ಇಂದಿನಿಂದ ಮೀನುಗಾರಿಕೆ ನಿಷೇಧ ..!!

ಮಂಗಳೂರು :

   ಈ ಸಾಲಿನ ಮೀನುಗಾರಿಕೆ ಋತು ಇಂದಿಗೆ ಅಂತ್ಯಗೊಂಡಿದ್ದು, ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರರಿಗೆ ವಿರಾಮ. ಈ ಅವಧಿಯಲ್ಲಿ ಸಮುದ್ರ ಮೀನುಗಾರಿಕೆ ನಿಷೇಧ ಹೇರಲಾಗಿದೆ.

    ಕರಾವಳಿಯಲ್ಲಿ ಈ ವರ್ಷ ಒಟ್ಟು 3,166 ಕೋಟಿ ರೂ. ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ ಕುಸಿದು, ಸುಮಾರು 70 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ಋತುವಿನಲ್ಲಿ 3,236.99 ಕೋಟಿ ರೂ. ಮೌಲ್ಯದ 2,92,061 ಟನ್ ಮೀನು ಹಿಡಿಯಲಾಗಿತ್ತು. ಹೆಚ್ಚು ಬೇಡಿಕೆಯಿಲ್ಲದ ಒಂದೇ ಜಾತಿಯ ಮೀನು ಲಭ್ಯವಾಗಿರುವುದು ಮತ್ತು ವಿವಿಧ ಕಾರಣಗಳಿಗೆ ದೋಣಿಗಳು ಸಮುದ್ರಕ್ಕಿಳಿಯಲು ಸಾಧ್ಯವಾಗದಿರುವುದು ಆದಾಯ ಕುಸಿತಕ್ಕೆ ಕಾರಣ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ಆರೇಳು ತಿಂಗಳಿನಿಂದ ಹವಾಮಾನ ವೈಪರೀತ್ಯ, ಮೀನುಗಾರರ ನಾಪತ್ತೆ ಪ್ರಕರಣ, ಲೈಟ್ ಫಿಶ್ಶಿಂಗ್ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆ ಪರಿಣಾಮ ಆಳಸಮುದ್ರ ಮತ್ತು ಪರ್ಸೀನ್ ಮೀನುಗಾರಿಕೆ ಸಂಪೂರ್ಣ ನಷ್ಟ ಅನುಭವಿಸಿದೆ. ಇನ್ನೂ ಡೀಸೆಲ್ ಬೆಲೆ ಏರಿಕೆ ಮೀನುಗಾಋಇಗೆ ದೊಡ್ಡ ಪೆಟ್ಟು ನೀಡಿದೆ. ಈ ಋತುವಿನಲ್ಲಿ ಬಂಗುಡೆ, ಬೂತಾಯಿ, ಕೊಡ್ಡಾಯಿ, ಅಂಜಲ್ ದೊರೆತಿರುವುದು ಕಡಿಮೆ. ಕಪ್ಪು ಬಣ್ಣದ ಕ್ಲಾಟಿ ಮೀನು ಸಿಕ್ಕಿದ್ದೇ ಹೆಚ್ಚು. ಜತೆಗೆ ಮದ್ಮಾಲ್ ಮೀನು ಸಿಕ್ಕಿವೆ ಎನ್ನುತ್ತಾರೆ ಮೀನುಗಾರರು.

ಜುಲೈ 31ರವರೆಗೆ ನಿಷೇಧ:

        ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ 61 ದಿನ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಬಲೆ, ಸಾಧನಗಳನ್ನು ಉಪಯೋಗಿಸಿ, ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆ ಚಟುವಟಿಕೆ ನಿಷೇಧಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap