ತಿಳಿಸಿದ್ದಾರೆ.
ರೈತರ ರಾಗಿಯ ಹಣವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಸ್ಥಳೀಯ ವ್ಯವಸ್ಥಾಪಕರು ವಿನಾಕಾರಣ ರೈತರನ್ನು ಖರೀದಿ ಕೇಂದ್ರಕ್ಕೆ ಅಲೆಸುತ್ತಿದ್ದಾರೆ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಜಂಟಿ ನಿರ್ದೇಶಕರಿಗೂ ದೂರು ಸಲ್ಲಿಸಲಾಗಿದೆ. ರೈತರ ಖಾತೆಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡದಿದ್ದಲ್ಲಿ ಖರೀದಿ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳ ಕಚೆರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ತಹಸೀಲ್ದಾರ್ ಮತ್ತು ಸ್ಥಳೀಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ವಸಂತಕುಮಾರ್, ಯೋಗೀಶ್, ಶೇಖರಪ್ಪ ಸೇರಿದಂತೆ ಇತರೆ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
