ಶಿಕ್ಷಣದ ಮೂಲಕ ಸಮಾನತೆಗೆ ಶ್ರಮಿಸಿದ ಕೀರ್ತಿ ಡಾ.ಬಾಬು ಜಗಜೀವನರಾಂರಿಗೆ ಸಲ್ಲುತ್ತದೆ : ವಿಶ್ವನಾಥ್

ದಾವಣಗೆರೆ

        ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ದಲಿತರಿಗೆ ಶಿಕ್ಷಣದ ಮೂಲಕ ಸಮಾನತೆಯನ್ನು ಕಂಡುಕೊಳ್ಳಲು ಶ್ರಮಿಸಿದ ಕೀರ್ತಿ ಡಾ.ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಹೆಚ್. ವಿಶ್ವನಾಥ್ ತಿಳಿಸಿದರು.

        ಇಂದು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ “ಡಾ. ಬಾಬು ಜಗಜೀವನರಾಮ್ ಪ್ರಸ್ತುತತೆ” ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದ ದೇಶದಲ್ಲಿ ಸಮಾನತೆ ಮೂಡಿಸಲು ಹಗಲಿರುಳು ದುಡಿದರು. ದಲಿತರಿಗೆ ಅನುಕಂಪದ ಅನುದಾನ ಬೇಡ ಬದಲಿಗೆ ಅವರಿಗೆ ಸಿಗಬೇಕಾದ ಹಕ್ಕಗಳನ್ನು ನೀಡಿ ಎಂದು ನಿರ್ಭೀತವಾಗಿ ಹೇಳುತ್ತಿದ್ದರು. ಆದ್ದರಿಂದ ಡಾ. ಬಾಬು ಜಗಜೀವನರಾಮ್ ಅವರ ಜೀವನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.

           ಡಾ. ಬಾಬು ಜಗಜೀವನರಾಮ್ ಸ್ರ್ತೀ ಸ್ವಾತಂತ್ರ್ಯ, ಉದ್ಯೋಗ ಭದ್ರತೆ, ವಿಚ್ಚೇದನ, ಆಸ್ತಿ ಹಂಚಿಕೆ ಹೀಗೆ ಎಲ್ಲಾ ಸಾಮಾಜಿಕ ಸ್ತರಗಳ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾತಿವ್ಯವಸ್ಥೆಯ ಕರಿ ನೆರಳಿನಿಂದ ಪ್ರಧಾನಿ ಹಾಗೂ ರಾಷ್ಟ್ರಪತಿಯ ಹುದ್ದೆಯಿಂದ ವಂಚಿತರಾದ ಅವರು ವರ್ಣವ್ಯವಸ್ಥೆಯಿಂದ ಭಾರತವನ್ನು ಮುಕ್ತಗೊಳಿಸಲು ಪ್ರಯತ್ನಿಸಿದರು. ಆದ್ದರಿಂದ ಡಾ. ಬಾಬು ಜಗಜೀವನರಾಮ್ ಅವರ ಜೀವನದ ಬಗ್ಗೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

         ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಮಾತನಾಡಿ, ಬಡ ಸಮಾಜದ ಅಭಿವೃದ್ಧಿಗೆ ಡಾ. ಬಾಬು ಜಗಜೀವನರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಆದರ್ಶ, ವಿನಯತೆ, ಸಮಾಜಮುಖಿ ಚಿಂತನೆಗಳು ನಮಗೆ ಮಾದರಿಯಾಗಬೇಕು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಡಾ. ಬಾಬು ಜಗಜೀವನರಾಮ್ ಅವರ ಜೀವನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

       ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಪಿ ಕಣ್ಣನ್ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಕೇವಲ ದಲಿತರ ನಾಯಕರಾಗಿರದೇ ಇಡೀ ಭಾರತಕ್ಕೆ ನಾಯಕರಾಗಿದ್ದರು. ಹಿಂದುಳಿದ ವರ್ಗದವರಲ್ಲಿ ಪ್ರಜ್ಞೆಯನ್ನು ಮೂಡಿಸಿ ಅಸಮಾನತೆ ವಿರುದ್ಧ ಕಿಡಿ ಹೊತ್ತಿಸಿದರು. ಒಬ್ಬ ನಾಯಕನ ಇತಿಹಾಸ ಕೇವಲ ಅವನ ವೈಯಕ್ತಿಕ ಇತಿಹಾಸವಲ್ಲ ಅದೊಂದು ಪಂಗಡದ, ಸಾಮಾಜಿಕ ಸ್ಥಿತಿಯ ಇತಿಹಾಸವಾಗಿದೆ. ಅದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಸಾಕಷ್ಟು ವಿಷಯಗಳು ಬೆಳಕಿಗೆ ಬರುತ್ತವೆ.

       ಬಾಲ್ಯದಿಂದಲೇ ಅಸ್ಪಶ್ಯತೆಯ ನಡುವೆ ಬೆಳೆದ ಡಾ. ಬಾಬು ಜಗಜೀವನರಾಮ್ ಮುಂದೆ ಪ್ರಶ್ನಾತೀತ ಮುಖಂಡರಾಗಿ ಬೆಳೆದರು. ಅಂತಹ ಗುಣಗಳು ವಿದ್ಯಾರ್ಥಿಗಳಲ್ಲಿ ಮೂಡಬೇಕು ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಜೆ.ಕೆ ರಾಜು ಮತ್ತು ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಎಸ್. ಪ್ರದೀಪ್, ಕಾರ್ಯಕ್ರಮದಲ್ಲಿ ಹಾಜರಿದ್ದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap