ಸಮುದಾಯ ಭವನ ಹಾಗೂ ಸ್ನಾನ ಗೃಹ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ:ಡಿ.ಸಿ

ಹೊನ್ನಾಳಿ:

        ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ, ಸಮುದಾಯ ಭವನ ಹಾಗೂ ಸ್ನಾನ ಗೃಹ ನಿರ್ಮಾಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಭಕ್ತರಿಗೆ, ಯಾತ್ರಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲರೂ ಆಸ್ಥೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೌತಮ್ ಬಗಾದಿ ಹೇಳಿದರು.

        ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮದ ಕೆಲವರು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಬಳಿಕ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

         ಒಟ್ಟು 49.95 ಲಕ್ಷ ರೂ.ಗಳ ವೆಚ್ಚದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಿಸಲಾಗಿದ್ದು, ಮೇಲ್ನೋಟಕ್ಕೆ ಅವ್ಯವಹಾರ ನಡೆದಿಲ್ಲ ಎಂದು ತಿಳಿದುಬಂದಿದೆ. ಸಮುದಾಯ ಭವನ ನಿರ್ಮಾಣ ಕಾಮಗಾರಿಯೂ ತೃಪ್ತಿಕರವಾಗಿದೆ. ಅಡುಗೆ ಮನೆಯ ಪಕ್ಕದಲ್ಲೇ ಶೌಚಾಲಯ ಇರುವುದು ಸರಿಯಲ್ಲ. ಹಾಗಾಗಿ, ಸಮುದಾಯ ಭವನದ ಅಡುಗೆ ಮನೆ ಬಳಿ ಇದ್ದ ಶೌಚಾಲಯ ಸ್ಥಳಾಂತರಿಸಲು ಕ್ರಮ ಜರುಗಿಸಿರುವುದು ಸಮರ್ಪಕವಾಗಿದೆ.

        ಸೂಕ್ತ ಸ್ಥಳ ಗುರುತಿಸಿ ಬೇರೆಡೆ ಶೌಚ-ಸ್ನಾನ ಗೃಹ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಅನುಷ್ಠಾನಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಶೀಘ್ರವೇ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದರೆ ಸಭೆ ನಡೆಸಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.

         ರಾಜಗೋಪುರ, ಸಮುದಾಯ ಭವನ ಕಾಮಗಾರಿಗಳ ಬಗ್ಗೆ ಥರ್ಡ್ ಪಾರ್ಟಿ ಇನ್ಸ್‍ಸ್ಪೆಕ್ಷನ್ ನಡೆಸಿ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ರಾಜಗೋಪುರ, ಸಮುದಾಯ ಭವನ ಹಾಗೂ ಸ್ನಾನ ಗೃಹ ನಿರ್ಮಾಣ ಕಾಮಗಾರಿಗಳಿಗೆ ತಗಲುವ ಅಂದಾಜು ವೆಚ್ಚದ ಬಗ್ಗೆ ಯೋಜನೆ ತಯಾರಿಸಬೇಕು. ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

         ತನಿಖೆಯ ನಂತರ ಒಂದು ವೇಳೆ ಎಂಬಿ ಪ್ರಕಾರ ಕೆಲಸ ನಿರ್ವಹಿಸಿ ಹಣ ಪಡೆದಿದ್ದರೆ ಅದು ಅವ್ಯವಹಾರ ಅಲ್ಲ. ಒಂದು ವೇಳೆ ಕೆಲಸ ನಿರ್ವಹಿಸದೇ ಹೆಚ್ಚಿನ ಪ್ರಮಾಣದ ಬಿಲ್ ಪಡೆದಿದ್ದರೆ ಅದು ಅವ್ಯವಹಾರವಾಗುತ್ತದೆ. ಹಾಗಾಗಿ, ಯಾರೂ ಅನಗತ್ಯವಾಗಿ, ಅನವಶ್ಯಕವಾಗಿ ಸರಕಾರದ ಮತ್ತು ಜನಹಿತದ ಕಾಮಗಾರಿಗಳಿಗೆ ಅಡ್ಡಿಪಡಿಸಬಾರದು. 80 ಲಕ್ಷ ರೂ.ಗಳ ವೆಚ್ಚದಲ್ಲಿ ಸುಂಕದಕಟ್ಟೆ ಗ್ರಾಮದ ಸಮುದಾಯ ಭವನ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಗೆ ಕೆಲವರು ಅಡ್ಡಿಪಡಿಸಿದ್ದಾರೆ ಎಂಬ ಮಾಹಿತಿ ಇದೆ.

       ಯಾರೂ ಕಾಮಗಾರಿಗೆ ಅಡ್ಡಿಪಡಿಸಬಾರದು. ಸರಕಾರಿ ಕಾಮಗಾರಿಗಳಿಗೆ ಅಡ್ಡಿಪಡಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ತನಿಖೆ ನಡೆಸಿ ಕಳಪೆ ಆಗಿದ್ದು ಕಂಡುಬಂದರೆ ಅಂಥವರಿಗೆ ಹಣ ನೀಡುವುದಿಲ್ಲ. ಅಲ್ಲದೇ ಅಂಥವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ. ಆದ್ದರಿಂದ, ಎಲ್ಲರೂ ಸಹಕಾರ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.

      ಲೋಕಾಯುಕ್ತ ಉಪ ನಿಬಂಧಕ ವಿಜಯ್‍ಕುಮಾರ್ ಮಾತನಾಡಿ, ನಾವು ಈಗಾಗಲೇ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ರಾಜಗೋಪುರ, ಸಮುದಾಯ ಭವನ ಹಾಗೂ ಶೌಚ-ಸ್ನಾನ ಗೃಹ ನಿರ್ಮಾಣ ಕಾಮಗಾರಿಗಳ ಬಗ್ಗೆ ಕೇಳಿಬಂದಿರುವ ದೂರುಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ್ದೇವೆ. ಕಾಮಗಾರಿ ತೃಪ್ತಿಕರವಾಗಿದೆ. ಈ ಕುರಿತಂತೆಯೂ ದೂರುದಾರರು ಸೇರಿದಂತೆ ಎಲ್ಲಾ ಮುಖಂಡರೊಂದಿಗೆ ಚರ್ಚಿಸಿದ್ದೇವೆ. ಕಾಮಗಾರಿಗಳು ಅನುಷ್ಠಾನಗೊಳ್ಳಲು ಎಲ್ಲರೂ ಸಹಕಾರ ನೀಡಿದರೆ ಒಳಿತಾಗುತ್ತದೆ.

        ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಭಕ್ತರಿಗೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.ಲೋಕಾಯುಕ್ತ ಡಿವೈಎಸ್‍ಪಿ ಪುರುಷೋತ್ತಮ್, ತಹಸೀಲ್ದಾರ್ ಎಂ. ಬಸವರಾಜ್, ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ದೇವರಾಜ್, ರಾಜಸ್ವ ನಿರೀಕ್ಷಕ ಜಿ. ಜಯರಾಮ್, ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಜಿ. ಮಹಾದೇವಪ್ಪ, ಎಂ.ವಿ. ಸಜ್ಜನಶೆಟ್ಟರ್, ಶಶಿಧರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುನಾಥ್ ಕಪಾಳಿ, ಸುಂಕದಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಎಚ್. ನರಸಪ್ಪ, ಎಲ್ಲಾ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap