ದಾವಣಗೆರೆ 
ಗುರುತಿನ ಚೀಟಿ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಒಟ್ಟು 380 ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ಗಳ ಅಂತಿಮ ಪಟ್ಟಿಯನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ, ನವದೆಹಲಿಗೆ ಕಳುಹಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಂದು ಅನುಮೋದನೆ ನೀಡಿದರು.
ಪೌರಾಡಳಿತ ನಿರ್ದೇಶನಾಲಯದ ಪತ್ರದಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ನವದೆಹಲಿ ಇವರ ಸಹಯೋಗದೊಂದಿಗೆ ದಾವಣಗೆರೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ವಿಶೇಷ ಮರುಸಮೀಕ್ಷೆ ನಡೆಸಿ ಅಂತಿಮಗೊಳಿಸಿದ್ದು, ಫಲಾನುಭವಿಗಳ ಪಟ್ಟಿ ಅನುಮೋದನೆ ಪಡೆಯುವ ಸಲುವಾಗಿ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸಭೆ ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿಗಳು ಮಾತನಾಡಿ, ಮರುಸಮೀಕ್ಷೆಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ನವದೆಹಲಿಯ ನೋಡೆಲ್ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಪರಿಶೀಲಿಸಿದ ನಂತರ ಒಟ್ಟು 380 ಅರ್ಜಿಗಳ ಪಟ್ಟಿ ತಯಾರಿಸಿ ಅಂತಿಮಗೊಳಿಸಲಾಗಿದೆ. ಈ ಅರ್ಜಿಗಳ ಪಟ್ಟಿಯನ್ನು ಅನುಮೋದಿಸಲು ಯಾರದ್ದಾದರೂ ಆಕ್ಷೇಪಣೆ ಇದ್ದಲ್ಲಿ ತಿಳಿಸುವಂತೆ ಸಭೆಯಲ್ಲಿ ತಿಳಿಸಿದರು.
ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಸಮಿತಿ ಪದಾಧಿಕಾರಿಗಳು, ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳು ಈ ಅರ್ಜಿಗಳ ಪಟ್ಟಿಗೆ ತಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ ಅನುಮೋದಿಸಬಹುದೆಂದರು.ಜಿಲ್ಲಾಧಿಕಾರಿಗಳು ಸಭೆಯಲ್ಲಿ ಈ ಪಟ್ಟಿ ಕುರಿತು ಪರಿಶೀಲನೆ ನಡೆಸಿ ಈ 380 ಅರ್ಜಿಗಳ ಪಟ್ಟಿಗೆ ಅನುಮೋದನೆ ನೀಡಿದರು. ಹಾಗೂ ಈ ಪಟ್ಟಿಯನ್ನು ಆದಷ್ಟು ಬೇಗ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ನವದೆಹಲಿ ಇಲ್ಲಿಗೆ ಕಳುಹಿಸಿಕೊಟ್ಟು, ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಿಗೆ ಸೌಲಭ್ಯ ಶೀಘ್ರದಲ್ಲಿ ಸೌಲಭ್ಯಗಳು ಸಿಗುವಂತೆ ಅನುಸರಣೆ ಕೈಗೊಳ್ಳಬೇಕು. ನಾನೂ ಕೂಡು ಈ ಬಗ್ಗೆ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಈ ಕಚೇರಿಯಿಂದ ಸಲ್ಲಿಸಲಾಗುವ ಎಲ್ಲ ಫಲಾನುಭವಿಗಳ ವಿವರಗಳನ್ನು ನಿಗಮದಲ್ಲಿ ಡಾಟಾ ಎಂಟ್ರಿ ಮಾಡಲಾಗುವುದು. ಹಾಗೂ ಒಂದು ತಿಂಗಳ ಒಳಗಾಗಿ ಅನುಮೋದಿತ ಪಟ್ಟಿಯ ಫಲಾನುಭವಿಗಳಿಗೆ ಆಯಾಯ ನಗರ ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ನೀಡಲು ನಿಗಮ ಸೂಚಿಸಲಿದೆ. ಹಾಗೂ ಪ್ರತಿ ಫಲಾನುಭವಿಗಳಿಗೆ ಒಂದು ಬಾರಿ ರೂ.40,000 ಗಳ ನೆರವು ನೀಲಿದ್ದು, ತದನಂತರದಲ್ಲಿ ಪುನರ್ವಸತಿ ಸೌಲಭ್ಯಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಕಲ್ಪಿಸಬೇಕಾಗುತ್ತದೆ ಎಂದರು.
ಸ್ವಯಂ ಉದ್ಯೋಗ ಮಾಡಬಯಸುವ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಹಾಗೂ ಸಬ್ಸಿಡಿ ರೂಪದಲ್ಲಿ ನೆರವು ನೀಡಬೇಕಾಗುತ್ತದೆ. ಬ್ಯಾಂಕ್ ಸಾಲ ಸೌಲಭ್ಯಗಳನ್ನು ನೀಡುವ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್‍ರವರಿಗೆ ಸೂಚಿಸಲಾಗುವುದು ಎಂದರು.
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ ಮಾತನಾಡಿ, ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಜಿಲ್ಲೆಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ ವಿಶೇಷ ಮರು ಸಮೀಕ್ಷೆ ನಡೆಸಲಾಯಿತು. ಮಹಾನಗರಪಾಲಿಕೆ, ಹರಿಹರ ನಗರಸಭೆ, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯತ್‍ಗಳಲ್ಲಿ ವಿವಿಧ ದಿನಾಂಕಗಳನ್ನು ನಿಗದಿಗೊಳಿಸಿ ಸಮೀಕ್ಷೆ ಕ್ಯಾಂಪ್ ನಡೆಸಿ, ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ನಂತರ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ನವದೆಹಲಿಯ ಜಿಲ್ಲಾ ನೋಡಲ್ ಅಧಿಕಾರಿ ಬಾಬುಲಾಲ್ ಇವರು ಸ್ಥಳ ಪರಿಶೀಲನೆ ನಡೆಸಿ ಅರ್ಜಿಗಳನ್ನು ಅಂತಿಮಗೊಳಿಸಿರುತ್ತಾರೆ.
ದಾವಣಗೆರೆ ಮಹಾನಗರಪಾಲಿಕೆಯಲ್ಲಿ 346 ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 101 ತಿರಸ್ಕøತಗೊಳಿಸಲಾಗಿದೆ ಹಾಗೂ 245 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ಹರಿಹರ ನಗರಸಭೆಯಿಂದ 86 ಅರ್ಜಿ ಸ್ವೀಕರಿಸಿ, 08 ತಿರಸ್ಕøತ ಮತ್ತು 78 ಅಂಗೀಕರಿಸಲಾಗಿದೆ. ಚನ್ನಗಿರಿ ಪುರಸಭೆಯಲ್ಲಿ 49 ಅರ್ಜಿ ಸ್ವೀಕೃತ, 08 ತಿರಸ್ಕøತ ಮತ್ತು 41 ಅಂಗೀಕರಿಸಲಾಗಿದೆ.
ಮಲೆಬೆನ್ನೂರು ಪುರಸಭೆಯ 03 ಅರ್ಜಿ ಸ್ವೀಕರಿಸಿ ಅಂಗೀಕರಿಸಲಾಗಿದೆ. ಜಗಳೂರು ಪಟ್ಟಣ ಪಂಚಾಯ್ತಿಯಲ್ಲಿ 13 ಅರ್ಜಿ ಸ್ವೀಕರಿಸಿ ಅಂಗೀಕರಿಸಲಾಗಿದೆ. ಒಟ್ಟು 497 ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದ ನಂತರ 117 ಅರ್ಜಿನ್ನು ತಿರಸ್ಕರಿಸಿ 380 ಅರ್ಜಿಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಿದ ನಂತರ ಫಾಲೋಅಪ್ ಮಾಡಿ ಆದಷ್ಟು ಬೇಗ ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ಗೆ ಸೌಲಭ್ಯ ಸಿಗುವಂತೆ ಸಹಕರಿಸಬೇಕೆಂದರು.
ನಜ್ಮಾ ಪ್ರತಿಕ್ರಿಯಿಸಿ ಇನ್ನು ಎರಡು ದಿನಗಳ ಒಳಗೆ 380 ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಪಟ್ಟಿಯನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ದಿ ನಿಗಮ, ನವದೆಹಲಿ ಇಲ್ಲಿಗೆ ಕಳುಹಿಸಿಕೊಟ್ಟು ಫಾಲೋಅಪ್ ಮಾಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ, ಮಹಾನಗರಪಾಲಿಕೆ ಉಪ ಆಯುಕ್ತ ಗದಗೀಶ್ ಸಿರ್ಸಿ, ಡಿಹೆಚ್‍ಓ ರಾಘವೇಂದ್ರಸ್ವಾಮಿ, ಚನ್ನಗಿರಿ ಮತ್ತು ಮಲೆಬೆನ್ನೂರು ಪುರಸಭೆ, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಶಂಕರ್, ವಾಸುದೇವ, ಮಂಜಮ್ಮ, ಬಸವರಾಜ್ ಸೇರಿದಂತೆ ಸಂಘದ ಇತರೆ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








