ತುಮಕೂರು:
ನಗರದ ಭದ್ರಮ್ಮ ಸರ್ಕಲ್‍ನಿಂದ ಎಸ್.ಎಸ್.ಪುರಂ ಕಡೆಗೆ ಹೋಗುವ ಮಾರ್ಗಮಧ್ಯೆ ಫ್ಲೈಓವರ್ ಬರುತ್ತದೆ. ಇದರ ಕೆಳಗೆ ಸಾಕಷ್ಟು ಅಂಗಡಿಗಳು ಮೇಲೆದ್ದಿದ್ದವು. ಮೇಲ್ಸೇತುವೆ ಕೆಳ ಭಾಗದಲ್ಲಿದ್ದ ಪೆಟ್ಟಿ ಅಂಗಡಿಗಳನ್ನು ಶನಿವಾರದಂದು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಫ್ಲೈವ್ ಓವರ್ ಕೆಳಗೆ ಹೂವಿನ ಗಿಡಗಳನ್ನು ಹಾಕುವ ಹಾಗೂ ಅದನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಗಳು ಆರಂಭಗೊಳ್ಳುತ್ತಿವೆ. ಇದರಲ್ಲದೆ, ಈ ಭಾಗದಲ್ಲಿ ಅಂಗಡಿಗಳಿಂದ ಸಂಚಾರಕ್ಕೆ ಅಡಚಣೆ, ಪರವಾನಗಿ ಪಡೆಯದೆ ಅಂಗಡಿಗಳನ್ನು ಇಟ್ಟುಕೊಂಡಿರುವುದು ಇವೆಲ್ಲವನ್ನೂ ಪರಿಗಣಿಸಿ ತೆರವುಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದ್ದು ಅಲ್ಲಿದ್ದ ಅಂಗಡಿಗಳು ಅಷ್ಟೂ ಈಗ ಖಾಲಿಯಾಗಿವೆ.
ತುಮಕೂರು ನಗರದ ಹಲವು ಬಡಾವಣೆಗಳು ಹಾಗೂ ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಭದ್ರಮ್ಮ ವೃತ್ತದಿಂದ ಹಿಡಿದು ಡಿಡಿಪಿಐ ಕಚೇರಿ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆವರೆಗೂ ಕಾಮಗಾರಿಗಳನ್ನು ಆರಂಭಿಸಿ ರಸ್ತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈಗಾಗಲೇ ಯೋಜನೆಗಳು ರೂಪುಗೊಂಡಿವೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ನೇತೃತ್ವದಲ್ಲಿ ಸಭೆ ನಡೆದು ಸಭೆಯ ತೀರ್ಮಾನದಂತೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.