ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯವಲ್ಲ, ಜೀವ ಉಳಿಸಿಕೊಳ್ಳುವುದು ಮುಖ್ಯ : ಮುಹಮ್ಮದ್ ಯೂಸೂಫ್

ಬೆಂಗಳೂರು:

       ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಾಜ್ ಮಾಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಚಿಸುವ ನಿಯಮವನ್ನು ಆದೇಶವನ್ನು ಮುಸ್ಲಿಂ‌ಮ್ ಸಮುದಾಯದ ಬಾಂಧವರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಮುಹಮ್ಮದ್ ಯೂಸೂಫ್ ಕರೆ ನೀಡಿದ್ದಾರೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಜಾನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವಾಗ ಜನ ಸೇರುವುದು ಬೇಡ. ಸಾಮೂಹಿಕವಾಗಿ ಸೇರಿ ಸಮಾಜಕ್ಕೆ ಅನಾಹುತ ಸೃಷ್ಟಿಸುವುದು ಬೇಡ. ಪ್ರಸಕ್ತ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬರೀ ಮುಸ್ಲಿಂ ಸಮುದಾಯದವರಿಗಷ್ಟೇ ಸಹಾಯ ಮಾಡದೇ ಇತರೆ ಸಮುದಾಯಗಳಿಗೂ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಸಲಹೆ ನೀಡಿದರು.

     ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ನಾಲ್ಕರಿಂದ ಐದು ಜನ ಮಾತ್ರ ಮಸೀದಿಯಲ್ಲಿ ಇರಬೇಕು. ಧ್ವನಿವರ್ಧಕ ಅಳವಡಿಸುವುದು ಬೇಡ. ಮೇ 3 ವರೆಗೂ ಇದು ಅನ್ವಯ ಆಗಲಿದೆ ಎಂದು ಮುಹಮ್ಮದ್ ಯೂಸುಫ್ ಹೇಳಿದರು.

     ವಕ್ಫ್‌ಬೋರ್ಡ್ ಕಾರ್ಯದರ್ಶಿ ಇಬ್ರಾಹಿಂ ಮಾತನಾಡಿ, ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮಸೀದಿಯಲ್ಲಿ ಮೈಕ್ ಬಳಸಬಹುದು. ನಾಲ್ಕು ಬಾರಿ ಮಾತ್ರ ಘೋಷಣೆ ಕೂಗಲು ಅವಕಾಶವಿದೆ. ಆದರೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಸೂಚಿಸಿದರು.

      ರಾಜ್ಯದಿಂದ ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಗೆ 698 ತಬ್ಲಿಘ್‌ಗಳು ಹೋಗಿದ್ದಾರೆ. ಎಲ್ಲರೂ ತಪಾಸಣೆ ಗೆ ಹೋಗಿದ್ದಾರೆ‌. ನಿಜಾಮುದ್ದೀನ್ ಸಭೆಗೆ ಹೋಗಿ ಬಂದವರಿಗೆ 8 ಮಂದಿಗೆ ಮಾತ್ರ ಪಾಸಿಟಿವ್ ಬಂದಿದೆ. ಉಳಿದೆಲ್ಲರಿಗೂ ನೆಗಟಿವ್ ಬಂದಿದೆ. ತಪ್ಪು ಸಂದೇಶ ರವಾನೆ ಮಾಡಬೇಡಿ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ಭೇದ ಭಾವ ಬೇಡ ಎಂದರು.

     ಮೇ 3 ಬಳಿಕ ಸರ್ಕಾರದ ನಿರ್ಧಾರ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ತಬ್ಲಿಘ್ ಜಮಾತ್ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಬೇಡಿ. 2015ರಲ್ಲಿ ನಿಜಾಮುದ್ದಿನ್ ವಿಭಾಗವಾಗಿದೆ. ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಮಾವೇಶ ಮಾಡಿದ್ದರೋ ಅವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ನಮ್ಮ ರಾಜ್ಯ ಸರ್ಕಾರಕ್ಕೂ ಅದಕ್ಕೂ ಸಂಬಂಧ ಇಲ್ಲ. ದೆಹಲಿ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಯೂಸುಫ್ ಹೇಳಿದರು.

     ಈ ಬಾರಿ ರಂಜಾನ್ ತಿಂಗಳಲ್ಲಿ ಮಸೀದಿಗೆ ಹೋಗುವಂತೆ ಇಲ್ಲ. ಸಾಮೂಹಿಕ ಪ್ರಾರ್ಥನೆ ಮಾಡುವಂತೆ ಇಲ್ಲ. ಇಫ್ತಾರ್ ಕೂಟ ಆಯೋಜಿಸುವಂತೆ ಇಲ್ಲ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧರ್ಮ ಗುರುಗಳು ಒಪ್ಪಿಕೊಂಡಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link