ಹುಳಿಯಾರು:
ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹದಮಳೆಯಾಗುತ್ತಿದ್ದು, ರಸಗೊಬ್ಬರವನ್ನು ರೈತರು ಮುಗಿಬಿದು ಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಗೊಬ್ಬರದ ಅಂಗಡಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ರಾಗಿ ಬೆಳೆಗೆ ಮೇಲುಗೊಬ್ಬರವಾಗಿ ಯೂರಿಯಾ ಕೊಡಬೇಕಾಗಿರುವ ಅನಿವಾರ್ಯತೆಯಿದೆ. ಆದರೆ ಮಳೆಯಿಲ್ಲದೆ ಗೊಬ್ಬರಕ್ಕೆ ಬೇಡಿಕೆಯಿಲ್ಲದ ಹಿನ್ನಲೆಯಲ್ಲಿ ಅಂಗಡಿಯವರಾರೂ ಸಹ ದಾಸ್ತಾನು ಮಾಡದೆ ರೈತರು ಒಮ್ಮೆಗೆ ಗೊಬ್ಬರಕ್ಕೆ ಬಂದಿದ್ದರಿಂದ ಪರಿಪಾಟಲು ಪಡುವಂತಾಯಿತು.
ಗುರುವಾರ ಬೆಳಗ್ಗೆ ಬಂದ ಯೂರಿಯಾ ಗೊಬ್ಬರ ವಿತರಿಸಲು ಮುಂದಾದ ಪಟ್ಟಣದ ಮುಸ್ತಫ ಟ್ರೇಡರ್ಸ್ ಮುಂದೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಬಂದ ನೂರಾರು ರೈತರು ಜಮಾಯಿಸಿದ್ದರು ಎಲ್ಲಿ ಗೊಬ್ಬರ ಸಿಗುವುದಿಲ್ಲವೋ ಎಂಬ ಆತಂಕದಿಂದ ರೈತರ ನೂಕಾಟ ಆರಂಭವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥತಿ ತಿಳಿಗೊಳಿಸಿದರು ಸಹ ಜನಜಂಗುಳಿಯಿಂದಾಗಿ ಗೊಬ್ಬರ ವಿತರಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಂಗಡಿ ಬಾಗಿಲು ಹಾಕಿದ್ದರಿಂದ ರೈತರ ಅಂಗಡಿ ಮುಂದೆ ಕೂತು ಗೊಬ್ಬರ ನೀಡುವಂತೆ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 6 ಗಂಟೆಯಿಂದಲೇ ಗೊಬ್ಬರಕ್ಕಾಗಿ ಕಾಯುತ್ತಿದ್ದು ಇದೀಗ ಪೊಲೀಸರು ಹೀಗೆ ಬಾಗಿಲು ಹಾಕಿಸುವುದು ಸರಿಯಲ್ಲ. ಗೊಬ್ಬರ ವಿತರಿಸದೆ ಇದ್ದಲ್ಲಿ ಯಾವುದೇ ಕಾರಣಕ್ಕೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ . ಅಂತಿಮವಾಗಿ ಗೊಬ್ಬರವನ್ನು ಗೋಡನ್‍ಗೆ ದಾಸ್ತಾನು ಮಾಡಲು ಬಿಡದೆ ಸ್ಥಳದಲ್ಲೇ ಖರೀದಿ ಮಾಡಲು ರೈತರು ಮುಗಿ ಬಿದ್ದಿದ್ದಾರೆ.ಇರುವ ಗೊಬ್ಬರದ ದಾಸ್ತಾನಿಗಿಂತ ದುಪ್ಪಟ್ಟು ಜನ ಇದುದ್ದರಿಂದ ಸರದಿ ಸಾಲಿನಲ್ಲಿ ಪೊಲೀಸರ ಸಮ್ಮುಖದಲ್ಲಿ ಒಬ್ಬರಿಗೆ ಒಂದು ಚೀಲದಂತೆ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ