ಟ್ರಾಫಿಕ್ ನಿಯಮ ಪಾಲಿಸಿ-ಎಸ್.ಪಿ.ಪರಶುರಾಮ

ಹಾವೇರಿ

        ಜನರಿಗೆ ರಸ್ತೆ ನಿಯಮಗಳ ಬಗ್ಗೆ ಜ್ಞಾನವಿಲ್ಲ, ಸಂಚಾರಿ ನಿಯಮಗಳನ್ನು ಗೌರವಿಸುತ್ತಿಲ್ಲ. ಈ ಕಾರಣಗಳಿಗಾಗಿ ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದ 1.47 ಲಕ್ಷ ಮರಣಹೊಂದುತ್ತಿದ್ದಾರೆ 4.70 ಲಕ್ಷ ಜನ ಅಪಘಾತದಿಂದ ಗಾಯಗೊಂಡು ಅಂಗವಿಕಲತೆಯಿಂದ ಅಶಕ್ತರಾಗುತ್ತಿದ್ದಾರೆ. ಇದರಿಂದ ದೇಶದ ಪ್ರಗತಿ ಕುಂಟಿತವಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಹೇಳಿದರು.

         ಸೋಮವಾರ ನಗರದ ಜಿಲ್ಲಾ ಗುರುಭವನದಲ್ಲಿ ಹಾವೇರಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಾವೇರಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಕಳೆದ ವರ್ಷ 270 ಜನ ಮರಣಹೊಂದಿದ್ದಾರೆ. ಪ್ರತಿ ವರ್ಷ ರಸ್ತೆ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಮಹಾಯುದ್ಧದ ಸಂದರ್ಭದಲ್ಲಿ ಮರಣಹೊಂದಿದವರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಹೇಳಿದರು.

          ಕೆಲವರಿಗೆ ರಸ್ತೆ ಸಂಚಾರ ನಿಯಮಗಳ ಜ್ಞಾನವಿಲ್ಲ ಹಾಗೂ ಕಾನೂನುಗಳನ್ನು ಗೌರವಿಸುತ್ತಿಲ್ಲ. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

           ರಸ್ತೆ ಸಂಚಾರ ನಿಯಮಗಳನ್ನು ಹಾಗೂ ನಮ್ಮ ಕಾನೂನುಗಳನ್ನು ಕಠಿಣವಾಗಿ ಪಾಲಿಸಬೇಕು. ಈ ನಿಟ್ಟಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.ರಸ್ತೆ ನಿಯಮಗಳನ್ನು ಉಲ್ಲಂಘಿಸದವರಿಂದ ದಂಡದ ಹಣ ಪಡೆಯುತ್ತಿರುವಾಗ ಕೆಲವರು ನೈಜತೆಯನ್ನು ಮರೆಮಾಚಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ “ಪೊಲೀಸ್‍ರಿಂದ ಲಂಚ ಸ್ವೀಕಾರ” ಎಂದು ಹರಿಬಿಡುವ ಮೂಲಕ ಸಾಮಾಜಕ್ಕೆ ತಪ್ಪು ಕಲ್ಪನೆ ಹರಡುತ್ತಾರೆ. ಇದರಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮನಸ್ಥಿತಿಯನ್ನು ಕುಗ್ಗಿಸಲಾಗುತ್ತಿದೆ. ಇದು ವಿಷಾಧಕರ ಸಂಗತಿ ಎಂದು ಹೇಳಿದರು.

            ದ್ವಿಚಕ್ರವಾಹನ ಚಾಲಕರ ಪೈಕಿ ಶೇ.10 ರಷ್ಟು ಜನ ಮಾತ್ರ ಹೆಲ್ಮೆಟ್ ಧರಿಸಿದರೆ ಶೇ.90 ರಷ್ಟು ಜನ ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯ ಸುಧಾರಣೆ ಕಷ್ಟಸಾಧ್ಯ. ಸಾರ್ವಜನಿಕರು ನಿಯಮಗಳ ಪಾಲನೆ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕು. ಸಮಗ್ರ ಬದಲಾವಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ರಸ್ತೆ ಉಬ್ಬುಗಳನ್ನು ನಿರ್ಮಿಸುವಾಗ ನಿಯಮಾನುಸಾರ ಸೈನ್ ಬೋರ್ಡ್‍ಗಳನ್ನು ಅಳವಡಿಸಬೇಕು. ಅನಗತ್ಯವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಬಾರದು.

            ವಾಹನ ಓಡಿಸುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಅತೀ ವೇಗ ದುರಂತವನ್ನು ತಂದೊಡ್ಡುತ್ತವೆ. ಅಕಾಲಿಕ ಮರಣ ಕುಟುಂಬ ಮತ್ತು ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ಬೆಳವಣಿಗೆಗೆ ಕುಂಟಿತವಾಗುತ್ತದೆ. ಈ ಎಲ್ಲ ಅಂಶಗಳನ್ನು ಅರ್ಥಮಾಡಿಕೊಂಡು ಸಂಚಾರಿ ನಿಯಮಗಳ ಮೂಲಕ ಸುರಕ್ಷಿತ ಜೀವನ, ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಮುಂದಾಗಬೇಕೆಂದು ಕರೆ ನೀಡಿದರು.

             ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಎ.ಜಗದೀಶ್ ಅವರು ಮಾತನಾಡಿ, ರಾಜ್ಯದಲ್ಲಿ ಪ್ರತಿ ವರ್ಷ 42 ಸಾವಿರ ಜನ ರಸ್ತೆ ಅಪಘಾತಗಳಲ್ಲಿ ಮರಣಹೊಂದಿದರೆ 52,961 ಜನ ಗಾಯಗೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿ 10 ನಿಮಿಷಕ್ಕೆ 3 ಜನ ಮರಣಹೊಂದುತ್ತಿದ್ದಾರೆ. ಮೋಟರ್ ಸೈಕಲ್ ಚಾಲಕರು ಹಾಗೂ ಪಾದಚಾರಿಗಳು ರಸ್ತೆ ಅವಘಡಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ಜೀವನವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

            ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿ, ರಸ್ತೆ ಸಂಚಾರಿ ನಿಯಮಗಳನ್ನು ಪ್ರಾಥಮಿಕ ಹಂತದಲ್ಲಿ ತಿಳಿಸಿದರೆ ಒಳ್ಳೆಯದು. ಶಿಕ್ಷಕರು ಈ ಕೆಲಸವನ್ನು ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಮಾತು ಕೇಳುತ್ತಾರೆ ಅದೇ ರೀತಿ ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

             ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್ ಎಲ್ ಅವರು ಮಾತನಾಡಿ, ಮನಸಾಕ್ಷಿ ಮೊದಲು ಕಾನೂನು. ಹಾಗಾಗಿ ನಮ್ಮ ಮನಸಾಕ್ಷಿ ಮಾತು ಹಾಗೂ ತಂದೆ-ತಾಯಿಗಳ ಮಾತು ಕೇಳಬೇಕು. ವೇಗವಾಗಿ ವಾಹನ ಚಾಲನೆ ಮಾಡಿದಲ್ಲಿ ಅಪಘಾತಗಳು ಸಂಭವಿಸಬಹುದು. ವಾಹನ ಚಾಲನೆ ಪರವಾನಿಗೆ ಇಲ್ಲದೆ ವಾಹನ ಚಾಲನೆ ಅಪರಧಾವಾಗಿದೆ. ರಸ್ತೆಗಳ ಸ್ಥಿತಿಗತಿ ನೋಡಿಕೊಂಡು 60 ರಿಂದ 70 ಕಿ.ಮೀ.ವೇಗದಲ್ಲಿ ವಾಹನ ಚಾಲನೆ ಮಾಡಬೇಕು ಎಂದು ಹೇಳಿದರು.

             ಪಿ.ಆರ್.ದೇಸಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ವೈ.ಎಸ್.ಪಿ.ಕುಮಾರಪ್ಪ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಇತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣಾಧಿಕಾರಿ ಇಚ್ಚಂಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಾಥಾ: ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಂದ ಜಿಲ್ಲಾ ಗುರುಭವನದ ವರೆಗೆ ಸಂಚಾರಿ ನಿಯಮಗಳ ಜಾಗೃತಿಗಾಗಿ ಸ್ಕೌಟ್ ಮತ್ತು ಗೈಡ್ ಬೆಟಾಲಿಯನ್‍ನಿಂದ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಚಾಲನೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link