ಸರ್ಕಾರಿ ನೌಕರರಂತೆ ರೈತರು ಒಗ್ಗಟ್ಟಾಗಬೇಕು

ಹುಳಿಯಾರು

       ಸರ್ಕಾರಿ ನೌಕರರಂತೆ ರೈತರೂ ಸಹ ಒಗ್ಗಟ್ಟಾಗಬೇಕಿದೆ ಎಂದು ರಾಜ್ಯ ರೈತ ಸಂಬಂಧ (ಹೊಸಹಳ್ಳಿ ಚಂದ್ರಣ್ಣ ಬಣ) ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದರು.

       ಹುಳಿಯಾರು ಸಮೀಪದ ಕಂದಿಕೆರೆಯಲ್ಲಿ ರಾಜ್ಯ ರೈತ ಸಂಬಂಧ (ಹೊಸಹಳ್ಳಿ ಚಂದ್ರಣ್ಣ ಬಣ) ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

       ಸರ್ಕಾರಿ ನೌಕರರು ಒಗ್ಗಟ್ಟಿರುವ ಕಾರಣದಿಂದ ಸರ್ಕಾರ 6 ನೇ ವೇತನ ಆಯೋಗದ ವರದಿ ಜಾರಿ ಮಾಡಿ ವೇತನ ಪರಿಷ್ಕರಿಸಿದೆ. ಕಾಲಕಾಲಕ್ಕೆ ತುಟ್ಟಿಭತ್ಯೆ ನೀಡುತ್ತಿದೆ. ಆರೋಗ್ಯ, ಮನೆ, ನೀರು ಹೀಗೆ ಉಚಿತ ಕೊಡುಗೆಗಳನ್ನು ನೀಡುತ್ತಿದೆ. ಆದರೆ ರೈತರು ಒಗ್ಗಟ್ಟಾಗಿಲ್ಲದ ಕಾರಣ ಪೆಟ್ರೋಲ್ ಬೆಲೆ 80 ರೂ., ಗ್ಯಾಸ್ ಬೆಲೆ 1000 ರೂ. ದಾಟಿದ್ದರೂ ರೈತನ ಕೊಬ್ಬರಿ, ಕಬ್ಬು, ಶೇಂಗಾ, ಈರುಳ್ಳಿ ರೇಟ್ ಮಾತ್ರ ತಾತನ ಕಾಲದ ರೇಟ್‍ನಷ್ಟೆ ಇದೆ. ಹಾಗಾಗಿಯೇ ವ್ಯವಸಾಯ ಮನೆಮಂದಿಯೆಲ್ಲ ಸಾಯ ಎನ್ನುವಂತೆ ರೈತ ಆತ್ಮಹತ್ಯೆಯ ದಾರಿ ತುಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.

         ರೈತರು ತಮ್ಮ ಬದುಕಿಗಾಗಿ, ತಮ್ಮ ಪಾಲಿನ ಹಕ್ಕಿಗಾಗಿ ಒಗ್ಗಟ್ಟಾಗ ಬೇಕಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಸಮಗ್ರ ನೀರಾವರಿ ವ್ಯವಸ್ಥೆ, ನೀರಾ ಇಳಿಸಲು ಎಲ್ಲಾ ರೈತರಿಗೂ ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಾಗಿ ಉಗ್ರ ಹೋರಾಟಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಹಳ್ಳಿಹಳ್ಳಿಗಳಲ್ಲೂ ರೈತ ಸಂಘ ಸ್ಥಾಪಿಸಿ, ಪ್ರತಿಯೊಬ್ಬ ರೈತರೂ ಹಸಿರು ಶಾಲು ಹಾಕುವ ಅಭ್ಯಾಸ ರೂಢಿಸಿಕೊಂಡು, ಭ್ರಷ್ಟ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ನಮ್ಮೂರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಬರೆಸಿ ಗ್ರಾಮದಲ್ಲಿ ಕಟ್ಟಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಹೇಳಿದರು.

          ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತಿಯೊಂದು ಗ್ರಾಮಗಳ ಕೆರೆ, ಕಟ್ಟೆಗಳನ್ನು ತುಂಬಿಸುವ ಮೂಲಕ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕು. ಬರಗಾಲ ತಡೆಗೆ ರಾಜ್ಯದಾದ್ಯಂತ ನೀರಾವರಿ ವ್ಯವಸ್ಥೆ ಕಲ್ಪಿಸಲು ಸರ್ಕಾರಗಳು ಮುಂದಾಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ನದಿ ಜೋಡಣೆಯಂತಹ ಕಾರ್ಯಗಳನ್ನು ಮಾಡಬೇಕು. ಸಾಲಮನ್ನಾ ಮಾಡುವುದು ಶಾಶ್ವತ ಪರಿಹಾರವಲ್ಲ. ರೈತರಿಗೆ ವಿದ್ಯುತ್ ನೀಡುವುದರ ಜೊತೆಗೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

        ಜಿಲ್ಲೆಯ ತೆಂಗು ಬೆಳೆಯುವ ತಾಲ್ಲೂಕುಗಳಿಗೆ ನೀರಾ ಸೇರಿದಂತೆ ಇತರ ತೆಂಗಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತೆಂಗು ಉತ್ಪನ್ನಗಳನ್ನು ತಯಾರಿಸಲು ತೆಂಗು ಬೆಳೆಗಾರರಿಗೆ ಸಾಲ ಸೌಲಭ್ಯ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಈಶ್ವರಯ್ಯ, ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಕರಿಯಪ್ಪ, ಹೂವಿನ ತಿಮ್ಮಯ್ಯ, ಎಸ್.ಸಿ.ಬೀರಲಿಂಗಯ್ಯ, ಬಸವರಾಜು, ಜಯಮ್ಮ, ಶಿವಮ್ಮ, ಪುಷ್ಪಾಬಾಯಿ, ಗಂಗಮ್ಮ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap