ಮಧುಗಿರಿ
ವಿಶೇಷ ವರದಿ : ರಾಜೇಂದ್ರ ಎಂ.ಎನ್.
ಬಾರದ ಬಾದ್ರಪದ ಮಾಸದ ಮಳೆ ಬಾರದಂಗೆ ಹೋಯಿತು. ಬಿತ್ತಿದ ಬೆಳೆ ಭೂ ತಾಯಿಯ ಒಡಲಲ್ಲೆ ಉಳಿಯಿತು. ಇಟ್ಟ ಬೆಳೆ ಬರಲಿಲ್ಲ. ಸರಕಾರದಿಂದ ನಂಬಿದ ಪರಿಹಾರ ಇನ್ನೂ ಬಂದಿಲ್ಲ ಎಂಬ ಕೂಗು ತಾಲ್ಲೂಕಿನಲ್ಲಿ ಸಾಮಾನ್ಯವಾಗಿದ್ದು ರೈತ ಕಾಂಗಾಲಾಗಿರುವ ವಾತಾವರಣ ಕಂಡು ಬರುತ್ತಿದೆ.
ಈ ಬಾರಿ ತಾಲ್ಲೂಕಿನಲ್ಲಿ ಸುರಿದ ತುಂತುರು ಹನಿಗಳ ಮಳೆಯನ್ನೆ ನಂಬಿ ನಾ ಮುಂದು ತಾ ಮುಂದು ಎಂದು ಬೆಳೆ ಇಟ್ಟ ರೈತನ ಗೋಳು ಹೇಳ ತೀರದಾಗಿದೆ. ತೀವ್ರ ತರಹದ ಬರದೇಟಿಗೆ ಬಸವಳಿದು ಹೋಗಿದ್ದು ಮಳೆಯನ್ನೆ ನಂಬಿ ಬಿತ್ತಿದ ಬೆಳೆಯೇ ಸಂಪೂರ್ಣ ನಾಶವಾಗುವಂತಹ ಹಂತ ತಲುಪುತ್ತಿದೆ.
ಒಟ್ಟು ಆರು ಹೋಬಳಿಗಳಿಂದ ಧಾನ್ಯ, ಬೇಳೆಕಾಳು, ಆಹಾರ ಧಾನ್ಯಗಳು, ಎಣ್ಣೆ ಕಾಳು ಹಾಗೂ ವಾಣಿಜ್ಯ ಬೆಳೆಗಳಿಂದ ಕೂಡಿದ ತಾಲ್ಲೂಕಿನಲ್ಲಿ 38,560 ಹೆಕ್ಟೇರ್ ಕೃಷಿ ಭೂಮಿ ಇದೆ. ಈ ಬಾರಿ 18,842 ಹೆ. ರಷ್ಟು ಮಾತ್ರ ಮಾಳೆಯಾಶ್ರಿತ ವಿವಿಧ ಬೆಳೆಗಳನ್ನು ಬಿತ್ತಲಾಗಿತ್ತು. ಈಗ ಕೈ ಕೊಟ್ಟ ಮಳೆಯಿಂದಾಗಿ ಶೇ.48.64 ರಷ್ಟು ಮಾತ್ರ ಬೆಳೆ ಈವರೆವಿಗೂ ಬೆಳೆಯಲಾಗಿದ್ದು, ಬೆಳೆಯು ಸಂಪೂರ್ಣವಾಗಿ ಕೈಗೆ ಎಟುಕುವುದು ಸಹ ದುಸ್ತರವಾಗಿದೆ.
ತಾಲ್ಲೂಕಿನಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯನ್ನು 16,600 ರಷ್ಟು ಹೆಕ್ಟೇರ್‍ನಲ್ಲಿ ಬೆಳೆಯುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಗತಿಯಾಗಿದ್ದು 6878 ಹೆಕ್ಟೇರ್ ಮಾತ್ರ. ಮೆಕ್ಕೆ ಜೋಳದ ಗುರಿ 12,500 ಹೆ., ಪ್ರಗತಿ 7,228 ಹೆ. ರಾಗಿ 500 ಹೆ., ಪ್ರಗತಿ 2,515 ಹೆ. ಭತ್ತ 1000 ಹೆ. ಪ್ರಗತಿ ಸಾಧಿಸಿದ್ದು ಮಾತ್ರ 125 ಹೆಕ್ಟೇರ್‍ಗಳಲ್ಲಿ ಬೆಳೆಯಲಾಗಿತ್ತು. ಆದರೆ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಬೆಳೆಯು ಪ್ರಮಾಣದಲ್ಲಿ ಬಹಳಷ್ಟು ಇಳಿಕೆಯಾಗಿರುವುದು ಗೋಚರವಾಗುತ್ತಿದೆ.
ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿ ತಾಲ್ಲೂಕಿನಲ್ಲಿ 2015 ರಲ್ಲಿ 1114.80 ಮಿ.ಮೀ. ನಷ್ಟು ಮಳೆ ಸುರಿದಿದೆ. 2015 ರ ಸೆಪ್ಟೆಂಬರ್ ಮಾಸದಲ್ಲಿ 265.90 ಮಿ.ಮೀ. ನಷ್ಟು ಮಳೆಯಾಗಿತ್ತು. ಆದರೆ ಆಗ ಆದಂತಹ ಮಳೆ ಈಗ ಇಲ್ಲವಾಗಿದ್ದು, ಜಮೀನಿನಲ್ಲಿ ಇಟ್ಟ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆಗಾಗಿ ವ್ಯಯಿಸಿದ ಹಣವು ಸಹ ದೊರೆಯದಂತಹ ವಾತಾವರಣವಿದ್ದು, ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಿ ತಲೆ ಮೇಲೆ ಕೈಯಿಟ್ಟು ಕೂರುವಂತಾಗಿದೆ.
ತಾಲ್ಲೂಕಿನ ಬಹುತೇಕ ಕೆರೆ, ಕುಂಟೆಗಳು ಬರಿದಾಗಿದ್ದು, ನೀರಿಲ್ಲದೆ ಮರುಭೂಮಿಗಳಾಗಿವೆ. ಇನ್ನು ಸರಕಾರದ ವತಿಯಿಂದ ಕೊರೆಸುತ್ತಿರುವ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿಲ್ಲ. ದಿನೆ ದಿನೆ ನೀರು ಇರುವ ಕೊಳವೆ ಬಾವಿಗಳಲ್ಲಿ ಹಂತ ಹಂತವಾಗಿ ನೀರಿಲ್ಲದಂತಾಗುತ್ತಿವೆ. ಮಳೆ ಸರಿಯಾಗಿ ಆಗಿಲ್ಲದ ಕಾರಣ ಬಹಳಷ್ಟು ಕಡೆ ಬೆಳೆಗಳು ಒಣಗಿ ನಿಂತಿವೆ.
ಕೆಲ ಹೋಬಳಿಗಳಲ್ಲಿ ತೆಂಗು, ಬಾಳೆ, ಅಡಕೆ, ರೇಷ್ಮೆ, ಟಮೋಟೊ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಹೆಚ್ಚು ಬಿಸಿಲಿನಿಂದಾಗಿ ಅಡಕೆ ಕಾಯಿಗಳಾಗುವಂತಹ ಸಂದರ್ಭದಲ್ಲಿ ಉದುರಿ ಹೋಗಿವೆ. ತೆಂಗಿನ ಮರಗಳು ಒಣಗಿ ಬರಡಾಗಿವೆ. ದೊಡ್ಡೇರಿ ಹೋಬಳಿಯು ಹೆಚ್ಚಾಗಿ ಕಾಕಡ, ಕನಕಾಂಬರ ಹೂಗಳ ಬೆಳೆ ಬೆಳೆಯುವಂತಹ ಪ್ರದೇಶ. ಆದರೆ ಈ ಬಾರಿ ಅಲ್ಲಿಯೂ ಸಹ ಮಳೆಯ ಕೊರತೆಯಿಂದಾಗಿ ಹೂಗಳ ಬೆಳೆ ಕಡಿಮೆಯಾಗಿದ್ದು, ಉತ್ತಮ ದರವಿದ್ದರೂ ಹೂಗಳಿಲ್ಲ ಎಂಬಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ