ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಬೆಂಗಳೂರು

     ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿದ್ದು, ಓರ್ವ ಮಗು ಮೃತಪಟ್ಟರೆ, ಮತ್ತೊಂದು ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಧಾರುಣ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

      ತಲಘಟ್ಟಪುರ ಅಂಜನಾಪುರದ ಶ್ರೀನಿವಾಸ್ ಮೂರ್ತಿ (40) ಕುಡಿದ ಅಮಲಿನಲ್ಲಿ ಮುಂಭಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಮಧ್ಯರಾತ್ರಿ 2ರ ಸುಮಾರಿನಲ್ಲಿ 1 ವರ್ಷ 8 ತಿಂಗಳ ಮಗು ಸಾಯಿಚರಣ್, 5 ವರ್ಷದ ಮಗು ಚೇತನ್ ಸಾಯಿ ಮೇಲೆ ಪೆಟ್ರೋಲ್ ಸುರಿದು, ತನ್ನ ಮೇಲೂ ಎರಚಿಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ.

       ಮೂವರು ರಕ್ಷಣೆಗಾಗಿ ಕೂಗುತ್ತಾ ನರಳಾಡುತ್ತಿರುವುದನ್ನು ಕೇಳಿದ ಅಕ್ಕ-ಪಕ್ಕದ ಮನೆಯವರು ಬಾಗಿಲು ಮುರಿದು ಒಳನುಗ್ಗಿ ಬೆಂಕಿ ನಂದಿಸುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಸಾಯಿ ಚರಣ್ ಮೃತಪಟ್ಟಿದೆ.

        ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೇ. 80 ರಷ್ಟು ಸುಟ್ಟಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಚೇತನ್ ಸ್ಥಾಯಿ ಬದುಕುಳಿಯುವುದು ಕಷ್ಟಕರವಾಗಿದೆ ಶೇ. 30 ರಷ್ಟು ಸುಟ್ಟಗಾಯಗಳಾಗಿರುವ ಶ್ರೀನಿವಾಸ್ ಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

        ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಮೂರ್ತಿ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೌಟುಂಬಿಕ ಕಾರಣಗಳು ಹಾಗೂ ಕುಡಿತದ ಚಟದ ಹಿನ್ನೆಲೆಯಲ್ಲಿ ಪತ್ನಿ ಆತನಿಂದ ದೂರವಾಗಿ, ತ್ಯಾಗರಾಜನಗರದ ತವರಿನ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೂ ಆಗಾಗ ಪತ್ನಿಯ ಮನೆಗೆ ಹೋಗಿ ಜೊತೆಯಲ್ಲಿ ಬರುವಂತೆ ಪೀಡಿಸುತ್ತಿದ್ದ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link