ವಾರದಲ್ಲಿ ಕೋವಿಡ್ ಸಂಚಾರಿ ಫೀವರ್ ಕ್ಲಿನಿಕ್ ಆರಂಭ : ಜಿಲ್ಲಾಧಿಕಾರಿ

ಹಾವೇರಿ
 
   ಮುಂಬೈನಿಂದ ಸವಣೂರಿಗೆ ಬಂದಿದ್ದ ಮೂವರ ಪೈಕಿ ಓರ್ವನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯ ಮೊದಲ ಕೋವಿಡ್ ಪ್ರಕರಣವಾಗಿದೆ. ಉಳಿದ ಇಬ್ಬರ ವ್ಯಕ್ತಿಗಳ ಲ್ಯಾಬ್ ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿರುವುದಾಗಿ  ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
    ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ ಸವಣೂರ ಪಟ್ಟಣದ 32 ವರ್ಷದ P-639 ಪುರುಷನಿಗೆ ಕರೋನಾ ದೃಢಪಟ್ಟಿದೆ.  ಸೋಂಕು ದೃಢಪಟ್ಟ ವ್ಯಕ್ತಿಯ  ಸಹೋದರ(40 ವರ್ಷ) ಹಾಗೂ ಸಹೋದರನ ಮಗ(19 ವರ್ಷ)ನ ಲ್ಯಾಬ್ ವರದಿಯ ನಿರೀಕ್ಷೆಯಲ್ಲಿದ್ದು, ಈ ರಾತ್ರಿ ವರದಿ ಬರಬಹುದೆಂದು ತಿಳಿಸಿದರು.
ಕೋವಿಡ್ ಸೋಂಕು ಖಚಿತಗೊಂಡ P -639 ವ್ಯಕ್ತಿಯ ಸಹೋದರ 40 ವರ್ಷದ ವ್ಯಕ್ತಿಯ ಮೊದಲ ಲ್ಯಾಬ್ ವರದಿ ಪಾಸಿಟಿವ್ ಬಂದಿದ್ದರೂ ನಿಯಮಾನುಸಾರ ಖಚಿತತೆಗಾಗಿ ಮತ್ತೊಮ್ಮೆ  ಗಂಟಲು ದ್ರವ್ಯವನ್ನು ಸಂಗ್ರಹಿಸಿ ಮರು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
    P -639ರ ಸೋಂಕಿತ ವ್ಯಕ್ತಿ ಹಾಗೂ ಅವನ ಜೊತೆ ಅವರ ಅಣ್ಣ ಹಾಗೂ ಅಣ್ಣನ ಮಗ ನವಿಮುಂಬೈ ಪ್ರದೇಶದಲ್ಲಿ ಗೌಂಡಿ ವೃತ್ತಿಯಲ್ಲಿ ತೊಡಗಿದ್ದನು ಎನ್ನಲಾಗಿದೆ. ಮುಂಬೈ ಮಹಾರಾಷ್ಟ್ರದಿಂದ ಲಾರಿಯ ಮೂಲಕ ಪ್ರಯಾಣ ಬೆಳೆಸಿ ಎಪ್ರಿಲ್ 28ರ ರಾತ್ರಿ 11 ಗಂಟೆಗೆ ಸವಣೂರಿಗೆ ಬಂದು ನೇರವಾಗಿ ಮನೆಗೆ ತೆರಳಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಇವರನ್ನು ಆಸ್ಪತ್ರೆಗೆ ಕರೆತಂದು ಸ್ವ್ಯಾಬ್ ಟೆಸ್ಟ್‍ಗೆ ಕಳುಹಿಸಲಾಗಿತ್ತು. ಮೇ 3 ರಂದು ರಾತ್ರಿ ಓರ್ವ ವ್ಯಕ್ತಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರ ಸಂಪರ್ಕ ವಿವರ ಹಾಗೂ ಇವರನ್ನು ಕರೆತಂಡ ಲಾರಿ ಚಾಲಕನ ಸಂಪರ್ಕ ವಿವರಗಳನ್ನು ಪತ್ತೆಹಚ್ಚುವ ಕಾರ್ಯ  ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.
    ಸೋಂಕಿತನ ಕುಟುಂಬ ಹಾಗೂ ಅವನ ಸ್ನೇಹಿತರು, ಅವನಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡ ಸೇರಿ 21 ಜನರನ್ನು ಪ್ರಾಥಮಿಕ ಸಂಪರ್ಕ ಹೊಂದಿದವರೆಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಇಡಲಾಗಿದೆ. ನಿತ್ಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಹಾಗೂ ಸೋಂಕಿತನ ಜೊತೆ ದ್ವಿತೀಯ ಹಂತದ ಸಂಪರ್ಕ ಹೊಂದಿದ 14 ಜನರನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ಸಹ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
     ಸೋಂಕಿತನು ವಾಸಿಸುವ ಮನೆ ಸುತ್ತಲಿನ ಸವಣೂರಿನ ಎರಡು ಬಡಾವಣೆಗಳನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಿ ಸೀಲ್‍ಡೌಲ್ ಮಾಡಲಾಗಿದೆ. ಈ ಬಡಾವಣೆಯಲ್ಲಿ 394 ವಾಸದ ಮನೆಗಳಿದ್ದು 1789 ಜನಸಂಖ್ಯೆ ಹೊಂದಿದೆ. ಈ ಪ್ರದೇಶದಲ್ಲಿ ಒಳಬರುವ ಹಾಗೂ ಹೊರಹೋಗುವ ಒಂದು ಮಾರ್ಗವನ್ನು ತೆರೆಯಲಾಗಿದೆ. ಸೋಂಕಿತ ಪ್ರದೇಶದ ಐದು ಕಿ.ಮೀಟರ್ ವ್ಯಾಪ್ತಿಯನ್ನು  ಬಫರ್ ಜೋನ್ ಎಂದು ಗುರುತಿಸಿ ಮಂತ್ರೋಡಿ, ಹುರುಳಿಕೊಪ್ಪಿ, ಚಿಲ್ಲೂರಬಡ್ನಿ, ತ್ಯಾಗವಳ್ಳಿ ಆವರಣದಲ್ಲಿ ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ನಿರ್ಭಂಧಿಸಲಾಗಿದೆ.
 
     ಕಂಟೈನ್‍ಮೆಂಟ್ ಜೋನ್ ಇನ್ಸಡೆಂಟಲ್ ಕಮಾಂಡರ್ ಆಗಿ ಸವಣೂರ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಇವರ ಆದೇಶದ ಹೊರತು ಬೇರೆಯವರು ಈ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ ಹಾಗೂ ಹೊರ ಹೋಗುವಂತಿಲ್ಲ. ಇಲ್ಲಿಯ ನಿವಾಸಿಗಳಿಗೆ ದಿನನಿತ್ಯದ ಎಲ್ಲ ವಸ್ತುಗಳನ್ನು ಹಾಗೂ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
 
     ಸವಣೂರ ಉಪವಿಭಾಗಾಧಿಕಾರಿ ಹಾಗೂ ಡಿ.ಎಸ್.ಪಿ. ಇವರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕೋವಿಡ್ ವಿಪತ್ತು ನಿಯಂತ್ರಣ ತಂಡದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಪರಿಸ್ಥಿತಿಯ ನಿಯಂತ್ರಣದ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು. ಕಂಟೋನ್‍ಮೆಂಟ್ ಪ್ರದೇಶದಲ್ಲಿ ಮನೆ ಮನೆಯ ಆರೋಗ್ಯ ತಪಾಸಣೆ, ಅಗತ್ಯ ವಸ್ತುಗಳ ಮನೆ ಮನೆಗೆ ತಲುಪಿಸುವ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಂಚಾರಿ ಫೀವರ್ ಕ್ಲಿನಿಕ್ :
 
     ಮೂರನೇ ಹಂತದ ಲಾಕ್‍ಡೌನ್ ವಿಸ್ತರಣೆಯಾಗಿದ್ದು, ಕಂಟೋನ್‍ಮೆಂಟ್ ಜೋನ್ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ವಿನಾಯಿತಿ ನೀಡಿದ ಚಟುವಟಿಕೆಗಳು ಮುಂದುವರೆಯಲಿವೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ವಲಸೆ ಕಾರ್ಮಿಕರನ್ನು ತಪಾಸಣೆಮಾಡಿ ಮುಂಗೈಗೆ  ಹೋಂ ಕ್ವಾರೆಂಟೈನ್ ಸೀಲ್ ಹಾಕಿ ಗೃಹ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾ ವಹಿಸಲಾಗುತ್ತದೆ.
 
      ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆಗೆ, ಜ್ವರ ತಪಾಸಣೆ ಹಾಗೂ ಗಂಟಲು ದ್ರವ್ಯದ ಮಾದರಿ ಸಂಗ್ರಹ ಉದ್ದೇಶಕ್ಕಾಗಿ ಮೊಬೈಲ್ ಫೀವರ್ ಕ್ಲಿನಿಕ್ ಸಿದ್ಧಗೊಳ್ಳುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನ್ನು ಪರಿವರ್ತಿಸಿ ಫೀವರ್ ಕ್ಲಿನಿಕ್‍ಆಗಿ ಬಳಸಲು ತೀರ್ಮಾನಿಸಲಾಗಿದೆ. ಈ ವಾರದಲ್ಲಿ  ಸಂಚಾರಿ ಫೀವರ್ ಕ್ಲಿನಿಕ್ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಕ್ವಾರೆಂಟೈನ್ ಕೇಂದ್ರ:
 
       ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಒಂಭತ್ತು ಹಾಸ್ಟೇಲ್ ಹಾಗೂ ವಸತಿ ನಿಲಯಗಳನ್ನು ಸಾಂಸ್ಥಿಕ ಕ್ವಾರೆಂಟೈನ್‍ಗಳಾಗಿ ಪರಿವರ್ತಿಸಲಾಗಿದೆ.  ರಾಣೇಬೆನ್ನೂರು, ಹಿರೇಕೆರೂರು ಹಾಗೂ ಶಿಗ್ಗಾಂವ ತಾಲೂಕಾ ಆಸ್ಪತ್ರೆಗಳನ್ನು ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‍ಗಳನ್ನಾಗಿ ಗುರುತಿಸಲಾಗಿದೆ. ಪ್ರತಿ ತಾಲೂಕಾ ಕೇಂದ್ರದಲ್ಲಿ ಒಂದೊಂದು ಫೀವರ್ ಕ್ಲಿನಿಕ್ ಸ್ಥಾಪಿಸಲಾಗಿದೆ.
 
      ಜಿಲ್ಲೆಯ ಏಳು ತಾಲೂಕುಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ಗಂಟಲು ದ್ರವ್ಯ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.  ಹಾವೇರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಎಂದು ನಿಗಧಿಪಡಿಸಲಾಗಿದೆ. ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜನ್ನು ಹೊರ ರೋಗಿಗಳ ಚಿಕಿತ್ಸೆಗೆ ನಿಗಧಿಪಡಿಸಲಾಗಿದೆ ಎಂದರು.
ಕ್ವಾರೆಂಟೈನ್:
 
    ಹೊರ ರಾಜ್ಯದಿಂದ ಬಂದ 754  ಹಾಗೂ ಹೊರ ಜಿಲ್ಲೆಯಿಂದ 286 ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರೆಂಟೈನ್ ಮಾಡಲಾಗಿದೆ ಹಾಗೂ ಹೊರ ರಾಜ್ಯದಿಂದ ಬಂದಂತಹ 3350 ಹಾಗೂ ಹೊರ ಜಿಲ್ಲೆಗಳಿಂದ ಬಂದಂತಹ 25,896 ಸೇರಿದಂತೆ 29,241 ಜನರನ್ನು ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ಈ ಎಲ್ಲರೂ 28 ದಿನಗಳನ್ನು ಪೂರೈಸಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ತಪಾಸಣೆ:
 
      ಜಿಲ್ಲೆಯಲ್ಲಿ  ಮನೆ ಮನೆ ಆರೋಗ್ಯ ತಪಾಸಣೆ ಕಾರ್ಯ ಎಪ್ರಿಲ್ 14 ರಿಂದ ಆರಂಭಗೊಂಡಿದ್ದು ಮೇ 5 ರಂದು ಪೂರ್ಣಗೊಳ್ಳಲಿದೆ. ಈವರೆಗೆ 3,28,159 ಮನೆಗಳಿಗೆ ಭೇಟಿ ನೀಡಿ 15,67,612 ಜನರನ್ನು ಸ್ಕ್ರೀನಿಂಗ್ ಮಾಡಿದ್ದು,  ಈ ಪೈಕಿ 9,831 ಜನರಿಗೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದ್ದಾರೆ, 688 ಜನರ ಸ್ಯಾಂಪಲ್  ಸಂಗ್ರಹಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರ ಗಂಟಲು ದ್ರವ್ಯ ಮಾದರಿಗಳು ನೆಗಟಿವ್ ಬಂದಿದೆ ಎಂದು ತಿಳಿಸಿದರು.
      ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ, ವಾಯವ್ಯ  ರಸ್ತೆ ಸಾರಿಗೆ  ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link