ಹುಳಿಯಾರು
ರಾಜ್ಯ ಹೆದ್ದಾರಿ ಹುಳಿಯಾರು-ತಿಪಟೂರು ರಸ್ತೆಯ ಹರೇನಹಳ್ಳಿ ಗೇಟ್‍ನಿಂದ ಶೆಟ್ರುಕಟ್ಟೆ ಗೇಟ್ ವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಮತ್ತಿಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಆನಂದಕುಮಾರ್ ಒತ್ತಾಯಿಸಿದ್ದಾರೆ.
ಹುಳಿಯಾರು-ತಿಪಟೂರು ರಸ್ತೆಯು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ಗುಂಡಿ ಬಿದ್ದು ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದ ಪರಿಣಾಮ ಇತ್ತೀಚೆಗೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಯಿತು.
ಹುಳಿಯಾರಿನಿಂದ ಹರೇನಹಳ್ಳಿ ಗೇಟ್‍ವರೆವಿಗೂ, ಶೆಟ್ರುಕಟ್ಟೆ ಗೇಟ್‍ನಿಂದ ಮತ್ತಿಘಟದವರೆವಿಗೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದಾರೆ. ಆದರೆ ಹರೇನಹಳ್ಳಿ ಗೇಟ್‍ನಿಂದ ಶೆಟ್ರುಕಟ್ಟೆ ಗೇಟ್‍ವರೆವಿಗೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯಿಸಿದ್ದಾರೆ.
ಪರಿಣಾಮ ರಸ್ತೆಯ ಗುಂಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುವ ಜೊತೆಗೆ ಗುಂಡಿಯಿಂದ ಹೊರಬರುತ್ತಿರುವ ಜಲ್ಲಿಕಲ್ಲುಗಳು ವಾಹನ ಸವಾರರ ಸುಗಮ ಸಂಚಾರಕ್ಕೆ ತೊಡಕ್ಕುಂಟು ಮಾಡುತ್ತಿವೆ. ಬೈಕ್ ಸವಾರರ ಗುಂಡಿ, ಕಲ್ಲು ತಪ್ಪಿಸಲು ಹೋಗಿ ಬಿದ್ದ ನಿದರ್ಶನಗಳಿವೆ.
ಹಾಗಾಗಿ ಈ ರಸ್ತೆಯ ನಿರ್ವಹಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ತಕ್ಷಣ ಈ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಅವರು ಒತ್ತಾಯಿಸಿದ್ದಾರೆ.