ಬೆಂಗಳೂರು
ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಕರ್ನಾಟಕ ಹಾಲು ಒಕ್ಕೂಟದಲ್ಲಿ ಪ್ರತಿದಿನ 75 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ 10 ದಿನದಲ್ಲಿ ಸಬ್ಸಿಡಿ ಹಣ ನೀಡುವ ಬಗ್ಗೆ ಪ್ರಯತ್ತಿಸುತ್ತೇನೆ ಎಂದು ಕರ್ನಾಟಕ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಅರಂಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಹಾಲು ಉತ್ಪನ್ನಗಳನ್ನು ರಾಜ್ಯದ ಹೊರಗೆ ಮಾರಲು ಪ್ರಯತ್ನ ಮಾಡಲಾಗುವುದು. ಈ ಮೂಲಕ ಕೆಎಂಎಫ್ ಲಾಭವನ್ನು 300 ಕೋಟಿಗೆ ಏರಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಗುಜರಾತ್ ನ ಅಮೂಲ್ ಮೊದಲ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಕೆಎಂಎಫ್ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಪಣತೊಡುತ್ತೇನೆ. ಒಕ್ಕೂಟದಲ್ಲಿನ ಅಕ್ರಮಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಸೆಪ್ಟೆಂಬರ್ 2ರ ಬಳಿಕ ಅಧಿಕಾರ ಸ್ವೀಕರಿಸುವುದಾಗಿ ಜಾರಕಿಹೊಳಿ ತಿಳಿಸಿದರು.
ಅಧ್ಯಕ್ಷರಾಗಲು ಕೆಎಂಎಫ್ ನಿರ್ದೇಶಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಲಾಬಿ ಮಾಡಿದ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ನಾನು ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ನಿರ್ದೇಶಕರಲ್ಲಿ ನಾಲ್ವರು ಬೆಳಗಾವಿಯರಾಗಿದ್ದು ನನ್ನ ಗೆಲುವಿಗೆ ಸಹಕಾರವಾಯಿತು ಎಂದರು.
ಮುಖ್ಯಮಂತ್ರಿ ಅಭಿನಂದನೆ;
ಕೆ.ಎಂ.ಎಫ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕೆ.ಎಂ.ಎಫ್, ರೈತ ಪರವಾದ ಯೋಜನೆಗಳನ್ನು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂಬ ಆಶಯವನ್ನು ನಂಬಿರುವುದಾಗಿ ಅವರು ತಿಳಿಸಿದರು.
ಕರ್ನಾಟಕ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಅರಂಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆಯೇ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಎಚ್ಡಿ ರೇವಣ್ಣ, ಒಕ್ಕೂಟಕ್ಕೆ ಪತ್ರ ಬರೆಯುವ ಮೂಲಕ ಚುನಾವಣೆಯಿಂದ ಹಿಂದೆ ಸರಿದ ಹಿನ್ನೆಲೆ ಬಾಲಚಂದ್ರ ಜಾರಕಿಹೊಳಿ ಒಕ್ಕೂಟದ 15ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
