ತುಮಕೂರು
ಲೋಕಸಭಾ ಚುನಾವಣೆ ಏಪ್ರಿಲ್ ತಿಂಗಳ 18ರಂದು ನಡೆಯಲಿದ್ದು, ಅಂದು ತುಮಕೂರು ಜಿಲ್ಲೆಯ ಬೆಳ್ಳಾವಿ, ಕೋರ, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ, ಕಸಬ, ಹುಲಿಕುಂಟೆ ಹೋಬಳಿ, ಮಧುಗಿರಿ ತಾಲ್ಲೂಕಿನ ಕಸಬಾ, ದೊಡ್ಡೇರಿ ಹೋಬಳಿ ಹಾಗೂ ಕೊರಟಗೆರೆಯ ಕೊಳಾಲ ಹೋಬಳಿಗಳಲ್ಲಿ ರೈತ ಮತಗಟ್ಟೆಗಳಲ್ಲಿ ಮತದಾನ ಮಾಡದೆ ಚುನಾವಣಾ ಬಹಿಷ್ಕಾರ ಮಾಡಿ, ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಸುದೀಂದ್ರ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರು, ಶಿರಾ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಕೆಲ ಹೋಬಳಿಗಳಲ್ಲಿ ಪವರ್ ಗ್ರಿಡ್ ಸಂಸ್ಥೆ, ಕೂಡ್ಗಿ ಸಂಸ್ಥೆ, ಕೆಪಿಟಿಸಿಎಲ್‍ನಿಂದ ಮಾಡಿದ ಕಾಮಗಾರಿಗಳಿಂದ ರೈತರ ಜಮೀನುಗಳು ನಾಶವಾಗಿವೆ. ಇದಕ್ಕೆ ಕೇಂದ್ರ ಸರ್ಕಾರದ ನಿಯಮದಂತೆ ಪರಿಹಾರ ಕೂಡ ನೀಡಿಲ್ಲ. ಈ ಬಗ್ಗೆ ಹಲವು ಹೋರಾಟಗಳನ್ನು ಮಾಡಲಾಗಿದೆ.
ಆದರೂ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಗಮನ ಹರಿಸಿಲ್ಲ. ರೈತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮತ್ತು ಚುನಾವಣೆ ಬಹಿಷ್ಕಾರದ ಬಗ್ಗೆ ರಾಜ್ಯ ಚುನಾವಣಾಧಿಕಾರಿಗಳು,. ಸರ್ಕಾರದ ಮುಖ್ಯ ಕಾರ್ಯದರ್ಶಗಳಿಗೆ ಹಾಗೂ ತುಮಕೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಮುಖ್ಯ ಚುನಾವಣಾಧಿಕಾರಿಗಳು ಕ್ರಮ ಜರುಗಿಸಿ ಅದರ ವರದಿಯನ್ನು ಸಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಆ ಕೆಲಸ ಇಂದಿಗೂ ಆಗಿಲ್ಲ ಎಂದು ಆಕ್ರೋಷಿಸಿದರು.
ಕಳೆದ ಫೆಬ್ರುವರಿ 27ರಂದು ಕೃಷಿಕ ಸಮಾಜದ ವತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಲಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕಂಪನಿಗಳಿಂದ ರೈತರಿಗಾದ ಅನ್ಯಾಯವನ್ನು ಒಪ್ಪಿಕೊಂಡಿದ್ದು, ಒಂದು ವಾರದೊಳಗೆ ಒಂದು ಹೋಬಳಿಯ ಸಮಸ್ಯೆಯನ್ನು ಪರಿಹರಿಸುವುದಾಗಿ ಹಾಗೂ ಎರಡು ತಿಂಗಳಲ್ಲಿ ಎಲ್ಲಾ ಹೋಬಳಿಗಳ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದರು.
ಇದಾದ ನಂತರ 15 ದಿನಗಳ ಬಳಿಕೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದಾಗ ಅವರು, ನಿಮಗೆ ಯಾವ ರೈತರ ಬಗ್ಗೆ ಜೆಎಂಸಿ ಮತ್ತು ಪಂಚನಾಮ ಬೇಕು ಎಂದು ಕೇಳಿದರೆ ಅವರದು ನೀಡುತ್ತೇನೆ ಎಂಬುದಾಗಿ ಸಬೂಬು ಹೇಳಿದ್ದಲ್ಲದೆ, ರೈತರನ್ನು ವಂಚಿಸಿದ ಕಂಪನಿಗಳ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
ನಮಗೆ ಕೇವಲ ಒಬ್ಬರಿಬ್ಬರ ಸಮಸ್ಯೆ ಪರಿಹರಿಸಿದರೆ ಸಾಲದು ಎಲ್ಲಾ ರೈತರ ಸಮಸ್ಯೆಯನ್ನು ಪರಿಹರಿಸಬೇಕೆಂಬುದು ನಮ್ಮ ಒತ್ತಾಯವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದು ಸರ್ಕಾರ ರಚನೆಯಾದ ನಂತರ ಎಲ್ಲಾ ರೈತರ ಜಿಲ್ಲಾಧಿಕಾರಿ ಕಚೇರಿ ಮುಂಚೆ ಆಮರಣಾಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಜ್ಷ ಕಂಚೇನಹಳ್ಳಿ ಸುರೇಶ್, ಪದಾಧಿಕಾರಿಗಳಾದ ಈರಣ್ಣ, ರಾಜಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.