ಸ್ಮಾರ್ಟ್ ಸಿಟಿ ಕಾಮಗಾರಿಯ ಮೊದಲ ಬಲಿ

  ತುಮಕೂರು

ವಿಶೇಷ ವರದಿ: ರಾಕೇಶ್ ಕೆ

    ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ತುಮಕೂರು ನಗರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಈಗಾಗಲೇ ಕೆಲವೊಂದು ಕಾಮಗಾರಿಗಳು ಪೂರ್ಣಗೊಂಡಿವೆ. ಅದರಲ್ಲಿ ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್ ಪ್ರದೇಶವೂ ಒಂದಾಗಿದ್ದು, ಸ್ಮಾರ್ಟ್ ಸಿಟಿಗೆ ಕಳಂಕವಾಗಿ ಮೊದಲ ಬಲಿಯಾಗಿದೆ.

   ತುಮಕೂರು ವಿಶ್ವ ವಿದ್ಯಾಲಯದಲ್ಲಿರುವ ಮೈದಾನವು ಮಣ್ಣಿನಿಂದ ಕೂಡಿತ್ತು. ಅಲ್ಲಿ ಹೆಲಿಕಾಪ್ಟರ್ ಬಂದರೆ ಧೂಳು ಏಳುತ್ತಿತ್ತು. ಮಳೆ ಬಂದರೆ ನೀರು ನಿಲ್ಲುತ್ತಿತ್ತು. ಇದನ್ನು ಗಮನಿಸಿದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅದರ ಅಭಿವೃದ್ಧಿಗೆ ಮುಂದಾಗಿ, ಬರೊಬ್ಬರಿ 61 ಲಕ್ಷ ವೆಚ್ಚ ಮಾಡಿದ್ದರು. ಸಂಜೆ ವೇಳೆ ಸಾರ್ವಜನಿಕರು ವಾಕಿಂಗ್‍ಗಾಗಿ ಆಗಮಿಸುತ್ತಾರೆ. ಅವರಿಗೆ ಓಡಾಡಲೆಂದು ಫುಟ್‍ಪಾತ್ ವ್ಯವಸ್ಥೆ ಮಾಡಿದ್ದರು. ಮೈದಾನದ ಸುತ್ತಲು ಇರುವ ಮರಗಳ ಬಳಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಬೆಂಚ್ ವ್ಯವಸ್ಥೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಸೆಲ್ಫಿವಾಲ್, ಕುಟಿರ ನಿರ್ಮಾಣ ಸೇರಿದಂತೆ ಮುಂತಾದ ಆಕರ್ಷಣೀಯ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದರ ನಿರ್ವಹಣೆ ಇಲ್ಲದೆ ಇಂದು ವ್ಯರ್ಥವಾಗಿದೆ

61 ಲಕ್ಷ ವೆಚ್ಚದ ಕಾಮಗಾರಿ ವ್ಯರ್ಥ

 

     ಕಳೆದ ವರ್ಷ ಫೆಬ್ರುವರಿ ತಿಂಗಳ ಕೊನೆಯಲ್ಲಿ ಪ್ರಾರಂಭ ಮಾಡಲಾದ ಈ ಕಾಮಗಾರಿ ಏಳು ತಿಂಗಳುಗಳ ಕಾಲ ನಡೆದಿದ್ದು, ಸೆಪ್ಟಂಬರ್ ತಿಂಗಳಾತ್ಯದಲ್ಲಿ ಪೂರ್ಣಗೊಂಡಿತ್ತು. ಒಟ್ಟು 61 ಲಕ್ಷ ರೂಪಾಯಿ ವೆಚ್ಚ ಮಾಡಿ ಈ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಮೈದಾನದ ಸುತ್ತ ಫುಟ್‍ಪಾತ್ ವ್ಯವಸ್ಥೆ, ಅಲ್ಲಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಸಂಜೆ ವೇಳೆ ಆಕರ್ಷಣೀಯವಾಗಿ ಕಾಣಲು ನವೀನ ಮಾದರಿಯ ಬಣ್ಣಬಣ್ಣದ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರ ಅದರ ನಿರ್ವಹಣೆ ಸರಿಯಾಗಿಲ್ಲದಿರುವುದಕ್ಕೆ ವಿವಿಯಲ್ಲಿ ಮಾಡಿದ್ದ ಕಾಮಗಾರಿ ವ್ಯರ್ಥವಾಗಿರುವುದೇ ಸಾಕ್ಷಿಯಾಗಿದೆ.

ಮುರಿದ ಕುಟಿರದ ಹೆಂಚುಗಳು

      ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಕಿಂಗ್ ಎಂದು ಬರುವವರು ಹಾಗೂ ವೃದ್ಧರು ಮಾತುಕತೆ ನಡೆಸಲು ಚೆಸ್‍ಬೋರ್ಡ್ ಮಾದರಿಯಲ್ಲಿ ಸಣ್ಣದಾದ ಕುಟಿರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲಿ ಸ್ವಚ್ಛ ಮಾಡುವವರು ಇಲ್ಲವಾಗಿದ್ದು, ಧೂಳಿನಿಂದ ಆವೃತವಾಗಿದ್ದು, ಅಲ್ಲಿ ಕುಳಿತುಕೊಳ್ಳಲು ಸಾರ್ವಜನಿಕರು ಹಿಂಜರಿಯುತ್ತಿದ್ದಾರೆ. ಅಲ್ಲದೆ ಕುಟಿರದ ಮೇಲ್ಭಾಗದಲ್ಲಿ ಹಾಕಲಾಗಿದ್ದ ಹೆಂಚುಗಳು ನಾಲ್ಕು ಮೂಲೆಗಳಲ್ಲಿ ಮುರಿದು ಬಿದ್ದಿವೆ.

ಕಾಣೆಯಾದ ಲೈಟಿಂಗ್ ವ್ಯವಸ್ಥೆ

       ಉದ್ಯಾನವನದ ರೀತಿಯಲ್ಲಿ ಅಭಿವೃದ್ಧಿ ಮಾಡಲಾದ ಈ ಸ್ಥಳದಲ್ಲಿ ಸಂಜೆ ವೇಳೆ ರಂಗು ರಂಗಿನ ವಿದ್ಯುತ್ ಬಲ್ಬ್‍ಗಳು ಮನರಂಜನೆ ನೀಡುತ್ತಿದ್ದವು. ಹೆಲಿಪ್ಯಾಡ್‍ನ ಒಂದು ಬದಿಯಲ್ಲಿ ಸುಮಾರು 40 ಬಲ್ಬ್‍ಗಳನ್ನು ಇಡಲಾಗಿದ್ದು, ಇವುಗಳು ವಿವಿಧ ಬಣ್ಣಗಳ ಬೆಳಕನ್ನು ಹೊರಸೂಸುತ್ತಿದ್ದವು. ನೋಡುಗರ ಮನಸ್ಸಿಗೆ ಸಂಜೆ ವೇಳೆ ಇದು ಸಂತಸ ನೀಡುತ್ತಿತ್ತು. ಆದರೆ ಇಂದು ಅವುಗಳು ಕಾಣೆಯಾಗಿದ್ದು, ಬೆಳಕಿನ ಸೌಲಭ್ಯವೇ ಇಲ್ಲದಾಗಿದೆ. ಅಲ್ಲದೆ ಹಾಕಲಾಗಿದ್ದ 40 ಬಲ್ಬ್‍ಗಳಲ್ಲಿ 25ಕ್ಕೂ ಹೆಚ್ಚು ಬಲ್ಬ್‍ಗಳು ಕಾಣೆಯಾಗಿವೆ. ಆರಂಭದಲ್ಲಿದ್ದ ಬೆಳಕಿನ ವ್ಯವಸ್ಥೆ ಇದೀಗ ಕಾಣೆಯಾಗಿದ್ದು, ಸಂಪೂರ್ಣ ಕತ್ತಲೆ ಕೋಣೆಯಂತಾಗಿದೆ.

ಸೆಕ್ಯುರಿಟಿ ಇಲ್ಲ.

       ತುಮಕೂರು ವಿವಿಗೆ ಸಂಬಂಧಿಸಿದಂತೆ 8 ಜನ ಸೆಕ್ಯುರಿಟಿ ಗಾರ್ಡ್‍ಗಳು ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ಮುಖ್ಯದ್ವಾರದಲ್ಲಿ ಮೂವರು, ಕುಲಪತಿಗಳ ಚೇಂಬರ್ ಮುಂದೆ ಒಬ್ಬರು, ಅತಿಥಿಗೃಹದ ಬಳಿ ಒಬ್ಬರು, ಹಾಸ್ಟೆಲ್ ಬಳಿ ಒಬ್ಬರು, ಪರೀಕ್ಷಾಂಗ ವಿಭಾಗದ ಬಳಿ ಒಬ್ಬರು ಹಾಗೂ ಸೂಪರ್‍ವೈಸರ್ ಒಬ್ಬರು ಸೇರಿ ಎಂಟು ಜನ ಕೆಲಸ ಮಾಡುತ್ತಾರೆ. ಆದರೆ ಈ ಹೆಲಿಪ್ಯಾಡ್ ಬಳಿಯಲ್ಲಿ ಯಾರೂ ಇರುವುದೇ ಇಲ್ಲ. ಪಕ್ಕದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದ ಹಾರಿ ಬಂದರೂ ಇಲ್ಲಿ ಗೊತ್ತಾಗುವುದಿಲ್ಲ.

ಕಳ್ಳರ ಕಾಟ..!

       ಹೆಲಿಪ್ಯಾಡ್ ಪ್ರದೇಶದಲ್ಲಿ ಕಾಲೇಜಿನ ಸಮಯ ಹೊರತು ಪಡಿಸಿ ಸಂಜೆ ವೇಳೆ 6 ಗಂಟೆಯಿಂದ 8.30ರ ವರೆಗೆ ಪ್ರವೇಶಕ್ಕೆ ಸಮಯಾವಕಾಶ ಇದ್ದು, ರಾತ್ರಿ 8.30ರ ನಂತರ ಒಳಗಡೆ ಪ್ರವೇಶ ನಿರ್ಭಂದಿಸಲಾಗಿದೆ. ಆದರೆ ಕ್ರೀಡಾಂಗಣ ಬಳಿಯಲ್ಲಿ ಅಡ್ಡಲಾಗಿ ಹಾಕಿರುವ ಗ್ರಿಲ್‍ನ ಮೇಲೆಯಿಂದ ಜಿಗಿದು ಬರಬಹುದು. ರಾತ್ರಿ ವೇಳೆ ಕಳ್ಳರ ಕಾಟ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಹಾಕಲಾದ ಬಲ್ಬ್‍ಗಳು ಕಳ್ಳಕ ಕೈಚಳಕ್ಕೆ ಬಲಿಯಾಗಿವೆ ಎಂಬ ಅನುಮಾನ ಮೂಡುತ್ತಿದೆ.

ನಿರ್ವಹಣೆ ಜವಾಬ್ದಾರಿ…?

        ಹೆಲಿಪ್ಯಾಡ್ ಅಭಿವೃದ್ಧಿಯ ನಂತರ ಅದರ ನಿರ್ವಹಣೆಯ ಜವಾಬ್ಧಾರಿಯನ್ನು ತುಮಕೂರು ವಿವಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಆ ಕಾರ್ಯ ಇಲ್ಲಿಯ ವರೆಗೆ ಆಗಿಲ್ಲ. ಈ ಕಾಮಗಾರಿ ಮುಗಿದು ಬರೊಬ್ಬರಿ 11 ತಿಂಗಳಾದರೂ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಿವಿಗೆ ಹಸ್ತಾಂತರಿಸಿಲ್ಲ. ಮುಂದಿನ ತಿಂಗಳಂತ್ಯದೊಳಗೆ ಜವಾಬ್ದಾರಿ ತುಮಕೂರು ವಿವಿಗೆ ಹಸ್ತಾಂತರ ಮಾಡಲು ತಯಾರಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಸ್ವಚ್ಛತೆಯ ಮರೀಚಿಕೆ

      ಸೆಲ್ಪೀ ವಾಲ್ ಎಂದು ನಿರ್ಮಾಣ ಮಾಡಲಾಗಿದ್ದು, ಅದು ಸಂಪೂರ್ಣ ಕಸದಿಂದ ಕೂಡಿಕೊಂಡಿದೆ. ಅಲ್ಲಿ ನಡೆದಾಡಲು ಎಂದು ಮಾಡಲಾದ ಫುಟ್‍ಪಾಥ್ ಸುತ್ತಲೂ ಕಸವು ತುಂಬಿಕೊಂಡಿದೆ. ಜೊತೆಗೆ ಕಸ ಶೇಖರಣೆಗೆಂದು ಅಳವಡಿಸಲಾದ ತೂಗು ಬುಟ್ಟಿಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಇದರಿಂದ ವಾಕಿಂಗ್ ಮಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

      ದಿನನಿತ್ಯ ಸಂಜೆ ವೇಳೆ ವಾಕಿಂಗ್ ಮಾಡಲೆಂದು ಬರುತ್ತೇವೆ. ಈ ಪ್ರದೇಶ ಅಭಿವೃದ್ಧಿ ಪಡಿಸಿದ ಕೆಲ ದಿನಗಳ ಕಾಲ ಮನಸ್ಸಿಗೆ ಸಂತಸವಾಗುತ್ತಿತ್ತು. ಸುತ್ತಲೂ ರಂಗುರಂಗಿನ ಬಲ್ಬ್‍ಗಳಿಂದ ಕಂಗೊಳಿಸುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಯಾವುದೇ ಬಲ್ಬ್ ಬೆಳಗುತ್ತಿಲ್ಲ. ಸಂಜೆ ಕತ್ತಲಾಗುತ್ತಿದ್ದಂತೆ ಇಲ್ಲಿ ಏನೂ ಕಾಣುವುದೇ ಇಲ್ಲ. 7 ಗಂಟೆಯ ನಂತರ ಇಲ್ಲಿ ಓಡಾಡುವುದೇ ತುಂಬಾ ಕಷ್ಟಕರವಾಗಿದೆ. ಇದನ್ನು ನಿರ್ವಹಣೆ ಮಾಡುವವರು ಜವಾಬ್ದಾರಿ ವಹಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ವರಲಕ್ಷ್ಮೀ , ಸಾರ್ವಜನಿಕರು

       ಕಳೆದ 1 ತಿಂಗಳಿಗೂ ಹೆಚ್ಚು ದಿನಗಳಿಂದಲೂ ಇಲ್ಲಿ ಯಾವುದೇ ಬಲ್ಬ್‍ಗಳು ಬೆಳಗುತ್ತಿಲ್ಲ. ಈ ಮುಂಚೆ ಸಂಜೆಯಾಗುತ್ತಲೇ ಒಬ್ಬರು ಎಲ್ಲಾ ಬಲ್ಬ್‍ಗಳನ್ನು ಆನ್ ಮಾಡುತ್ತಿದ್ದರು. ಇದೀಗ ಹಾಕಲಾದ ಬಲ್ಬ್‍ಗಳು ಕಾಣೆಯಾಗಿವೆ. ಸಾಕಷ್ಟು ಬಲ್ಬ್‍ಗಳು ಇಲ್ಲವೇ ಇಲ್ಲ. ಇಲ್ಲಿ ಸೆಕ್ಯುರಿಟಿ ಯಾರೂ ಇರುವುದಿಲ್ಲ. ಕತ್ತಲಾದಂತೆ ಯಾರೂ ಇಲ್ಲಿಗೆ ಬರುವುದೇ ಇಲ್ಲ. ಅದರ ನಿರ್ವಹಣೆ ಮಾಡುವವರು ಯಾರು ಎಂಬುದು ತಿಳಿಯುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಾಡಲಾದ ಕಾಮಗಾರಿಗಳು ಈ ರೀತಿ ವ್ಯರ್ಥವಾಗುವುದಾದರೆ ಸ್ಮಾರ್ಟ್ ಸಿಟಿ ಮಾಡುವುದಾದರೂ ಏನಕ್ಕೆ..?

ರಾಮಚಂದ್ರಪ್ಪ, ನಿವೃತ್ತ ನೌಕರರು

        ವಿವಿಯಲ್ಲಿನ ಹೆಲಿಪ್ಯಾಡ್ ಸುತ್ತ ಉದ್ಯಾನವನದ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವುದು ಬೆಂಗಳೂರು ಮೂಲಕ ಎ1 ಕನ್ಸ್‍ಟ್ರಕ್ಷನ್ ಕಂಪನಿಯವರು. ಕಾಮಗಾರಿ ಪೂರ್ಣಗೊಂಡ ನಂತರದಿಂದ ಒಂದು ವರ್ಷದವರೆಗೆ ಅವರದ್ದೇ ನಿರ್ವಹಣೆ ಜವಾಬ್ದಾರಿಯಾಗಿರುತ್ತದೆ. ಅಲ್ಲಿ ಯಾವುದೇ ವಸ್ತುಗಳು ಮುರಿದರೂ ಅದನ್ನು ಮರು ನಿರ್ಮಾಣ ಮಾಡುವ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ತೊಡಕುಗಳು ಕಂಡು ಬಂದರೂ ಅದನ್ನು ಗುತ್ತಿಗೆದಾರರೇ ಮಾಡಿಕೊಡಬೇಕು. ಅದಕ್ಕಾಗಿ ಬಿಲ್‍ನಲ್ಲಿ 55ಲಕ್ಷ ಮಾತ್ರ ನೀಡಲಾಗಿದ್ದು, ಉಳಿದ 6 ಲಕ್ಷ ಹಣವನ್ನು ಸ್ಮಾರ್ಟ್ ಸಿಟಿ ಕಂಪನಿಯಲ್ಲಿಯೇ ಇಟ್ಟುಕೊಳ್ಳಲಾಗಿದೆ. ಅದಾದ ನಂತರ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಲಾಗುತ್ತದೆ.

ವಿನಯ್, ಸಹಾಯಕ ಕಾರ್ಯಪಾಲಕ ಅಭಿಯಂತರರು.

        ಒಂದು ವರ್ಷದ ವರೆಗೆ ಕಂಟ್ರಾಕ್ಟರ್ ಜವಾಬ್ದಾರಿ ಇದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಅಳವಡಿಸಲು ಎಚ್ಚರಿಕೆ ನೀಡಲಾಗಿತ್ತು. ಈಗಲೂ ಕೂಡ ಅಲ್ಲಿನ ಲೋಪದೋಷಗಳನ್ನು ಸರಿಪಡಿಸಲು ತಿಳಿಸಲಾಗಿದೆ. ನಾವು ಕೂಡ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ.

ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಸಿಇಒ

Recent Articles

spot_img

Related Stories

Share via
Copy link
Powered by Social Snap