ಗಾಜಿನಮನೆ ಹೆಸರಿನಲ್ಲಿ ಪರಸ್ಪರ ಕೆಸರು ಎರೆಚಾಟ

ದಾವಣಗೆರೆ:

      ನಗರದ ಹೊರ ವಲಯದ ಕುಂದುವಾಡ ರಸ್ತೆಯಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆಗೆ, ಮಹಾನಗರ ಪಾಲಿಕೆ ಶಾಮನೂರು ಗ್ಲಾಸ್‍ಹೌಸ್ ಎಂಬುದಾಗಿ ನಾಮಕರಣ ಮಾಡಲು ತೀರ್ಮಾನಿಸಿರುವುದು ರಾಜಕೀಯ ಪಕ್ಷಗಳ ಪರಸ್ಪರ ಕೆಸರು ಎರೆಚಾಟಕ್ಕೆ ಕಾರಣವಾಗಿದೆ.

      ಹೌದು… ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಾಜಿನ ಮನೆಗೆ ಶಾಮನೂರು ಹೆಸರು ನಾಮಕರಣ ಮಾಡಲು ಕಾಂಗ್ರೆಸ್ ಸದಸ್ಯರು ತೀರ್ಮಾನಿಸಿದ್ದರು. ಇದಕ್ಕೆ ಬಿಜೆಪಿಯ ಡಿ.ಕೆ.ಕುಮಾರ್ ಹಾಗೂ ಸಿಪಿಐನ ಹೆಚ್.ಜಿ.ಉಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸಭೆಯಲ್ಲಿ ಹಾಜರಿದ್ದ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸದೇ ಮೌನ ವಹಿಸಿದ್ದರು.

        ಸಭೆಯ ತೀರ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಠಿ ನಡೆಸಿ, ಗಾಜಿನಮನೆಗೆ ಶಾಮನೂರು ಹೆಸರು ನಾಮಕರಣ ಮಾಡವ ಪಾಲಿಕೆಯ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿ, ಹಿಂದೆ ಚನ್ನಗಿರಿಯ ಕ್ರೀಡಾಂಗಣಕ್ಕೆ ಅಂದಿನ ಶಾಸಕ ಮಾಡಾಳು ವಿರೂಪಾಕ್ಷಪ್ಪನವರ ಹೆಸರು ನಾಮಕರಣ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‍ನ ವಡ್ನಾಳ್ ರಾಜಣ್ಣ ಕಾನೂನು ಹೋರಾಟ ನಡೆಸಿದ್ದರ ಪರಿಣಾಮ ಹೈಕೋರ್ಟ್ ಯಾವುದೇ ಜೀವಂತ ವ್ಯಕ್ತಿಯ ಹೆಸರನ್ನು ಸಾರ್ವಜನಿಕ ಸ್ಥಳಗಳಿಗೆ ಹಾಗೂ ಕಟ್ಟಡಗಳಿಗೆ ಇಡಬಾರು ಎಂಬುದಾಗಿ ತೀರ್ಪು ನೀಡಿದೆ.

     ಆದರೂ ಪಾಲಿಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವನ್ನು ಮೆಚ್ಚಿಸಲಿಕ್ಕಾಗಿ ಗಾಜಿನ ಮನೆಗೆ ಶಾಮನೂರು ಹೆಸರು ನಾಮಕರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಕಾನೂನು ಹೋರಾಟ ನಡೆಸಿಯಾದರೂ ಇದನ್ನು ತಡೆದೇ ತೀರುತ್ತೇವೆ ಎಂದು ಪಾಲಿಕೆಯ ವಿರುದ್ಧ ಗುಡುಗಿದ್ದರು.

      ಇದಲ್ಲದೇ, ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಬಿಜೆಪಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್ ಎಲ್ಲದಕ್ಕೂ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಎಂಬುದಾಗಿ ಹೆಸರು ಇಡುವ ಬದಲು, ದಾವಣಗೆರೆಯ ಹೆಸರನ್ನೇ ಶಾಮನೂರು ಎಂಬುದಾಗಿ ಮಾಡಿಬಿಡಿ ಎಂಬುದಾಗಿ ಅಸಮಾಧಾನ ಹೊರ ಹಾಕಿದ್ದರು.

      ಈ ಎಲ್ಲದರ ಹಿನ್ನೆಲೆಯಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿ ನಡೆಸಿ, ಶಾಮನೂರು ಎಂಬುದು ಯಾವುದೋ ಒಬ್ಬ ವ್ಯಕ್ತಿಯ ಹೆಸರಲ್ಲ. ಗಾಜಿನ ಮನೆ ನಿರ್ಮಾಣವಾಗಿರುವ ಜಾಗವು ಶಾಮನೂರು ಗ್ರಾಮದ ಸರ್ವೇ ನಂಬರ್‍ನಲ್ಲಿರುವುದರಿಂದ ಆ ಗ್ಲಾಸ್‍ಹೌಸ್‍ಗೆ ಶಾಮನೂರು ಎಂಬುದಾಗಿ ಹೆಸರು ಇಡಲು ಪಾಲಿಕೆ ನಿರ್ಧರಿಸಿದೆ ಎಂಬುದಾಗಿ ಸಮರ್ಥಿಸಿಕೊಂಡಿದ್ದರು.

        ಪಾಲಿಕೆಯ ತೀರ್ಮಾನಕ್ಕೆ ಶಾಮನೂರು ಗ್ರಾಮಸ್ಥರು ಸ್ವಾಗತಿಸಿದ್ದರು. ಆದರೆ, ಗಾಜಿನ ಮನೆಯಿಂದ ಕೂಗಳತೆ ದೂರದಲ್ಲಿರುವ ಕುಂದುವಾಡ ಗ್ರಾಮಸ್ಥರು ಗ್ಲಾಸ್‍ಹೌಸ್‍ಗೆ ಶಾಮನೂರು ಹೆಸರು ಇಡಲು ನಮ್ಮ ವಿರೋಧವಿದೆ. ಅದು ಕುಂದುವಾಡ ಕೆರೆಯ ಬಳಿಯಲ್ಲೇ ಇರುವುದರಿಂದ ಆ ಗಾಜಿನ ಮನೆಗೆ ನಮ್ಮೂರಿನ ಹೆಸರು ಇಡಬೇಕು. ಇಲ್ಲವೇ ಮಹಾತ್ಮರ, ದಾರ್ಶನಿಕರ ಹೆಸರು ಇಡಬೇಕೆಂಬುದಾಗಿ ಆಗ್ರಹಿಸಿ ಪ್ರತಿಭಟನೆಯು ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

       ಗಾಜಿನ ಮನೆಗೆ ಶಾಮನೂರು ಹೆಸರು ಇಡಲು ಮುಂದಾಗಿರುವ ಪಾಲಿಕೆಯ ನಿರ್ಧಾರದಿಂದಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗಳ ಮಧ್ಯೆ ಪರಸ್ಪರ ಕೆಸರು ಎರೆಚಾಟಕ್ಕೆ ಕಾರಣವಾಗಿದೆ. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನೂ ಸಹ ಹುಟ್ಟು ಹಾಕಿದೆ. ಹೀಗಾಗಿ ಗಾಜಿನ ಮನೆಗೆ ಶಾಮನೂರು ಹೆಸರೇ ಫಿಕ್ಸೋ, ಇಲ್ಲವೋ ಬೇರೆ ಹೆಸರು ಬರಲಿದೆಯೋ ಎಂಬ ಕುತೂಹಲ ನಾಗರೀಕರಲ್ಲಿ ಕೆರಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap