ಸರ್ಕಾರದ ವಿರುದ್ದ ರೈತ ಸಂಘ ಪ್ರತಿಭಟನೆ

ಚಿತ್ರದುರ್ಗ:

      ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನ ಮಾಡದಿರುವುದು ಹಾಗೂ ನವದೆಹಲಿಯಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿ.ಸಿ.ಗೆ ಮನವಿ ಸಲ್ಲಿಸಿದರು.

      ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾನಿರತ ರೈತರು ಸಾಲ ಮನ್ನ ಮಾಡದ ಮುಖ್ಯಮಂತ್ರಿ, ನವದೆಹಲಿಯಲ್ಲಿ ರೈತರ ಮೇಲೆ ಲಾಠಿಚಾರ್ಜ್ ಮಾಡಿರುವ ಪೊಲೀಸರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

       ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತ ತನ್ನ ನ್ಯಾಯಯುತವಾದ ಬೇಡಿಕೆಗಳನ್ನು ಕೇಳಿದರೆ ಜಲಪಿರಂಗಿ, ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ಮಾಡುವುದು ಯಾವ ಮೌಲ್ಯಧಾರಿತ ಸರ್ಕಾರ. ವಿನಾ ಕಾರಣ ಕೇಸು ದಾಖಲಿಸಿ ರೈತರನ್ನು ಜೈಲಿಗೆ ಕಳಿಸುವುದು ಆಘಾತಕಾರಿ ಸಂಗತಿ.

      ನವದೆಹಲಿ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

      ರೈತರ ಮತಗಳನ್ನು ಕಬಳಿಸುವುದಕ್ಕಾಗಿ ಹೆಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ರೈತರ ಸಂಪೂರ್ಣ ಸಾಲ ಮನ್ನ ಮಾಡುವುದಾಗಿ ಡೋಂಗಿತನದ ಹೇಳಿಕೆ ನೀಡಿ ಈಗ ಸುಮ್ಮನಾಗಿದ್ದಾರೆ. ಹದಿನೆಂಟು ಪ್ರಣಾಳಿಕೆಗಳಲ್ಲಿ ಇದುವರೆವಿಗೂ ಯಾವುದನ್ನು ಈಡೇರಿಸಿಲ್ಲ. ಇದೇ ಪ್ರವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದರು.

       ಡಾ.ಜಿ.ಪರಮೇಶ್ವರ್‍ರವರನ್ನು ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಅದೊಂದನ್ನು ಮಾತ್ರ ಈಡೇರಿಸಿದ್ದಾರೆ. ಉಳಿದ ಯಾವ ಬೇಡಿಕೆಗಳನ್ನು ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ನೆರವೇರಿಸಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಬಳಿ ಬರಲೇಬೇಕು ಆಗ ತಕ್ಕ ಉತ್ತರ ಕೊಡುತ್ತೇವೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

       ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗಾಗಿ ರೈತರ ಸಂಪೂರ್ಣ ಸಾಲ ಮನ್ನ ಮಾಡುವುದಾಗಿ ಹೇಳಿದ್ದ ಹೆಚ್.ಡಿ.ಕುಮಾರಸ್ವಾಮಿ ಋಣಮುಕ್ತ ಪ್ರಮಾಣ ಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುತ್ತೇನೆಂದು ಹೇಳಿ ಈಗ ಮಾತು ಬದಲಾಯಿಸಿ ರೈತರನ್ನು ಸಂಕಷ್ಟಕ್ಕೆ ದೂಡಿ ಸಾಲ ಮನ್ನ ಮಾಡದೆ ಸುಳ್ಳು ಸಬೂಬುಗಳನ್ನು ಹೇಳಿಕೊಂಡು ವಿನಾ ಕಾರಣ ಕಾಲಹರಣ ಮಾಡುತ್ತಿದ್ದಾರೆ. ಸಾಲದ ಬಾದೆ ಹಾಗೂ ಬೆಳೆನಷ್ಟದಿಂದ ರಾಜ್ಯದಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಲೂ ಮಾಡಿಕೊಳ್ಳುತ್ತಿದ್ದಾರೆ.

       ಯಾವುದೇ ಕಾರಣ ಹೇಳದೆ ಸಾಲ ಮನ್ನ ಮಾಡಬೇಕು. ಇಲ್ಲವಾದಲ್ಲಿ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ, ಶಾಸಕರುಗಳಿಗೆ ಮುಲಾಜಿಲ್ಲದೆ ನಡುರಸ್ತೆಯಲ್ಲಿ ಘೇರಾವ್ ಮಾಡಲಾಗುವುದು ಎಂದು ಬೆದರಿಕೆ ಹೊಡ್ಡಿದರು.

       ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡುತ್ತ ಸಾಲ ಮಾಡಿದ ರೈತರು ಕಳೆದ ವರ್ಷ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ 12 ಸಾವಿರದ 158 ಅರ್ಜಿಗಳನ್ನು ನೀಡಿದ್ದರು. ಅದೇ ರೀತಿ ರಾಜ್ಯಾದ್ಯಂತ ರೈತರು 6 ಲಕ್ಷದ 50 ಸಾವಿರ ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದುವರೆವಿಗೂ ಯಾವುದೇ ಅರ್ಜಿಗಳನ್ನು ಪರಿಶೀಲನೆ ಮಾಡಿ ಸರ್ಕಾರ ರೈತರ ನೆರವಿಗೆ ಮುಂದಾಗಿಲ್ಲ. ಬದಲಾಗಿ ಪಹಣಿ, ಉಳಿತಾಯ ಖಾತೆ, ಆಧಾರ್ ಕಾರ್ಡ್, ಪಾನ್‍ಕಾರ್ಡ್, ರೇಷನ್ ಕಾರ್ಡ್, ಡಿ.ಸಿ.ಸಿ.ಬ್ಯಾಂಕ್ ಪಾಸ್ ಪುಸ್ತಕ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲದ ಮಾಹಿತಿಯನ್ನು ಕೇಳಿರುವುದು ಯಾವ ಪುರಷಾರ್ಥಕ್ಕಾಗಿ ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದರು.

      ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ ಜಯಂತಿಯಂದು ತಮ್ಮ ಹಲವಾರು ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಉತ್ತರಪ್ರದೇಶದಿಂದ ನವದೆಹಲಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ರೈತರನ್ನು ತಡೆದ ಪೊಲೀಸರು ಮನಸೋಇಚ್ಚೆ ಲಾಠಿಯಿಂದ ಥಳಿಸಿದ್ದಾರೆ. ಅಸಹಾಕಾರ ಚಳುವಳಿಯ ನೇತಾರ ಗಾಂಧಿಜಯಂತಿಯಂದು ರೈತರನ್ನು ಹಿಂಸೆಗೆ ಗುರಿಪಡಿಸಿರುವ ಪೊಲೀಸರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

       ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಮಲ್ಲಿಕಾರ್ಜುನ್, ಕಾರ್ಯದರ್ಶಿ ಬೈಲಪ್ಪ, ಹೆಚ್.ಸಿ.ರಾಜು, ಎನ್.ಕೆ.ರಾಜಶೇಖರಪ್ಪ, ಶ್ರೀಕಂಠಮೂರ್ತಿ, ತಿಪ್ಪೇಸ್ವಾಮಿ, ಬಿ.ಸಿ.ಮಂಜುನಾಥ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ