ಶಿರಾ
ಹೇಮಾವತಿ ನೀರಿಗಾಗಿ ತಾಲ್ಲೂಕಿನ ಗಡಿಭಾಗದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ರೈತರು ಮಾಡಬೇಕಿದೆ ಎಂದು ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಹೇಳಿದರು.
ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ 8 ದಿನದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ದುರ್ಗಮ್ಮ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಗೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನ 362 ಗ್ರಾಮಗಳ ಪ್ರತಿಯೊಂದು ಮನೆಯಿಂದ ಒಬ್ಬರು ಹೋರಾಟಕ್ಕೆ ಬಂದರೆ ಹೋರಾಟ ಯಶಸ್ವಿಯಾಗುವುದು ಎಂದರು.
ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಮಾತನಾಡಿ, ತಾಲ್ಲೂಕಿನ ಜನರಲ್ಲಿ ಹೋರಾಟದ ಮನೋಭಾವ ಇಲ್ಲದ ಕಾರಣಕ್ಕೆ ನಮಗೆ ನೀರು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನದ ಪರಿಚ್ಛೇದದ 21 ರ ಪ್ರಕಾರ ನೀರು ಪಡೆಯುವುದು ನಮ್ಮ ಹಕ್ಕು. ರಾಷ್ಟ್ರೀಯ ಜಲನೀತಿ ಪ್ರಕಾರ ನೀರು ಎಲ್ಲರಿಗೂ ಲಭಿಸಬೇಕು. ಅವಶ್ಯಕತೆ ಇದ್ದಾಗ ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ತೆಗೆದುಕೊಂಡು ಹೋಗಬಹುದು. ಸಂವಿಧಾನದ 8 ಪರಿಚ್ಛೇದದನ್ವಯ ನೀರು ಪ್ರತಿಯೊಬ್ಬರ ಜನ್ಮ ಸಿದ್ದ ಹಕ್ಕು ಎಂದರು.
ಕರ್ನಾಟಕವು ಕೂಡ ಒಂದು ಜಲ ನೀತಿ ರೂಪಿಸಿದೆ. ಅದರ 4 (5) ಪ್ರಕಾರ ಕುಡಿಯುವ ನೀರಿಗೆ ಯಾವುದೇ ಅಡೆತಡೆಗಳು ಇರಬಾರದು. ನೀರಿನ ವಿಚಾರದಲ್ಲಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸವಾಗಬೇಕಾಗಿದೆ. ಹೋರಾಟಕ್ಕೆ ಜನ ಬರದಿದ್ದರೆ ಯಾವುದೇ ಪ್ರಯೋಜನವಿಲ್ಲ ಎಂದರು.
ಧರಣಿಯ ಸ್ಥಳದಿಂದ ಕಾಲ್ನಡಿಗೆ ಜಾಥಾವನ್ನು ಪ್ರಾರಂಭಿಸಿ, ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ದುರ್ಗಮ್ಮ ದೇವಸ್ಥಾನವನ್ನು ತಲುಪಿತು. ಮದಲೂರು ಕೆರೆ ನೀರು ಹೋರಾಟ ಸಮಿತಿಯ ಅಧ್ಯಕ್ಷ ಆರ್.ಜಯರಾಮಯ್ಯ, ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಬಿ.ರಮೇಶ್, ಆರ್.ವಿ.ಪುಟ್ಟಕಾಮಣ್ಣ, ರೈತ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ, ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಪರಮಶಿವಯ್ಯ, ರಂಗನಾಥಪ್ಪ, ತಾರೇಗೌಡ, ಬುರಾದ್ದೀನ್, ಮಾಲಿ ಪ್ರಕಾಶ್, ಟೈರ್ ರಂಗನಾಥ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ