ಜನ ಪ್ರತಿನಿಧಿ-ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ

ಗುಬ್ಬಿ:
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹರಿದ ಅಸಮಾಧಾನದ ಹೊಳೆ

ಇಲ್ಲಿನ ಪಟ್ಟಣ ಪಂಚಾಯತಿಯ ಬಜೆಟ್ ಮಂಡನೆಗೂ ಮುನ್ನಾ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲು ನಡೆಸಿದ ಸಂಘ ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರ ವಿಶೇಷ ಸಭೆಯಲ್ಲಿ ಹತ್ತು ಹಲವು ಸಮಸ್ಯೆಗಳು ಹಾಗೂ ಆದಾಯ ಮೂಲ ವೃದ್ಧಿಸಿಕೊಳ್ಳುವ ಆಲೋಚನೆಗಳು ವ್ಯಕ್ತವಾದವು.

ಪಟ್ಟಣದ ಪಪಂ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕಳೆದ ಬಾರಿ ನೀಡಿದ್ದ ಸಲಹೆಗಳೇ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಕಳೆದ ಬಜೆಟ್‍ನಲ್ಲಿ ಸಾರ್ವಜನಿಕರು ಸೂಚಿಸಿದ ಯಾವುದೇ ಯೋಜನೆ ಅನುಷ್ಠಾನಕ್ಕೆ  ಬಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಆದಾಯ ಮೂಲ ಹುಡುಕಿಕೊಳ್ಳಿ :

ಪಟ್ಟಣದ ಪ್ರಮುಖ ರಸ್ತೆಯಾದ ಎಂ.ಜಿ.ರಸ್ತೆ ದುರಸ್ಥಿ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಈ ಜೊತೆಗೆ ಪಟ್ಟಣದ ಹಲವು ಬಡಾವಣೆಯ ರಸ್ತೆ ಅಭಿವೃದ್ಧಿ ಆಗಬೇಕಿದೆ. ಹಳೇ ಪಟ್ಟಣದ ರಸ್ತೆಗಳಂತೂ ಹೇಳತೀರದಾಗಿದೆ. ಸಾವಿರಾರು ಜನರ ಹಿತ ಕಾಯಲು ಮೊದಲು ಮೂಲ ಸವಲತ್ತು ಒದಗಿಸಬೇಕು. ಇಲ್ಲಿನ ಅಧಿಕಾರಿಗಳು ಪಟ್ಟಣದ ಅಭಿವೃದ್ಧಿಗೆ ಆದಾಯ ಮೂಲವನ್ನೇ ಹುಡುಕಿಕೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯ್‍ಕುಮಾರ್ ಕಿಡಿಕಾರಿದರು.

ವಾಸ್ತವ ಅರಿತು ಬಜೆಟ್ ತಯಾರಿಸಿ :

ಸರ್ಕಾರಿ ಕಾಲೇಜು ಮೈದಾನದಲ್ಲಿ ವಾಯು ವಿಹಾರಕ್ಕೆ ಬರುವ ಜನರಿಗೆ ವಾಕಿಂಗ್ ಪಾತ್ ಮಾಡಲು ಕಳೆದ ಬಾರಿಯೇ ತಿಳಿಸಿದ್ದರೂ ಉದಾಸೀನತೆ ತೋರಲಾಗಿದೆ ಎಂದು ದೂರಿದ ಮುಖಂಡ ಸಲಿಂಪಾಷ ಅವರು ಈ ಹಿಂದೆ ಉಳಿತಾಯವಾದ 40 ಲಕ್ಷ ರೂ. ಗಳನ್ನು ಖಾಲಿ ಮಾಡಲಾಗಿದೆ. ನಿರೀಕ್ಷೆಯಂತೆ ಕೆಲಸ ಮಾಡದ ಪಪಂ ಅಧಿಕಾರಿಗಳು ನಗರ ಸಂಚಾರ ಮಾಡಿ ವಾಸ್ತವ ಅರಿತು ಬಜೆಟ್ ರಚಿಸಲು ಆಗ್ರಹಿಸಿದರು.

ಸರ್ಕಾರಿ ಕಟ್ಟಡ, ಖಾಸಗೀ ಜಾಹೀರಾತು :

ಬಹು ಬೇಡಿಕೆಯ ಸಾರ್ವಜನಿಕ ಸ್ಮಶಾನಕ್ಕೆ ಸ್ಥಳ ಗುರುತಿಸಬೇಕಿದೆ. ಸುಮಾರು 14 ಕೋಮಿನ ಜನರಿಗೆ ಸ್ಮಶಾನ ಅತ್ಯವಶ್ಯವಿದೆ. ಮಾರನಕಟ್ಟೆಕೆರೆಯು ಪಪಂ ಒಡೆತನಕ್ಕೆ ಬಂದಿಲ್ಲ. ಅಲ್ಲಿ ಸ್ಮಶಾನ ಮಾಡಲಾಗದು.

ಈ ನಿಟ್ಟಿನಲ್ಲ್ಲಿ ತುರ್ತು ಜಾಗ ಗುರುತಿಸಿ ಸ್ಮಶಾನ ನಿರ್ಮಿಸಲು ಒತ್ತಾಯಿಸಿದ ಹೋರಾಟಗಾರ ಜಿ.ಆರ್.ರಮೇಶ್ ಅವರುಬ ಆದಾಯ ಮೂಲ ಹೆಚ್ಜಿಸಿಕೊಳ್ಳುವ ಕಡೆ ನಿಗಾ ವಹಿಸದ ಅಧಿಕಾರಿಗಳು ಪಪಂಗೆ ಸಂಬಂಧಿಸಿದ ಮಾಂಸದಂಗಡಿ ಗೋಡೆ ಮೇಲೆ ಖಾಸಗಿ ಕಂಪನಿ ಜಾಹೀರಾತು ಬರೆಸಿದ್ದಾರೆ.

ಇದು ಪಪಂಗೆ ಬರಬೇಕಾದ ಆದಾಯವಾಗಿದೆ. ಈ ಜಾಹೀರಾತು ಶುಲ್ಕದ ಬಗ್ಗೆ ಯಾರಿಗೂ ತಿಳಿದಿಲ್ಲ ಎಂಬುದೇ ಅಚ್ಚರಿ ಎಂದರು.

ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಕೆ.ಮಹಾಲಕ್ಷ್ಮೀ, ಸದಸ್ಯರಾದ ಜಿ.ಆರ್.ಶಿವಕುಮಾರ್, ಬಸವರಾಜು, ಮುಖ್ಯಾಧಿಕಾರಿ ಮಂಜಮ್ಮ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಮುಖಂಡರಾದ ಸಿ.ಆರ್.ಶಂಕರ್‍ಕುಮಾರ್, ಎಚ್.ಡಿ.ಯಲ್ಲಪ್ಪ, ವೇಣುಗೋಪಾಲ್‍ಅರಸ್, ಜಿ.ಪಿ.ವೀರಭದ್ರಯ್ಯ ಇತರರು ಇದ್ದರು.

ಕೆಎಂಎಫ್ ಘಟಕವು ಹಳೇ ಕಟ್ಟಡದ ತೆರಿಗೆಯನ್ನು ಇಂದಿಗೂ ಕಟ್ಟುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಮೂರು ಪಟ್ಟು ದೊಡ್ಡದಾದ ಕಾರ್ಖಾನೆ ಲಕ್ಷಾಂತರ ರೂ. ತೆರಿಗೆ ಪಾವತಿಸಬೇಕಿದೆ. ಇಂತಹ ಸಣ್ಣ ಕೈಗಾರಿಕೆಗಳು ತೆರಿಗೆ ವಂಚಿಸುವ ಕೆಲಸ ಮಾಡುತ್ತವೆ. ಇಂತಹ ಕಡೆ ಅಧಿಕಾರಿಗಳು ಭೇಟಿ ನೀಡಿ ಪ್ರಾಮಾಣಿಕವಾಗಿ ತೆರಿಗೆ ವಸೂಲಿ ಮಾಡಬೇಕು.

-ಜಿ.ಎಸ್.ಮಂಜುನಾಥ್, ಸಾಮಾಜಿಕ ಹೋರಾಟಗಾರ

ಅನುಭವಿಗಳ ಸಲಹೆ ಒಪ್ಪುತ್ತೇನೆ :

ಸಾರ್ವಜನಿಕರ ಎಲ್ಲಾ ಸಲಹೆ ಆಲಿಸಿದ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅವರು, ಪಟ್ಟಣದ ಸುತ್ತ ಎಲ್ಲಿಯಾದರೂ ಸ್ಮಶಾನಕ್ಕೆ ಸ್ಥಳ ನೀಡಲು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ. ಈ ಜೊತೆಗೆ ವಿದ್ಯುತ್ ಚಿತಾಗಾರ ನಿರ್ಮಿಸಲು ಸ್ಥಳ ಹುಡುಕಾಟ ನಡೆದಿದೆ. ಅಭಿವೃದ್ಧಿ ವಿಚಾರದಲ್ಲಿ ಅನುಭವಿಗಳ ಸಲಹೆ ಸೂಚನೆ ಒಪ್ಪುವಂತಹದ್ದಾಗಿದೆ. ಸರ್ಕಾರದಿಂದ ಬಂದ 13 ಕೋಟಿ ರೂ. ಗಳನ್ನು ಸದ್ಬಳಕೆ ಮಾಡಿ ಇಡೀ ಪಟ್ಟಣವನ್ನು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap